ಕಲನಾದಿನಿ ಕಾವೇರಿಯ ತೀರದಿ
ತನ್ನನೆ ನೆನೆಯುತಲವನಿದ್ದ;
ತನ್ನ ಬಿಜ್ಜೆ ಕುಲ ಶೀಲ ಸಂಪತ್ತು
ತನ್ನ ರೂಪು ತನ್ನೊಳೆ ಇದ್ದ.

ತನ್ನವರೊಲ್ಲದ ಸರಸತಿ ನವವಧು
ಗಂಡನ ಮಡಿವಾಳಿತಿಯಾಗಿ
ಹಿಂಡುಬಟ್ಟೆಗಳ ಹಿಂಡಲು ಬಂದಳು
ಜವ್ವನದುಲ್ಲಸದೊಳು ತೂಗಿ.

ಕರೆಯೊಳಗಿಬ್ಬರೆ-ಆರೋ ಎನ್ನುತ
ಸೆರಗೆದೆಗೆಳೆವಳು ನಾಚುತಲಿ,
ಬಳಿಕಿವನೇ-ಸರಿ-ಭಯವೇನೆನ್ನುತ
ಹೊಳೆಗಿಳಿವಳು ನಿರ್ಲಕ್ಷ್ಯದಲಿ.

ಬಿಂಕದವನೀತ, ಬಿಂಕದವಳಾಕೆ,
ಮೌನ ನೆರವು ಮನ ಮಾತಾಡೆ;
ಕಣ್ ಕಣ್ ಕೂಟವೆ ಸಾಕಾಯ್ತವರಿಗೆ
ಬೇಟದ ಬಿರುನುಡಿ ಸಿಡಿದಾಡೆ.

“ಆಹಾ ನೀ ಸುಂದರಿ, ದಿಟ, ಆದೊಡೆ
ಮರುಕವ ತರುವುದು ಈ ಚೆಲುವು;
ಇದರಿಂಬಿಗೆ ನಿರ್ಭಾಗ್ಯರ ಮನೆಯೇ?
ಎನ್ನುತ ಸುಯ್ಯುವುದೆನ್ನೊಲವು.”

ಎನಲಾಕೆಯು ತಾತ್ಸಾರದಿ ನುಡಿವಳು:
“ನಿನ್ನ ಮರುಕವಾರಿಗೆ ಬೇಕು!
ಸುಮ್ಮನಿರೈ ನನ್ನಿದಿರೇ ಈ ಹಿಡಿ-
ಹೊನ್ನಳತೆಯ ನೇಹದ ಕಾಕು”

ಎನೆ ಅವನಿಂತೆಂದನು ನಸು ನಾಚುತ:
“ತಪ್ಪು ತಪ್ಪು ನಮ್ಮಪ್ಪನದೊಪ್ಪಿದೆ;
ಹಣಕೂ ಮಿಗಿಲಾಯ್ತಭಿಮಾನ
ಕೇಳಿದ ತಪ್ಪಿಗೆ ಕೊಡೆನೆನ್ನುವ ತ-
ಪ್ಪೀ ಹೋರಾಟದಿ ಸೊಗವೂನ.”

ಸರಸತಿ ಮೌನದೊಳೇ ಮರನುಡಿದಳು:
“ತಪ್ಪೋ ಒಪ್ಪೋ ಸೊಗವೋ ಸುಯ್ಯಲೊ
ನಿನ್ನದು ನಿನಗೆನ್ನದು ನನಗೆ-
ನಿನ್ನವರ ಬಿಂಕಕೆನ್ನೊಲವೆ ಸುಂಕ?
ಪೋ, ಇನ್ನಾ ಮಾತೇಕೆಮಗೆ!

ನಿನ್ನ ರೂಪ ಸಿರಿ ಬಿಚ್ಚೆ ಬಿಗುಮಾನ
ನಿನಗೆಯೆ ಇರಲೇ ಪಿತೃಭಕ್ತಿ-
ಇದೆ ಸಾಕಿದೆಸಾಕಿದೆಸಾಕೆನಗೀ
ಬಡವರ ನೆರವಿನೊಳೇ ಮುಕ್ತಿ.”

ಬಿರುಸಿನೊಳೊಗೆಯುವ ಬಟ್ಟೆಯ ಸದ್ದಿನೊ-
ಳೀ ತೆರ ಬಿರುನುಡಿಗಳ ನುಡಿದು
ಕಜ್ಜ ತೀರೆ ಮೇಲೆದ್ದು ನಡೆದಳು
ರೂಪಶೀಲದಿಂದೆದೆ ಕಡೆದು.

ಹುಸಿಮರುಕದ ಹೊಗೆಯಾರುತಲಾಸೆಯ
ಕಿಡಿಯುರಿದೊಲುಮೆಯ ಬೆಳಕಾಗಿ
ಬಿಂಕವ ಸುಟ್ಟು ನಿರಾಸೆಯ ತೋರಲು
ಎಂತು ಸುಯ್ದನವ ನಿಡಿದಾಗಿ!
*****