ಬಗೆ ಬಗೆಯ ಬಯಕೆಗಳು
ಕಾಡದೇ ಇರಲಿಲ್ಲ
ಆದರೂ ನೇಚ್ಯ ನೀನೆಂದು
ಆಸೆ ಭರಣಿಗೆ ಮುಚ್ಚಳವ ಬಿಗಿದೆ

ಗೋರಿ ವಾಕ್ಯದ ಕೆತ್ತುವುದೆಂತು
ಮತ್ತೆ ಮತ್ತೆ ಮತ್ತು ಬರಿಸುವ ಚೈತನ್ಯ
ಸದ್ದಿಲ್ಲದೇ ಆವಾಹನ
ಹರೆಯದಲಿ ಹುಡುಗತನದಲಿ
ಹಾದಿ ವಿಪ್ಲವಗಳ ಮರೆತು
ಸೇತುವೆಯಾಗ ಬಯಸಿದೆ
ಒಂಟಿಗಂಭವಾಗುವುದ ಬಿಟ್ಟು

ಆದರೆ ಅತ್ತ ದರಿ ಇತ್ತ ಪುಲಿ
ಸ್ಥಿತ್ಯಂತರ ಸಾಧ್ಯವಾಗದೇ ತ್ರಿಶಂಕುವಾದೆ
ಸವಾಲು ಹಾಕದೆ ಸದ್ದಿಲ್ಲದೇ
ಸರಿಯಬಿಟ್ಟೆ

ಹದಿನಾರಾಣೆಯ ನ್ಯಾಯ
ಹುಡುಕಿದೆ, ಅಸಂಭವ ಎನಿಸಿ
ಸರಳ ರೇಖೆಯಾಗಿಬಿಟ್ಟೆ,
ಇನ್ನೊಂದನ್ನು ಸಂಧಿಸುವ
ಆಸೆ – ರಂಗೋಲಿಯಡಿಯಿಟ್ಟು

ಹಸಿದ ನಿನ್ನ ತೋಳುಗಳಿಗೆಲ್ಲಿ
ಮೇಲೆತ್ತುವ ದರ್ಪ
ಎತ್ತಿಕೊಂಡರೆ ಜೋಕೆ
ಸುತ್ತಿಕೊಳ್ಳಲು ಕಾದಿದೆ
ನಂಜೂರುವ ಸರ್ಪ