ಬೇವು ವಿಷವಾದೊಡೆ ಅದರ ನೆರಳು ವಿಷವೇ ?
ಮಾವು ರುಚಿಯಾದೊಡೇನದರ ನೆರಳು ರುಚಿಯೇ ?
ಕೀಳು ಹೊಲೆಯನೆನಲು ಹಿರಿಮೆಗೆ ಸಾವೇ ?
ಸಿರಿವ ಸಿರಿಯಾದೊಡೇ ಶೀಲದಲಿ ಸಿರಿಯೇ ?

ತಿನಲಾಗದು ಬಲುಕೀಳು ಹುಲ್ಲೆನಲು ಸಲ್ಲುವದೇ ?
ಬಿಡಲಾಗದು ಸಿಹಿ ಕಬ್ಬೆನಲದನೆ ಮೆಲಬಹುದೇ ?
ಹೊಲೆಯ ಹೊಲಸೆನಲು ಮಿಗಿದೆಲ್ಲ ಹಸನವಹುದೇ?
ಶ್ರೇಷ್ಟ ಕುಲಜರಿರಲು ಮಾನವ ಕರುಳ ಕಾಣಲರಿಯನೇ ?

ಕೆಸರೊಳುದಿಸಿದ ಕಮಲ ಸಲ್ಲದೇ ಆ ಈಶ್ವರಗೆ ?
ನಿಲುಕದಾಕಾಶ ಮಲ್ಲಿಗೆ ಏಸು ಲೇಸಾದರೆ ಏಕೆ ?
ಹೊಲೆಯ ಕೀಳೆನಲು ಮಾನವತೆಗೆ ಹೊರಗೆ ?
ಮರುಗದಾ ಅದಾವ ದೊರೆಯಾದೊಡೆ ಬೇಕೆ ಜಗಕ್ಕೆ ?

ಕೇರಿ ಹೊಲೆಯನಲು ಹೊಲೆಯನಾ ಹರಯಾರು ?
ಒಳ್ಳೆಯವರು ನಾವೆನಲು ನಮ್ಮನುದಿಸಿದವನಾರು ?
ಅವನಿಗಾರು ? ಎಮಗಾರು? ದೇವನೋ ನೂರಾರು ?
ಅರಿಯುವಾ ಮರೆಯದೇ ನಾವೆಲ ಮಾನವರು
*****