ಸುಟ್ಚೆವು ನಾವು ಪ್ರತಿವರ್ಷದಂತೆ
ಈ ವರ್ಷವೂ ಕಾಮ ಕ್ರೋಧಗಳನ್ನು
ಮೊನ್ನೆಯೇ ಕೂಡಿ ಹಾಕಿದ್ದ ಒಣ
ಕಟ್ಟಿಗೆಯ ರಾಸಿಯಲ್ಲಿ

ಕಾಮನೋ ಅದೂ ಕುಂಟೆಕೊರಡು
ಕೋಲುಗಳಿಂದ ಮಾಡಿದ್ದೆ–ಹಳೆ ಅಂಗಿ
ತೊಡಿಸಿ ಕಣ್ಣುಬಾಯಿಗಳನ್ನು
ಬರೆದಿದ್ದೆವು ವಿದೂಷಕನ ಹಾಗೆ

ನಮ್ಮ ಸಕಲ ವಿಕಾರಗಳ ಗಟಿನಂತೆ
ಎತ್ತಿ ಎಸೆದೆವು ಹೊಗೆಯಾಡುವ ಉರಿಯಲ್ಲಿ
(ನಾವದರ ಆಚೀಚೆ ನಿಂತು ಕೂಗಿ)
ಬೂದಿಯಾಗುವ ವರೆಗೆ

ಉತ್ತರೆಯ ಆ ರಾತ್ರಿ ತಿಂಗಳ ಬೆಳಕು
ನಮ್ಮ ಮೇಲೆ ಬಿದ್ದಾಗ
ನಾವು ಹಾಸಿಗೆಯಲ್ಲಿ ಪರಸ್ಪರರನ್ನು
ಸುಡಲು ತಯಾರಾಗಿದ್ದೆವು!

ಮುಂದಿನ ವರ್ಷ ಇದೇ ಬಯಲು
ಇದೇ ಉರುವಲು-ಮಾತ್ರ
ಇದಕ್ಕೂ ಹೆಚ್ಚಿನ ಬೆಂಕಿಯಿದ್ದೀತು
ಇದಕ್ಕೂ ದೊಡ್ಡ ಅಂಗಿ!
*****

Latest posts by ತಿರುಮಲೇಶ್ ಕೆ ವಿ (see all)