Home / ಕವನ / ಕವಿತೆ / ನೆನಪುಗಳಿವೆ… ಕೊಳ್ಳಿ!

ನೆನಪುಗಳಿವೆ… ಕೊಳ್ಳಿ!

ಪೆರ್‍ಲಾಜ್ಜ… ನೆಟ್ಟ ಆಲದ ಮರದಲಿ,
ಮೊಮ್ಮಕ್ಳು ಮರಕೋತಿ ಆಡಿದ್ದು ನೆನಪು.
ಮರಿ ಮಗಾ ಬುಗುರಿ ಕೆತ್ತಿ, ದಾರ ಸುತ್ತಿ,
‘ಗುಯ್’…ಽಽ ಎಂದು,
ಊರುಕೇರಿ ಆಲಿಸುವಂತೆ,
‘ಗುಯ್’ ಗುಟ್ಟಿಸಿದ್ದ!
ಆಕ್ಷಣ: ಏನೆಲ್ಲ ಮರೆತು,
ಬಾಲ್ಯಕೆ ಜಾರಿದ ಜನ!
ಅರಳಿ ನೆರಳಿಗೆ,
ತೊಟ್ಟಿಲ ಕಟ್ಟಿ,
ಅಳುವಾಕಂದಮ್ಮಗಳ ಹಾಕಿ…
ಕರುಳ ಬಳ್ಳಿಯ ಹಾಡು, ನಿತ್ಯ ತೂಗುತ್ತಿತು!

ಅರಳಿ ಮರದ ಕತೆ, ಆಳೆತ್ತರ ಹಬ್ಬಿ…
ಮರ ಮರದಾ ರಂಬೆ, ಕೊಂಬೆಗೆಲ್ಲ…
ಹದ್ದು, ಕಾಗೆ, ಹಾಳಾಗದ್ದ, ಗುಬ್ಬಿ, ಪಾರಿವಾಳ,
ಗಿಡುಗ, ಗಿಳಿ, ಬೆಳವಗಳೂ ಹಿಂಡು… ಹಿಂಡು!
ನಿತ್ಯ ಚಿಲಿಪಿಲಿಯ ಸುಪ್ರಭಾತ ಮುದದೀ ಕೇಳುತ್ತಿತ್ತು
ಪಡ್ಡೆ ಹುಡುಗರಿಲ್ಲಿ ಗೋಲಿ, ಗೆಜ್ಜುಗವಾಡಿ,
ನೆರಳ ಆಶ್ರಯಿಸಿ ಬಂದ್ವರಿಲ್ಲಿ…
ಚಿನ್ನಿದಾಂಡು, ಲಗೋರಿ, ಕಣ್ಣಾಮುಚ್ಚಾಲೆಯಾಟವಿಲ್ಲಿ!
ಊರುಕೇರಿ ಜಗಳ ಬಗೆಹರಿದು,
ಸಾಕ್ಷಿ ಮರವಾಗಿ, ವರವಾಗಿ, ಹಣ್ಣು, ಕಾಯಿ, ತೂಗುತ್ತಿತ್ತು!
ಆಲೆ ಹಣ್ಣಿನಾ ರುಚಿಯು ಬಲು ನೆನೆದರೇನುಂಟು?
ಸಿಹಿ ಸಿಹಿ ನೆನಪುಗಳಿವೆ ಈಗೋಕೊಳ್ಳಿ…
ತಲೆ ತಲೆ ಮಾರಿನ, ಲೆಕ್ಕವೀಗ ಇತಿಹಾಸ!

ಸುತ್ತಳ್ಳೀ ಜನ, ಅರಳಿ ಮರವನ್ನೇ…
ತಲೆದಿಂಬು ಮಾಡಿ
ಗುಡಿ, ಚರ್ಚು, ಮಸೀದಿ ಮನೆ, ಮಠಗಳ ಬಿಟ್ಟು,
ಒಟ್ಟಿಗೆ ಕುಂತು… ಹೊಟ್ಟೆ ತುಂಬಾ… ಮಂಡಾಳುಕಾರ,
ಒಬ್ಬಟ್ಟು, ಮಿರ್ಚಿಭಜೆ, ಕೆನೆಮಸ್ರು, ಖಾರದ ಹಿಂಡಿ,
ಅಕ್ಕಿಬಾನ, ಹುಣೆಸೆತೊಕ್ಕು, ಕೆತ್ತು ತಿಂದು…
ದುಂಡಗೆ ಮಾತಿನಾಮಂಟಪ ಕಟ್ಟಿ,
ಕುಣಿಕುಣಿದಾ ದೀನವೀಗಾ, ಗತ ವೈಭವವಿಲ್ಲಿ!!

ಎಲ್ಲಿ ಹೋದವೋ… ಆ ದಿನಗಳೂ?!
ಬಟ್ಟು, ದಮ್ಮಿಡಿ, ಆಣೆ, ಅರ್ಧಾಣೆ…
ಇನ್ನೆಲ್ಲಿ ಹುಡುಕಲಿನ್ನಾ…ಽಽ ಸೇರು, ಅಚ್ಫೇರು, ಗಿದ್ನಾ, ಪಾವುಗಳನ್ನಾ…
‘ಅಂಥಾ ಮುತ್ತಿನಂಥಾ ಜನಗಳನ್ನಾಽಽ…??’
ಈಗ ಪೆರ್‍ಲಾಜ್ಜನಿಲ್ಲ!… ಮರವಿಲ್ಲ!
ವರವಾಗಿ, ನೆನಪುಗಳಿವೆ ಕೊಳ್ಳಿ…!!
ಹಳ್ಳಿಯೆಂದರೆ: ಕೊಳ್ಳಿ! ಕಳ್ಳಿಯಂಗೆ ಸಿಕ್ಕಿದಂಗೆಲ್ಲ ಹಬ್ಬಿದಾ ಮಳ್ಳಿ!
ಪ್ರಗತಿಯ ಹೆಸರಲಿ:
ಹಸಿರು ಕಡಿದು, ಉಸಿರು ತಡೆದು,
ಬರ ಹಡೆದು, ಸರಣಿ ಸ್ಫೋಟಾ, ಏಡ್ಸ್, ಹಾರ್ಟು, ಸಕ್ಕರೆ, ಬೀಪಿ,-
ಒತ್ತಡಕ್ಕೆ, ಪೀಪಿ ಹರಿದಾಪಾಪಿಗಳಿಲ್ಲಿ.
ಐಟಿ; ಬೀಟಿ, ಆಧುನಿಕರಣದ ಬೇಟೆಗೆ,
‘ಕೊಳ್ಳು ಬಾಕು’ ಸಂಸ್ಕೃತಿಗೆ-
ಗರಗರನೇ, ಗಿರಗಿರನೇ… ತಿರಗುವಾ ‘ಗಿರಗಿಟ್ಟೆ’ಯಾಗಿ,
ಮನೆ ಮನೆಯೆಲ್ಲ…
ಜನಾಮನವೆಲ್ಲ…
ಹಳ್ಳಿ ಹಳ್ಳಿಯೆಲ್ಲ ಖಾಲಿ ಖಾಲಿ…
ಎಲ್ಲೆಲ್ಲೋ… ಆತಂಕದಾ ಸೀಮೆ ಜಾಲಿ…!!
ಊರು ಹಬ್ಬಕೆ- ‘ಮಾರಿ ಹಬ್ಬ’ವ ಮಾಡಿ,
ನಾರಿಯರೆಲ್ಲ… ನಾರು ಮಡೀಲೆ, ಹಸಿರು ತೋರಣ, ಸಿಂಗಾರ ಮಾಡಿ,
ಘಮ ಘಮ ‘ಸಳ್ಳೆಪಲ್ಲೆ’, ಅಕ್ಕಿದಾನ ಉಂಡು-
‘ದಢಮ್ಮ ಧಡಿಕೆ’ಯಾಡಿದ ನೆನಪೀಗ, ಹಾಳು ಹಂಪಿಯಾಗಿದೆ!
ಈ ಊರು ಕೇರಿ,
ಈ ಹಾದಿ ಬೀದಿ,
ಈ ಗಂಡು ಹೆಣ್ಣು,
ಒಟ್ಟಿಗಿದ್ದ ಆ ನಂಟೂ…
ಈಗೆಲ್ಲಿದೆ ಅಂಥಾ ಅಂಟು?!
ಹಾಲಿನಂಥಾ ನಮ್ಮೂರ, ಬೆಳದಿಂಗಳ ಬೆಳಕಲಿ,
ಇರುಳೆಲ್ಲ ‘ಬಗಾಟುಬಗ್ರಿ’ ‘ಪರಂಗಿ ಪೀಪಿ’ ಆಡಿದಾ ಅಂಗಳದಿ,
ಕಾಂಕ್ರಿಟ್ ಗೋಡೆಗಳೆದ್ದು,
ಮೈಯೆಲ್ಲ ತಂತಿ ಬೇಲಿಯಂದದಿ-
ಮೋಬೆಲ್ ಸರಪಳಿಗಳು!!
ಬೋರು ಬೋರಾಡಿ ಅತ್ತರೂ…
ಹೆಣಯೆತ್ತಲು ನಾಲ್ಕು ಜನರಿಲ್ಲ!
ಕೂಗಿ ಬೊಬ್ಬಿಟ್ಟರೂ ಕದ ತೆಗೆದು ‘ಸೊಪ್ಪೆನ್ನು’ವವರಿಲ್ಲ!
ಮನೆ ಮಂದಿಯೆಲ್ಲ, ಮಾಯಾ ಪೆಟ್ಟಿಗೆ ಮುಂದೇಮುಪ್ಪು!!
ಬದುಕೆಲ್ಲ ಮೂರು ಕಣ್ಣಿನಾ ಚಿಪ್ಪು
ಯಾರು ಅಳಲಿಲ್ಲ…?
ಯಾರು ಕೇಳರಿಲ್ಲಿ?!
ಯಾರಿಗೆ ಯಾರು?
ಮೂರು ದಿನದ ಸಂಸಾರ…
ಯಾವ ಪುರುಷಾರ್ಥಕೆ ಈ ಜನರೋ??
ಮನ ಕಲಕಿದೆ!
ದಿನವೆಲ್ಲ…!
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...