ಇಹಸುಖಕ್ಕೂ ನಾರಿ
ಪರಪ್ರಾಪ್ತಿಗೂ ನಾರಿ
ಸಕಲ ಸಂಪದಕೂ ನಾರಿ
ಕೂಗಿದರೂ ಸಾರಿ ಸಾರಿ
ತಿಳಿದವರು ಬಹಳಂತೆ
ತರತರದ ಕಹಳೆ
ತುದಿ ಮೊದಲು ಅರಿಯದೋಲ್
ಬರಿಯ ಬೊಗಳೆ
ಸ್ನಿಗ್ಧ ಪ್ರೇಮದ ನೆಪ ಮಾಡಿ
ಮುಗ್ಧ ಮನಗಳ ಜೊತೆಯಾಡಿ
ತಳ್ಳುವರು ಒಲವ
ಕೆಂಪು ದೀಪದ ಅಡಿಗೆ
ದೂಡುವರು ಅಬಲೆಯರ
ಸರ್ವನಾಶದ ಕಡೆಗೆ
ಮುದ್ದುಗಂಗಳ ಮುಗ್ಧ ಮುಖಕ್ಕೂ
ನೆತ್ತರನು ತಿಕ್ಕಿ
ಗಣಿಸುವನು ಪಾಪಿ
ಆನಂದವನು ಹೆಕ್ಕಿ
ಗಂಡಲ್ಲನಿವ ತಿಕ್ಕಲು ಭಂಡ
ತೃಷೆಗಿಲ್ಲ ಇವನಲ್ಲಿ
ಲಗಾಮು ದಂಡ
ಪತ್ರಿಕೆಯ ಪುಟಪುಟದಿ
ಶೀಲಹರಣದ ಕಥೆಯು
ಭದ್ರತೆಯ ಕೋಟೆಯಲ್ಲೂ
ಮಾನಹಾನಿಯ ವ್ಯಥೆಯೂ
*****