ಪರದೆಯೊಳು ಪರಿಪಕ್ವ
ವಾಗುವುದು ಕಷ್ಟವೆಂದು
ಪರಿಧಿಯಾಚೆ ಜಿಗಿಯಲೆಣಿಸುತ್ತಿದೆ
ಭಾವ ಪ್ರಪಂಚ
ಸ್ತ್ರೀ ಲಾಂಚನಗಳು
ಬಣ್ಣ ಕಳೆದುಕೊಳ್ಳುತ್ತಿವೆ
ತಾಳಿ ಕಾಲುಂಗುರ ಪರ್ಮಿಟ್ಟುಗಳು
ಪೆಟ್ಟಿಗೆ ಸೇರುವ ಕಾಲ ಸನ್ನಿಹಿತವಾಗುತ್ತಿದೆ
ಸೀಮಾತೀತ ಪರಿಕಲ್ಪನೆಯ
ವ್ಯಾಪ್ತಿ ಹೆಚ್ಚಿದಂತೆಲ್ಲ
ಗೋಡೆಯೊಳಗಿನ ಸಣ್ಣ ದನಿಯೂ
ಕೂಡ ಈಗೀಗ ಅಷ್ಟೇ ಹರಿತ
ರಕ್ಷೆ ನೆಪದಲ್ಲಿ ಶಿಕ್ಷೆ ನೀಡುವ
ಪರಿಪಾಟಕ್ಕೆ ಹಾಕಬೇಕಿದೆ ಪೂರ್ಣವಿರಾಮ
ಸಮಬಾಳು ಸಮಪಾಲು ತತ್ವ
ಸರಳ ಸೃಷ್ಟಿಯ ನಿಯಮ ಸಹನೀಯ
ಕಾಲು ದಾರಿಯ ಕ್ರಮಿಸಿ
ಹೆದ್ದಾರಿಗೇರುತ್ತಿವೆ ಹೊಸ ಹೆಜ್ಜೆಗಳು
ಆಗಾಗ ಭಾರವೆನಿಸಿದರೂ
ಹೊಸ ಹೊಸ ಹೆಜ್ಜೆಗಳು
ಸಹ ಪಯಣಕ್ಕೆ ಸಜ್ಜಾಗುತ್ತಿವೆ
ಕಾಯಕಲ್ಪಕ್ಕಾಗಿ ಕಾಯುತ್ತಿವೆ
ಹೆಜ್ಜೆ ಗುರುತಿಗಾಗಿ
*****