ಕಿರಿಕೆಟ್ಟ ಆಟಕ್ಕ ಟೊಕಟೊಕ್ಕ ತೆಲಿಕೆಟ್ಟ
ತಿರಿಗ್ಯಾನ ತಿರುಮಲ್ಲಾ ಹುಚಮಲ್ಲಾ ||ಪಲ್ಲ||

ಛೀಮೂಳಾ ಅಂದಾರ ಇಂಗ್ಲೀಸು ನಕ್ಕಾನ
ಇಂಗ್ಲಂಡು ಹ್ಯಾಟ್ನ್ಯಾಗ ಹೋಕ್ಕಾನ
ಉತ್ತತ್ತಿ ತಿನ್ನಂದ್ರ ತತ್ತೀಯ ತಿಂದಾನ
ಹೊಟ್ಯಾಗ ಕುಕ್ಕುಕ್ಕು ಕುಣಿಸ್ಯಾನ ||೧||

ಕಽಬಡ್ಡಿ ಆಡಂದ್ರ ನೀಬುಡ್ಡಿ ಅಂದಾನ
ಚಂಡೀಗಿ ಚುಂಬನಾ ಒತ್ಯಾನ
ಮಲಗಂಬಾ ತಾವಲ್ಲ ಮಲಕುಸ್ತಿ ಮಣ್ಣೊಲ್ಲ
ತಿರ್ರಂತ ಸಿಗರೇಟು ತಿರುವ್ಯಾನ ||೨||

ರೊಟ್ಟೀಯ ಎತ್ತಾಕ ಸಗತಿಲ್ಲ ಸಣಮಗಗ
ಲ್ಯಾಟ್ರಿನ್ಗೆ ಕಾಮೆಂಟ್ರಿ ಒಯ್ದಾನ
ಕಳ್ಳಾರು ಬಂದಾಗ ಚಡ್ಯಾಗ ಹೊಯ್ದಾನ
ನಾಹೆಣ್ಣು ನನಗಿಂತ ನಡಗ್ಯಾನ ||೩||

ಕೋತಂಬ್ರಿ ಕರಬೇವು ತರಲಾಕ ದುಡುಕೊಟ್ರ
ತಂಬಾಕು ಪಟ್ಟಿಯ ತಿಂದಾನ
ನಳದಾಗ ನೀರಿಲ್ಲ ಕೆರಿನೀರು ತಾರಂದ್ರ
ಹೆಣ್ಹಾಂಗ ಕುಂಡೀಯ ತಿರುವ್ಯಾನ ||೪||

ಟೀವೀಯ ನೋಡ್ತಾನ ಠೀವೀಲಿ ಆಡ್ತಾನ
ಟೀಬೀಯ ಪೇಸೆಂಟು ಆಗ್ಯಾನ
ನಮ್ಮೂರ ಚಲುವೇರ ಚದುರಂಗ ಕೋಲಾಟ
ಕಂಡಾಗ ಕೌಳ್ಹಾರಿ ಬೀಳ್ತಾನ ||೫||
*****