ನಿಮ್ಮ ಪತ್ರ ಬಂದು ಸೇರಿ
ಎರಡು ಮೂರು ಬಾರಿಯೋದಿ
ಎಲ್ಲ ತಿಳಿದೆನು.

ನೀವು ನನಗೆ ಗಂಡನಲ್ಲ
ನಾನು ನಿಮಗೆ ಹೆಂಡಿರಲ್ಲ
ನೀವು ತಿಳಿವುದು.

ಕುಂಟು ಕಾಲು ಬಚ್ಚು ಬಾಯಿ
ಮೆಳ್ಳುಗಣ್ಣು, ನಿಮ್ಮ ಸೇವೆ
ಮಾಡಲಾರೆನು.

ಬ್ರಹ್ಮ ಹಿಂದೆ ಗಂಟು ಹಾಕಿ
ಗಂಡಹೆಂಡಿರಾದವೆಂದು
ನೀವು ಬರೆವಿರಿ.

ಬ್ರಹ್ಮಗಿಮ್ಮ ಹಾಕಲಿಲ್ಲ
ಅಪ್ಪ ತಂದು ನನಗೆ ನಿಮಗೆ
ಗಂಟುಹಾಕಿದ.

ಹೆತ್ತ ತಂದೆ ಮಾರಿಕೊಂಡು
ಮೃತ್ಯುವಾಗಿ ಕೊಲ್ಲಲಿಂತು
ಮಾಡಲೇನಿದೆ.

ಶಾಸ್ತ್ರ ಗೀಸ್ತ್ರ ತಿಳಿಯೆ ನಾನು
ಬರೆದ ಜನರು ಹೆಂಡಿರಾಗಿ
ಸೇವೆಮಾಡಲಿ.

ನೋಟ ಬೇಟ ಗಂಡಿಗೆಂದು
ಧರ್ಮಶಾಸ್ತ್ರ ಹೆಣ್ಣಿಗೆಂದು
ನುಡಿವರೆಲ್ಲರು.

ಕೋರ್ಟು ಗೀರ್ಟು ಆಡಬೇಡಿ
ಜಡ್ಜಿ ಧರ್ಮವೇನು ಬಲ್ಲ
ನಾನು ತಿಳಿಸುವೆ.

ಕುರ್ಚಿ ಮೇಲೆ ಕುಳಿತುಕೊಂಡು
ಏನೋ ಗೀಚಿ ಎದ್ದು ಬರುವ
ಮಾತಿದಲ್ಲವು.

ತನ್ನ ಮಗಳ ನಿಮಗೆ ಕೊಟ್ಟು
ತನ್ನ ಮಗನ ಎನಗೆ ಕೊಟ್ಟು
ಮದುವೆ ಮಾಡಲಿ.

ಎನ್ನ ದುಃಖ ಆರಿಗುಂಟು
ಬಾಳಬೇಕು, ಬಾಳಲಾರೆ
ಹಾಳು ಲೋಕವು.

ಬಯ್ವ ಜನರು ಜರಿವ ಜನರು
ಅವರಿಗೇನು, ಬಾಯಿ ಕೊಬ್ಬು
ನೋವು ತೆಗೆವರೆ?

ಬಲ್ಲೆನವರ ಮನದ ಭಾವ
ಇಂದು ನಾನು ಸೂಳೆಯಾಗೆ
ಸುಖಿಸರೆಲ್ಲರು.

ಭೂಮಿ ಮೇಲೆ ಇರುವಳಲ್ಲ
ಇಂದೆ ನಾನು ಕೆರೆಗೆ ಬಿದ್ದು
ಜನ್ಮ ನೀಗುವೆ.

ಶಾಸ್ತ್ರ ಧರ್ಮ ತಣ್ಣಗಾಗಿ
ಬಯ್ವ ಜನರು ಉರಿದು ಹೋಗಿ
ಲೋಕವಡಗಲಿ.
*****