ಮನುಷ್ಯ

ಮನುಷ್ಯ

ಮನುಷ್ಯನ ಪಾದ ಮರಳಲ್ಲಿ ಹುದುಗುತ್ತ ಯಾವುದೋ ಪ್ರಾಣಿಯ ಗೊರಸೋ ಅನ್ನುವ ಹಾಗೆ ಆಕಾರವಿರದ ಗುರುತನ್ನು ಉಳಿಸುತಿತ್ತು. ಕಲ್ಲು ಬಂಡೆಗಳನ್ನು ಏರುತಿತ್ತು, ಕಡಿದಾದ ಏರು ಸಿಕ್ಕಾಗ ಒಂದಿಷ್ಟು ಜಾಗದಲ್ಲಿ ಬಲವಾಗಿ ಊರಿ, ಮೇಲೆ ಹತ್ತಿ, ದಿಗಂತದಲ್ಲಿ ದೃಷ್ಟಿ ನೆಟ್ಟು ಸಾಗುತಿತ್ತು.

ಅವನನ್ನು ಹಿಂಬಾಲಿಸುತಿದ್ದವನು ಅಂದ- ‘ಚಪ್ಪಟೆ ಪಾದ. ಒಂದು ಬೆರಳಿಲ್ಲ. ಎಡಗಾಲಿನ ಹೆಬ್ಬೆರಳು ಇಲ್ಲ. ಅಂಥಾವರು ಬಹಳ ಜನ ಇರಲಾರರು. ಹುಡುಕುವುದು ಸುಲಭ.’

ಪೊದೆ, ಜೊಂಡು, ಮುಳ್ಳುಗಳ ನಡುವೆ ದಾರಿ ಮೇಲೇರಿತ್ತು. ಅದು ಇರುವೆಯ ದಾರಿ ಅನ್ನಿಸುವಷ್ಟು ಕಿರಿದಾಗಿತ್ತು. ಎಲ್ಲೂ ಹಿಂದೆ ತಿರುಗದೆ ನೇರ ಆಕಾಶಕ್ಕೆ ಸಾಗಿತ್ತು. ಸ್ವಲ್ಪ ದೂರ ಸಾಗಿ ಮಾಯವಾಗಿ ಇನ್ನೂ ದೂರದ ಆಕಾಶದಲ್ಲಿ ತಿರುಗಿ ಪ್ರತ್ಯಕ್ಷವಾಗುತಿತ್ತು.

ಹೆಜ್ಜೆಗುರುತು ದಾರಿಯೊಂದಿಗೇ ಸಾಗಿದ್ದವು. ಆ ಮನುಷ್ಯ ಗಂಟು ಕಟ್ಟಿದ ಹಿಮ್ಮಡಿಯ ಮೇಲೆ ಭಾರ ಬಿಟ್ಟು ನಡೆಯುತಿದ್ದ. ಬೆರಳು, ತೋಳು ಕಲ್ಲುಗಳಿಗೆ ತರಚಿಕೊಳ್ಳುತಿದ್ದವು. ಒಂದೊಂದು ಕಿರು ದಿಗಂತ ಮುಟ್ಟಿದಾಗ, ಬೆರಳು ಊರಿ ನಿಂತು ಗುರಿ ಮುಟುವಲ್ಲಿ ಎಷ್ಟು ದೂರ ಬಂದಿದ್ದೇನೆ ನೋಡುತಿದ್ದ ‘ನನ್ನದಲ್ಲ, ಅವನದ್ದು’ ಅಂದ. ಯಾರು ಮಾತಾಡಿದ್ದೆಂದು ತಲೆ ತಿರುಗಿಸಿ ನೋಡಿದ.

ಗಾಳಿ ಒಂದು ಕಣದಷ್ಟೂ ಇಲ. ಬರಿಯ ಮುರುಕು ಕೊಂಬೆಗಳಲಿ ಹುಟ್ಟಿದ ಪ್ರತಿಧ್ವನಿ. ದಾರಿ ಗಮನಿಸುವ ದಣಿವು, ಹೆಜ್ಜೆ ಬಗೆಗೆ ಗಮನ, ಹಿಡಿದ ಉಸಿರು. ‘ಎಲ್ಲಿಗೆ ಹೋಗಬೇಕೋ ಅಲ್ಲಿಗೆ ಹೋಗತಾ ಇದೇನೆ,’ ಮತ್ತೆ ಅಂದ. ಮಾತಾಡುತಿರುವುದು ತಾನೇ ಅನ್ನುವುದು ಗೊತ್ತಾಯಿತು.

‘ಇಲ್ಲಿ ಬೆಟ್ಟ ಹತ್ತಿದ. ಮಚ್ಚಿನಲ್ಲಿ ಮರದ ಕೊಂಬೆ ಕಡಿದ. ಗಟ್ಟಿ ಗುಂಡಿಗೆ. ಅದೇ ಅವನನ್ನ ಮುಂದಕ್ಕೆ ಎಳಕೊಂಡು ಹೋಗುತಿದೆ. ಗುಂಡಿಗೇನೇ ಅವನ ಕಥೆ ಮುಗಿಸುತದೆ,’ ಅಂದ ಆ ಮನುಷ್ಯನನ್ನು ಹಿಂಬಾಲಿಸುತಿದ್ದವನು.

ಗಂಟೆಗಳು ದೀರ್ಘವಾಗುತ್ತಾ ದಿಗಂತದಾಚೆಗೆ ಇನ್ನೊಂದು ಮತ್ತೊಂದು ದಿಗಂತ ಕಾಣುತ್ತಾ ಏರುತಿದ್ದ ಬೆಟ್ಟ ಸಾಲು ಮುಗಿಯುವುದೇ ಇಲ್ಲ ಅನ್ನಿಸಿ ಆಸೆ ಕುಗ್ಗಿತು. ಬೇರಿನಷ್ಟೇ ಗಟ್ಟಿಯಾಗಿದ್ದ ಕೊಂಬೆಗಳನ್ನು ಮಚ್ಚಿನಲ್ಲಿ ಕತ್ತರಿಸಿದ; ಬೇರಿನ ಹತ್ತಿರ ಬೆಳೆದ ಹುಲ್ಲು ಕೊಚ್ಚಿದ; ಲೋಳೆ ಲೋಳೆ ಕಫ ಬಂತು. ಸಿಟ್ಟಿನಲ್ಲಿ ನೆಲಕ್ಕೆ ಉಗಿದ. ಹಲ್ಲುಗಳ ಮಧ್ಯೆ ಉಗುಳು ಎಳೆದುಕೊಂಡು ಮತ್ತೆ ಉಗಿದ. ಮೇಲೆ ಆಕಾಶ ಶಾಂತವಾಗಿತ್ತು. ನಿಶ್ಶಬ್ದವಾಗಿತ್ತು. ತೆಳು ಮೋಡಗಳೆ ಹಿನ್ನೆಲೆಯಾಗಿ ಕಲಬಾಶ್ ಮರದ ಎಲೆಯಿಲ್ಲದ ಕಪ್ಪು ಕೊಂಬೆಗಳ ಆಕಾರ ಕಾಣುತಿದ್ದವು. ಎಲೆಗಳ ಕಾಲವಲ್ಲ. ಮುಳ್ಳು, ತರಚು ತೊಗಟೆಗಳ ಶುಷ್ಕತೆಯ ಕಾಲ. ‘ಹೀಗೆ ಮಾಡಿದರೆ ಡ್ಯಾಮೇಜಾಗತ್ತೆ. ಸುಮ್ಮನೆ ಬಿಟ್ಟರೇನೇ ವಾಸಿ.’

ಅವನದೇ ಧ್ವನಿ ಹಿಂದಿನಿಂದ ಕೇಳಿಸಿತು.

‘ಅವನ ಕೋಪವೇ ಅವನ ಪತ್ತೆ ಮಾಡಿಕೊಟ್ಟಿದೆ. ಅವನು ಯಾರೆಂದು ಗೊತ್ತಾಗಿದೆ, ಎಲ್ಲಿದ್ದಾನೆ ಅನ್ನುವುದು ತಿಳಿಯಬೇಕು ಅಷ್ಟೇ. ಅವನು ಹತ್ತಿರದಲ್ಲೇ ಹತ್ತುತೇನೆ, ಇಳಿದಲ್ಲೇ ಇಳಿಯುತೇನೆ, ಅವನು ಸುಸ್ತಾಗುವವರೆಗೆ ಹಿಂಬಾಲಿಸಿ ಹೋಗುತೇನೆ. ನಾನು ಎಲ್ಲಿ ನಿಲ್ಲತೇನೋ ಅಲ್ಲಿರತಾನೆ ಅವನೂ. ನನ್ನ ಕಾಲಿಗೆ ಬಿದ್ದು ಕ್ಷಮಿಸು ಅಂತ ಬೇಡಿಕೊಳ್ಳತಾನೆ. ಅವನ ತಲೆಗೆ ಗುರಿಯಿಟ್ಟು ಗುಂಡು ಹಾರಿಸತೇನೆ…ನೀನು ಸಿಗು ಮಾಡತೇನೆ,’ ಅಂದ ಆ ಮನುಷ್ಯನನ್ನು ಹಿಂಬಾಲಿಸುತಿದ್ದವನು.

ಕೊನೆಗೂ ಅಲ್ಲಿಗೆ ಹೋದ. ಸ್ವಚ್ಛ ಆಕಾಶ ಮಾತ್ರ. ಅರ್ಧ ಭಾಗವನ್ನು ಮೋಡವಿಲ್ಲದ ಇರುಳು ಹುದುಗಿಸಿತ್ತು. ಮತ್ತೊಂದು ಬದಿಯಲ್ಲಿ ಮಣ್ಣು ಕುಸಿದಿತ್ತು. ಕಣ್ಣೆದುರಿಗಿದ್ದ ಮನೆ ನೋಡಿದ. ಆರುತ್ತಿದ್ದ ಒಲೆಯ ಬೆಂಕಿಯಿಂದ ಒಂದಿಷ್ಟು ಹೊಗೆ ಬರುತಿತ್ತು. ಆಗ ತಾನೇ ಅಗೆದು ಮಿದುವಾಗಿದ್ದ ಮಣ್ಣಿಗೆ ಇಳಿದ. ಹೋಗುವ ಆಸೆ ಇಲ್ಲದೆ ಕೈಯಲ್ಲಿದ್ದ ಮಚ್ಚಿನ ಹಿಡಿಕೆಯಿಂದ ಬಾಗಿಲು ತಟ್ಟಿದ. ನಾಯಿ ಓಡಿ ಬಂದು ಮೊಳಕಾಲು ನೆಕ್ಕಿತು. ಇನ್ನೊಂದು ನಾಯಿ ಬಂದು ಬಾಲ ಆಡಿಸುತ್ತ ಅವನ ಸುತ್ತ ಓಡಾಡಿತು. ರಾತ್ರಿಯಾಯೆತೆಂದು ಮುಚ್ಚಿದ್ದ ಬಾಗಿಲನ್ನು ದೂಡಿದ.

ಆ ಮನುಷ್ಯನನ್ನು ಹಿಂಬಾಲಿಸುತಿದ್ದವನು ಹೇಳಿದ- ‘ಕೆಲಸ ಅಚ್ಚುಕಟ್ಟಾಗಿ ಮಾಡಿದ. ಮಲಗಿದ್ದವರನ್ನ ಎಬ್ಬಿಸಿ ಕೂಡ ಎಬ್ಬಿಸಲಿಲ್ಲ. ರಾತ್ರಿ ಒಂದು ಗಂಟೆ ಹೊತ್ತಿಗೆ, ನಿದ್ರೆಯ ಭಾರ ಹೆಚ್ಚಾಗಿ ಕನಸು ಬೀಳುವಾಗ ಬಂದಿರಬೇಕು. ಮೈಯ ದಣಿವು ಅನ್ನುವುದು ಅಪನಂಬಿಕೆಯ ದಾರಗಳನ್ನು ಕಿತ್ತು ಹರಿಯುತ್ತ ಬದುಕು ಇರುಳಿನ ಕೈಗೆ ಜಾರಿಹೋಗಲು ಬಿಡುವ ಹೊತ್ತು…’

‘ಎಲ್ಲರನ್ನೂ ಕೊಲ್ಲಬಾರದಾಗಿತ್ತು, ಎಲ್ಲಾರನ್ನೂ ಕೊಲ್ಲಬಾರದಾಗಿತ್ತು.’ ಅಂದುಕೊಂಡ ಆ ಮನುಷ್ಯ. ಹಾಗಂದ.

ಪೂರಾ ಥಂಡಿ ಗಾಳಿ ತುಂಬಿದ ಮುಂಜಾವಿನ ಮಬ್ಬು. ಹುಲ್ಲಿನ ಮೇಲೆ ಜಾರುತ್ತ ಇನ್ನೊಂದು ಬದಿಗೆ ಹೋದ ಆ ಮನುಷ್ಯ. ಚಳಿಗೆ ಕೈ ಮರಗಟ್ಟಿದಾಗ ಇನ್ನೂ ಬಿಗಿಯಾಗಿ ಹಿಡಿದೇ ಇದ್ದ ಮಚ್ಚನ್ನು ಬಿಟ್ಟ. ಅಲ್ಲೇ ಬಿಟ್ಟುಬಿಟ್ಟ. ಒಣ ಕಟ್ಟಿಗೆಗಳ ಮಧ್ಯೆ ಜೀವವಿಲ್ಲದ ಹಾವಿನ ಹಾಗೆ ಮಿರುಗುತ್ತ ಬಿದ್ದಿತ್ತು ಅದು.

ಆ ಮನುಷ್ಯ ಬೆಟ್ಟಗಳ ನಡುವೆ ಹೊಸ ದಾರಿ ಮಾಡಿಕೊಂಡು ನದಿಯನ್ನು ಹುಡುಕುತ್ತ ಇಳಿದ.

ಅಲ್ಲಿ, ತೀರ ಕೆಳಗೆ ನದಿ ಹರಿದಿದೆ. ಹೂ ಬಿಟ್ಟ ಸೈಪ್ರಸ್ ಮರಗಳಿಗೆ ಸುತ್ತು ಹಾಕುತ್ತ ಸದ್ದಿಲ್ಲದೆ ಮಂದವಾಗಿ ಹರಿದಿದೆ. ಅಷ್ಟು ದೂರ ಸಾಗಿ ಮತ್ತೆ ಮರಳಿದೆ. ಮರಳಿ ಹೊರಳಿ ಮತ್ತೆ ಮರಳಿ ಹಸಿರು ನೆಲದ ಮೇಲೆ ಹಾವು ಹರಿದ ಹಾಗೆ ವಕ್ರವಾಗಿ ಸಾಗಿದೆ. ನದಿಯ ಪಕ್ಕವೇ ಮಲಗಿದರೂ ನಮ್ಮ ಉಸಿರೇ ನಮಗೆ ಕೇಳುವುದೇ ಹೊರತು ನದಿಯ ಉಸಿರಾಟ ಕೇಳಿಸದು, ಅಷ್ಟು ಸದ್ದಿಲ್ಲದೆ ಹರಿಯುತ್ತದೆ. ಎತ್ತರ ಸೈಪ್ರಸ್ ಮರಗಳಿಂದ ಬಳ್ಳಿಗಳು ಇಳಿಬಿದ್ದು ನೀರೊಳಗೆ ಒಂದರ ಕೈ ಇನ್ನೊಂದು ಕುಲುಕಿ ಹಿಡಿದಿವೆ. ನೀರೂಳಗಿನ ಬಳ್ಳಿ ಜೇಡರ ಜಾಲವನ್ನು ನದಿ ಎಂದೂ ಕದಡಿ ಕಳಚಿಲ್ಲ.

ಸೈಪ್ರಸ್ ಮರಗಳ ಹಳದಿಯ ಕಾರಣದಿಂದ ಆ ಮನುಷ್ಯ ನದಿಯ ಗೆರೆ ಎಲ್ಲಿದೆಯೆಂದು ಪತ್ತೆಮಾಡಿದ. ಮರಗಳ ನೆರಳಲ್ಲಿ ಅದು ಹೊರಳಿ ಮರಳಿದ್ದು ಕಾಣುತಿತ್ತೇ ಹೊರತು ನದಿಯ ಸದ್ದು ಅವನಿಗೆ ಕೇಳಲಿಲ್ಲ. ಕಂದು ಬಣ್ಣದ ಚಚಲಕ ಹಕ್ಕಿಗಳ ಗುಂಪು ಬರುತ್ತಿರುವುದು ನೋಡಿದ. ಹಿಂದಿನ ದಿನ ಮಧ್ಯಾಹ್ನ ಅವು ಮುಳುಗುವ ಸೂರ್ಯನ ದಿಕ್ಕಿಗೆ ಹಾರಿದ್ದವು. ಈಗ ಇನ್ನೇನು ಸೂರ್ಯ ಮೂಡುವ ಹೊತ್ತಿಗೆ ವಾಪಸು ಬರುತಿದ್ದವು.

ಆ ಮನುಷ್ಯ ಮೂರು ಬಾರಿ ಶಿಲುಬೆಯಾಕಾರದಲ್ಲಿ ಕ್ರಾಸ್ ಮಾಡಿಕೊಂಡ. ‘ಕಮಿಸಿ,’ ಅಂತ ಅವರಿಗೆಲ್ಲ ಹೇಳಿದ. ಕಲಸ ಶುರು ಮಾಡಿಕೊಂಡ. ಮೂರನೆಯದು ಮುಗಿಯುವ ಹೊತ್ತಿಗೆ ಅವನ ಕಣ್ಣಿಂದ ಬಕೆಟ್ಟುಗಟ್ಟಲೆ ಕಣ್ಣೀರು ಸುರಿಯುತಿತ್ತು. ಅಥವಾ ಬೆವರೂ ಇದ್ದೀತು. ತುಂಬ ಕಷ್ಟ. ಕೊಲ್ಲುವ ಕೆಲಸ ಕಷ್ಟದ್ದು. ಮನುಷ್ಯ ದೇಹ ಗಟ್ಟಿ. ಶರಣಾದಾಗಲೂ ತನ್ನ ತಾನು ಕಾಪಾಡಿಕೊಳ್ಳುತ್ತದೆ. ಮಚ್ಚು ಮೊಂಡಾಗಿತ್ತು. ‘ನೀವೆಲ್ಲ ಕ್ಷಮಿಸಬೇಕು,’ ಅಂತ ಮತ್ತೆ ಅವರಿಗೆ ಹೇಳಿದ.

‘ಆ ಮನುಷ್ಯ ಇಲ್ಲಿ ಕಾಯುತ್ತಾ ಕೂತಿದ್ದ. ಹೆಜ್ಜೆ ಗುರುತು ಅಲ್ಲಿವೆ. ಪೊದೆ ಹತ್ತಿರ ಗೂಡು ಮಾಡಿಕೊಂಡ. ಅವನ ಮೈ ಶಾಖ ವದ್ದೆ ನೆಲದಲ್ಲಿ ಬಾವಿ ತೋಡಿದ.’

ಆ ಮನುಷ್ಯ ಹೀಗಂದುಕೊಂಡ- ‘ನಾನು ರಸ್ತೆ ಬಿಡಬಾರದಿತ್ತು. ಇಷ್ಟು ಹೊತ್ತಿಗೆ ಅಲ್ಲಿರುತಿದ್ದೆ. ಆದರೆ, ಎಲ್ಲರೂ ಓಡಾಡುವ ಕಡೆ ನಾನೂ ಹೋಗುವುದು ಆಪಾಯ. ಅದರಲ್ಲೂ ಈ ಹೊರೆ ಹೊತ್ತು ಕೊಂಡು. ನನ್ನ ಕಡೆಗೆ ಯಾವ ಕಣ್ಣು ತಿರುಗಿದರೂ ಅದಕ್ಕೆ ಈ ಹೊರೆ ಎದ್ದು ಕಾಣುತಿತ್ತು. ವಿಚಿತ್ರವಾದ ಊತದ ಹಾಗೆ ಎದ್ದು ಕಾಣಲೇಬೇಕು. ಇದು ಹಾಗನ್ನಿಸುತಿದೆ. ನನ್ನ ಬೆರಳಿಗೆ ಗಾಯವಾದಾಗ ಜನ ಅದನ್ನ ಮೊದಲು ನೋಡಿದ್ದರು, ಆಮೇಲೆ ನಾನು ನೋಡಿಕೊಂಡಿದ್ದೆ. ಈಗ ಕೂಡ ಹಾಗೇ. ನನಗೆ ಬೇಕು ಅಂತ ಅಲ್ಲ. ಆದರೂ ಎದ್ದು ಕಾಣುವ ಗುರುತು ಇದ್ದಿರಬೇಕು. ಹೀಗೆ ಅನ್ನಿಸತದೆ. ಅದಕ್ಕೆ ಹೊರೆ ಕಾರಣ ಇರಬಹುದು, ಇಲ್ಲಾ ದಣಿವು ಕಾರಣ ಇರಬಹುದು,’ ಅಂದುಕೊಂಡ ಆ ಮನುಷ್ಯ. ಆಮೇಲೆ ಮತ್ತೆ ‘ನಾನು ಎಲ್ಲಾರನ್ನೂ ಕೊಲ್ಲಬಾರದಾಗಿತ್ತು. ಅವನೊಬ್ಬನನ್ನ ಕೊಂದಿದ್ದರೆ ಸಾಕಾಗಿತ್ತು. ಏನು ಮಾಡಲಿ. ಕತ್ತಲಾಗಿತ್ತು. ಎಲ್ಲಾ ಆಕಾರಗಳೂ ಒಂದೇ ಥರ ಕಾಣುತಿದ್ದವು…ಕೊನಗೆ ಎಲ್ಲಾರನ್ನೂ ಒಟ್ಟಿಗೆ ಸಮಾಧಿ ಮಾಡಿದರೆ ಖರ್ಚು ಕಡಮೆ ಆಗುತದೆ,” ಅಂದುಕೊಂಡ.

‘ನನಗಿಂತ ಮೊದಲು ನೀನು ದಣಿಯುತ್ತೀಯ. ನೀನು ಎಲ್ಲಿಗೆ ಹೋಗಬೇಕು ಅಂತ ಇದ್ದೀಯೋ ಅಲ್ಲಿಗೆ ನಿನಗಿಂತ ಮೊದಲು ನಾನು ಹೋಗಿರತೇನೆ. ನೀನು ಯಾರು, ಎಲ್ಲಿಂದ ಬಂದಿದೀಯ, ಎಲ್ಲಿ ಹೋಗತಿದೀಯ, ನಿನ್ನ ಉದ್ದೇಶ ಏನು ಎಲ್ಲಾ ನನಗೆ ಜ್ಞಾಪಕ ಇದೆ. ನಿನಗಿಂತ ಮೊದಲು ನಾನು ಅಲ್ಲಿರತೇನೆ,’ ಅಂದ ಆ ಮನುಷ್ಯನನ್ನು ಹಿಂಬಾಲಿಸುತಿದ್ದವನು.

‘ಈ ಜಾಗ ಅಲ್ಲ. ಇಗೋ ಇಲ್ಲಿ ನದಿ ದಾಟತೇನೆ. ಆಮೇಲೆ ಅಗೋ ಅಲ್ಲಿ. ನಾನು ಇನ್ನೊಂದು ದಡದ ಮೇಲಿರಬೇಕು. ನಾನು ಯಾರಿಗೂ ಗೂತ್ತಿಲ್ಲದ, ಯಾರೂ ನನ್ನ ನೋಡಿರದ, ನಾನು ಯಾವತ್ತೂ ಹೋಗಿರದ ಜಾಗದಲ್ಲಿ. ಆಮೇಲೆ ನೆಟ್ಟಗೆ ನಡೀತೇನೆ, ಅಲ್ಲಿಗೆ ಹೋಗುವ ತನಕ. ಅಲ್ಲಿ ನನ್ನ ಯಾರೂ ಹಿಡಿಯುವುದಕ್ಕೆ ಆಗಲ್ಲ,’ ನದಿಯನ್ನು ನೋಡಿದ ಆ ಮನುಷ್ಯ ಅಂದುಕೊಂಡ.

ಚಚಲಕ ಹಕ್ಕಿಗಳ ಇನ್ನೊಂದಷ್ಟು ಗುಂಪು ಕಿವುಡಾಗುವ ಹಾಗೆ ಚೀರುತ್ತಾ ನೆತ್ತಿಯ ಮೇಲೆ ಹಾರಿ ಹೋದವು.

‘ಇನ್ನೂ ಸ್ವಲ್ಪ ದೂರ ನದಿಯ ಪಕ್ಕದಲ್ಲೇ ಹೋಗತೇನೆ. ಇಲ್ಲೇ ನದಿ ತೀರ ಸಿಕ್ಕು ಸಿಕ್ಕಾಗಿದೆ. ಇಲ್ಲೇ ದಾಟಿದರೆ ನಾನು ಹೊರಟ ಕಡೆಗೇ ಮತ್ತೆ ವಾಪಸ್ಸು ಬಂದಿರತೇನೆ.’

‘ನಿನಗೆ ಯಾರೂ ಏನೂ ಮಾಡಲ್ಲಾ ಮಗಾ. ನಿನ್ನ ಕಾಪಾಡತೇನೆ. ಅದಕ್ಕೇ ನಾನು ನಿನಗಿಂತ ಮೊದಲು ಹುಟ್ಟಿದ್ದು, ನಿನ್ನ ಮೈ ಮೂಳೆಗಿಂತ ಮೊದಲು ನನ್ನ ಮೂಳೆ ಗಟ್ಟಿಯಾಗಿದ್ದು.’

ಅವನು ತನ್ನ ದನಿ ಕೇಳಿದ. ತನ್ನದೇ ದನಿ. ನಿಧಾನವಾಗಿ ಬಂದಿತು. ಅರ್ಥವಿರದ ಸುಳ್ಳುಮಾತು ಅನ್ನಿಸಿತು.

ಹಾಗೆ ಯಾಕೆ ಅನ್ನುತ್ತಾನೆ? ಅವನ ಮಗ ಅವನನ್ನ ನೋಡಿ ನಗತಾ ಇರಬೇಕು ಈಗ. ನಗತಾ ಇಲ್ಲವೋ ಏನೋ. ‘ಕೊನೆಯ ಗಳಿಗೆಯಲ್ಲಿ ಅವನೊಬ್ಬನನ್ನೇ ಬಿಟ್ಟು ಹೋಗಿದ್ದಕ್ಕೆ ನನ್ನ ಬಗ್ಗೆ ಮನಸ್ಸು ಕಹಿ ಆಗಿರಬೇಕು. ಯಾಕೆ ಅಂದರೆ ಅದು ನನ್ನದು ಕೂಡ, ನನ್ನದು ಮಾತ್ರ, ನನಗೋಸ್ಕರ ಬಂದ. ಅವನು ನಿನ್ನ ಹುಡುಕುತ್ತಾ ಇರಲಿಲ್ಲ. ಅವನ ಪ್ರಯಾಣದ ಗುರಿ ನಾನು. ನಾನು ಸತ್ತಿದ್ದು ನೋಡಬೇಕು, ಮಣ್ಣು ಮುಕ್ಕಿದ್ದು ನೋಡಬೇಕು, ಕಾಲಲ್ಲಿ ಒದ್ದು, ತುಳಿದು ವಿರೂಪಗೊಳಿಸಬೇಕು ಅಂತ ಅವನು ಕನಸು ಕಂಡಿದ್ದ. ಅವರ ಅಣ್ಣನಿಗೆ ನಾನು ಹಾಗೇ ಮಾಡಿದ್ದೆ. ಆದರೆ ಅದನ್ನೆಲ್ಲ ಎದರಾ ಎದುರಾ ಮಾಡಿದ್ದೆ, ಜೋಸ್ ಅಲ್ಕನೇಸಿಯಾ, ಅವನ ಕಣ್ಣೆದುರಿಗೇ, ನಿನ್ನ ಕಣ್ಣೆದುರಿಗೇ. ನೀನು ಅತ್ತೆ, ಹೆದರಿಕೊಂಡೆ. ಆ ಹೊತ್ತೇ ನೀನು ಯಾರು ಅನ್ನುವುದು, ನೀನು ನನ್ನ ಹುಡುಕಿಕೊಂಡು ಬರುತ್ತೀ ಅನ್ನುವುದು ನನಗೆ ಗೊತ್ತಾಯಿತು. ಒಂದು ತಿಂಗಳ ಕಾಲ ಹಗಲೂ ರಾತ್ರಿ ಎಚ್ಚರವಾಗಿದ್ದು ನೀನು ಬರುತ್ತೀಯ ಅಂತ ಕಾಯುತಿದ್ದೆ. ನೀನು ದುಷ್ಟ ಸರ್‍ಪದ ಹಾಗೆ ಅಡಗಿಕೊಂಡು, ತೆವಳಿಕೊಂಡು ಬರುತ್ತೀಯ ಅಂತ ಅಂದುಕೊಂಡಿದ್ದೆ. ನೀನು ತಡವಾಗಿ ಬಂದೆ ಅಲ್ಲಿಗೆ. ನಾನೂ ತಡವಾಗಿ ಬಂದೆ. ಆಗ ತಾನೇ ಹುಟ್ಟಿದ ಕೂಸನ್ನು ಮಣ್ಣು ಮಾಡುವುದಕ್ಕೆ ಹೋಗಿದ್ದೆ. ಅವತ್ತು ರಾತ್ರಿ ನನ್ನ ತಲೆಯ ಮೇಲೆ ಹೂಗಳು ಯಾಕೆ ಬಿದ್ದವು ಅಂತ ಈಗ ಗೊತ್ತಾಗತಾ ಇದೆ.’

‘ನಾನು ಎಲ್ಲಾರನ್ನೂ ಕೊಲ್ಲಬಾರದಾಗಿತ್ತು’ ಅಂದುಕೊಳ್ಳುತ್ತಲೇ ಇದ್ದ ಆ ಮನುಷ್ಯ. ‘ಬೆನ್ನಿನ ಮೇಲೆ ಮೂರನೆಯವನ ಭಾರ ಕೂಡ ಹೊರುವುದು ಬೇಕಾಗಿರಲಿಲ್ಲ. ಬದುಕಿರುವವರಿಗಿಂತ ಸತ್ತವರ ಭಾರ ಹೆಚ್ಚು. ಮೈಯೆಲ್ಲ ನೆಗ್ಗುವ ಹಾಗೆ ಮಾಡತಾರೆ. ಅವನು ಗುರುತು ಸಿಗುವವರೆಗೆ ಒಬ್ಬೊಬ್ಬರನ್ನೂ ಸರಿಯಾಗಿ ನೋಡಬೇಕಾಗಿತ್ತು. ಅವನ ಮಚ್ಚು ನೋಡಿ ಪತ್ತೆ ಮಾಡಬೇಕಾಗಿತ್ತು. ಕತ್ತಲಾಗಿದ್ದರೆ ಏನಂತೆ, ಅವನು ಏಳದ ಹಾಗೆ ಎಲ್ಲಿಗೆ ಹೊಡೆಯಬೇಕು ಅನ್ನುವುದು ನನಗೆ ಗೊತ್ತಿರಬೇಕಾಗಿತ್ತು…ಇಲ್ಲ, ಇದೇ ಒಳ್ಳೆಯದಾಯಿತು. ಅವರ ಹೆಣದ ಮುಂದೆ ಅಳುವವರು ಯಾರೂ ಇರಲ್ಲ, ನನ್ನ ಬದುಕಲ್ಲೂ ಶಾಂತಿ ಇರತದೆ. ಏನೆಂದರೆ, ರಾತ್ರಿ ಕತ್ತಲಿಳಿಯುವ ಮೊದಲು ಇಲ್ಲಿಂದ ಹೋಗುವ ದಾರಿ ನೋಡಿಕೊಳ್ಳಬೇಕು.’

ಮಧ್ಯಾಹ್ನದ ಹೊತ್ತಿಗೆ ಆ ಮನುಷ್ಯ ನದಿಯ ನಡುವಿನ ಇಕ್ಕಟ್ಟು ನೆಲದ ಮೇಲಿದ್ದ. ಇಡೀ ದಿನ ಸೂರ್ಯ ಕಂಡಿರಲಿಲ್ಲ. ಸುಮ್ಮನೆ ಚೆದುರಿದ ಹಾಗಿದ್ದ ಬೆಳಕಿನಲ್ಲಿ ನೆರಳು ಮತ್ತೊಂದು ದಿಕ್ಕಿಗೆ ಹೊರಳಿದ್ದು ಕಂಡು ಮಧ್ಯಾಹ್ನವಾಯಿತೆಂದು ತಿಳಿದ.

ಆ ಮನುಷ್ಯನನ್ನು ಹಿಂಬಾಲಿಸಿ ಬರುತಿದ್ದವನು, ಈಗ ನದಿಯ ದಡದ ಮೇಲೆ ಕೂತವನು ಹೇಳಿದ-‘ಸಿಕ್ಕಿಬಿದ್ದೆ ನೀನು. ಮೊದಲು ಕೆಟ್ಟ ಕೆಲಸ ಮಾಡಿ, ಈಗ ಬೋನಿಗೆ ಬಿದ್ದಿದೀಯ. ನಿನ್ನ ಬೋನಿಗೆ ನೀನೇ. ನಿನ್ನನ್ನ ಅಲ್ಲಿಗೆ ಹಿಂಬಾಲಿಸಿಕೊಂಡು ಬಂದು ಉಪಯೋಗವಿಲ್ಲ. ದಾರಿ ಇಲ್ಲ ಅಂತ ಗೊತ್ತಾದಮೇಲೆ ನೀನು ಮತ್ತೆ ವಾಪಸ್ಸು ಬರಲೇ ಬೇಕು. ನಾನು ಇಲ್ಲೇ ಕಾಯತೇನೆ. ನಿನಗೆ ಎಲ್ಲಿಗೆ ಗುಂಡು ಹಾಕಲಿ ಅನ್ನುವುದನ್ನ ನೀನು ಬರುವವರೆಗೂ ಮನಸ್ಸಿಟ್ಟು ಯೋಚನೆ ಮಾಡತೇನೆ. ತಾಳ್ಮೆಯಿಂದ ಇರತೇನೆ ನಾನು, ನಿನಗೆ ಆಗಲ್ಲ. ಇದು ನನಗೇ ಲಾಭ. ನನ್ನ ಗುಂಡಿಗೆ ತನ್ನದೇ ರಕ್ತದಲ್ಲಿ ಮಿಡಿಯುತ್ತ, ಬಡಿಯುತ್ತ ಇದೆ. ನಿನ್ನ ಹೃದಯ ಚೂರುಚೂರಾಗಿ, ಒಣಗಿ, ಕೊಳೆಯುತಾ ಇದೆ. ಇದೂ ನನಗೇ ಲಾಭ. ನಾಳೆ ನೀನು ಸತ್ತಿರುತ್ತೀ. ಅಥವಾ ನಾಳಿದ್ದು. ಇಲ್ಲಾ, ಇನ್ನೂ ಎಂಟು ದಿನ ಆದಮೇಲೆ.’

ನದಿಯು ಕೊರಕಲಲ್ಲಿ ಸಾಗಿ ಎತ್ತರದ ಎರಡು ಬಂಡೆ ಗೋಡೆಗಳ ನಡುವೆ ಸಿಕ್ಕಿಬಿದ್ದಿರುವುದನ್ನು ಆ ಮನುಷ್ಯ ನೋಡಿದ. ‘ವಾಪಸ್ಸು ಹೋಗಲೇಬೇಕು,’ ಅಂದುಕೊಂಡ.

ನದಿಯು ಆ ಭಾಗದಲ್ಲಿ ಅಗಲವಾಗಿ, ಆಳವಾಗಿ, ಅಡ್ಡಬರುವ ಬಂಡೆಗಳಾವುದೂ ಇಲ್ಲದೆ ಮಂದವಾದ ಕೊಳಕು ಎಣ್ಣೆಯ ಹಾಗೆ ಹರಿಯುತಿತ್ತು. ಆಗೀಗ ತನ್ನ ಪ್ರವಾಹದಲ್ಲಿ ಮರದ ಕೊಂಬೆ ರಂಬೆಗಳನ್ನು ಅವುಗಳ ದೂರುದನಿಯೂ ಕೇಳಿಸದ ಹಾಗೆ ನುಂಗಿ ಬಿಡುತಿತ್ತು.

ದಂಡೆಯ ಮೇಲೆ ಕೂತು ಕಾಯುತಿದ್ದವನು ಹೇಳಿದ – ‘ಮಗಾ, ನಿನ್ನ ಕೊಂದವನು ಈ ಕ್ಷಣದಿಂದ ಸತ್ತ ಅಂತ ತಿಳಿದುಕೋ ಅಂತ ಹೇಳಿ ಫಲವಿಲ್ಲ. ಅದರಿಂದ ನನಗೇನು ಸಿಗುತದೆ? ಏನಂದರೆ, ನಾನು ನಿನ್ನ ಜೊತೆ ಇರಲಿಲ್ಲ. ಅಷ್ಟೇ. ಅವಳ ಜೊತೆಗೂ ಇರಲಿಲ್ಲ. ಅವನ ಜೊತೆಗೂ. ನಾನು ಯಾರ ಜೊತೆಯಲ್ಲೂ ಇರಲಿಲ್ಲ. ಆಗ ತಾನೇ ಹುಟ್ಟಿದ್ದ ಕೂಸು ತನ್ನ ನೆನಪಿಗೆ ಅಂತ ಏನನ್ನೂ ಉಳಿಸದೆ ತೀರಿಕೊಂಡಿತ್ತು.’

ಆ ಮನುಷ್ಯ ನದಿಯ ಪಕ್ಕದಲ್ಲೇ ನಡೆದ.

ಅವನ ತಲೆಯೊಳಗೆ ರಕ್ತದ ಗುಳ್ಳೆಗಳು ಪಟಪಟನೆ ಒಡಯುತಿದ್ದವು.

‘ಮೊದಲನೆಯವನು ಸಾಯುವಾಗ ಸದ್ದು ಮಾಡಿ ಮಿಕ್ಕವರನ್ನ ಎಬ್ಬಿಸುತಾನೆ ಅಂದುಕೊಂಡಿದ್ದೆ. ಆತುರ ಮಾಡಿದೆ.’ ‘ಆತುರ ಪಟ್ಟದ್ದಕ್ಕೆ ಸಾರಿ,’ ಅಂತ ಅವರಿಗೆ ಹೇಳಿದ. ನೀರಿನ ತೊದಲು ಸದ್ದು ಮಲಗಿದ್ದವರ ಗೊರಕೆ ಸದ್ದು ಅನ್ನಿಸಿತು ಅವರಿಗೆ. ಅದಕ್ಕೇ, ಅವತ್ತು ಮೊಡ ಕವಿದ ತಣ್ಣನೆ ರಾತ್ರಿಯಲ್ಲಿ ಹೊರಗೆ ನಡೆದಾಗ ಶಾಂತವಾಗಿದ್ದ.
* * *

ಅವನು ಬಂದಾಗ ಓಡಿ ಹೋಗುತಿದ್ದ ಹಾಗಿತ್ತು. ಮೊಳಕಾಲಿನವರೆಗೂ ಕೆಸರಾಗಿತ್ತು. ಅವನ ಪ್ಯಾಂಟಿನ ಬಣ್ಣ ಕೂಡ ಗೊತ್ತಾಗುತಿರಲಿಲ್ಲ.

ಅವನು ನದಿಗೆ ಹಾರಿದನಲ್ಲ, ನಾನು ಆಗ ಮೊದಲು ನೋಡಿದ್ದು ಅವನನ್ನ, ಮೈ ಅದುರಿಸಿದ. ಮತ್ತೆ ನದಿಯ ವೇಗ ಅವನನ್ನು ಹೊತ್ತು ಒಯ್ಯುತಿತ್ತು. ಕೈಯನ್ನೂ ಆಡಿಸದೆ ನದಿಯ ತಳದಲ್ಲಿ ನಡೆಯುತಿದ್ದ ಹಾಗೆ. ಮತ್ತೆ, ದಡಕ್ಕೆ ತೆವಳಿದ. ಬಟ್ಟೆ ಹಾಗೇ ಮೈಮೇಲೇ ಒಣಗಲು ಬಿಟ್ಟ. ನೋಡಿದೆ. ಚಳಿಯಲ್ಲಿ ನಡುಗುತಿದ್ದ. ಮೋಡವಿತ್ತು. ಗಾಳಿ ಇತ್ತು.

ಕುರಿ ನೋಡಿಕೋ ಅಂತ ಧಣಿ ನನ್ನನ್ನ ಬೇಲಿಯ ಅಂಚಿನಲ್ಲಿ ಕೂರಿಸಿ ಹೋಗಿದ್ದ. ಅಲ್ಲಿಂದಾನೇ ನೋಡತ್ತಾ ಇದ್ದೆ. ಯಾರೋ ನೋಡತಾ ಇದಾರೆ ಅನ್ನುವುದು ಆ ಮನುಷ್ಯನಿಗೆ ಗೊತ್ತೇ ಆಗಲಿಲ್ಲ.

ಮೊಳಕೈ ಮೇಲೆ ಭಾರ ಬಿಟ್ಟು, ಕಾಲು ಚಾಚಿ, ಮೈ ಒಣಗಲು ಗಾಳಿಗೆ ಬಿಟ್ಟು ಆರಾಮವಾಗಿದ್ದ. ಆಮೇಲೆ ಶರಟು ಹಾಕಿಕೊಂಡು ಪ್ಯಾಂಟು ಏರಿಸಿಕೊಂಡ. ಪ್ಯಾಂಟಿನ ತುಂಬ ತೂತು ಇದ್ದವು. ಕೈಯಲ್ಲಿ ಮಚ್ಚು ಇರಲಿಲ್ಲ. ಯಾವ ಆಯುಧಾನೂ ಇರಲಿಲ್ಲ. ಬಂದೂಕು ಸಿಕ್ಕಿಸಿಕೊಳ್ಳುವ ಚರ್ಮದ ಚೀಲ ಅವನ ಸೊಂಟದಲ್ಲಿ ತಬ್ಬಲಿಯ ಥರ ಖಾಲಿ ನೇತಾಡತಾ ಇತ್ತು. ಅಷ್ಟೇ.

ಮೇಲೆ ನೋಡಿದ. ಸುತ್ತಲೂ ನೋಡಿದ. ಹೊರಟ. ನಾನು ಇನ್ನೇನು ಎದ್ದು ಕುರಿಗಳನ್ನ ಹೊರಡಿಸಬೇಕು ಅನ್ನುವಾಗ ಆ ಮನುಷ್ಯ ಮತ್ತೆ ಕಂಡ. ಇನ್ನೂ ದಿಕ್ಕು ತೋಚದವನ ಹಾಗೇ ಇದ್ದ.

ಮತ್ತೆ ನದಿಗೆ ಇಳಿದ. ಮಧ್ಯದವರೆಗೂ ಹೋದ. ವಾಪಸ್ಸು ಬಂದ.

‘ಏನು ಮಾಡತಾ ಇದಾನೆ ಇವನು!’ ಅಂದುಕೊಂಡೆ.

ಆಮೇಲೆ ಇನ್ನೇನಿಲ್ಲ. ಮತ್ತೆ ನದಿಗೆ ಇಳಿದ. ಗಿರಗಿಟ್ಟಲೆ ಥರ ಅವನನ್ನ ಸುತ್ತಿಸಿಕೊಂಡು ಕೊಚ್ಚಿಕೊಂಡು ಹೋಯಿತು ನದಿ. ಇನ್ನೇನು ಮುಳುಗೇ ಹೋದ ಅಂದುಕೊಂಡೆ. ತೋಳು ಬಡಿದ. ಒಂದೇ ಸಮ. ಕೊಚ್ಚಿ ಕೊಂಡು ಹೋಗಿ ಅಗೋ ಅಲ್ಲಿ ದಡ ಹತ್ತಿದ. ನೀರು ವಾಂತಿ ಮಾಡಿಕೊಂಡ. ಕರುಳೇ ಕಿತ್ತು ಬರುವ ಹಾಗೆ.

ಮತ್ತೆ ಬರಿಯ ಮೈಯಲ್ಲಿ ಮಲಗಿ ಮೈ ಒಣಗಿಸಿಕೊಂಡ. ಬಟ್ಟೆ ತೊಟ್ಟುಕೊಂಡು ನದಿಯ ಮೇಲು ಭಾಗಕ್ಕೆ, ಅವನು ಬಂದಿದ್ದ ದಿಕ್ಕಿನಲ್ಲೇ ವಾಪಸ್ಸು ಹೋದ.

ಅವನು ಈಗ ನನ್ನ ಕೈಗೆ ಸಿಗಬೇಕಾಗಿತ್ತು. ಅವನು ಏನು ಮಾಡಿದಾನೆ ಅನ್ನುವುದು ಆಗಲೇ ನನಗೆ ಗೊತ್ತಿದ್ದಿದ್ದರೆ ಕಲ್ಲಿನಲ್ಲಿ ಅವನನ್ನು ಜಜ್ಜಿ ಹಾಕುತಿದ್ದೆ. ಅಯ್ಯೋ ಪಾಪ ಅಂತ ಕೂಡ ಅಂದುಕೊಳ್ಳುತಿರಲಿಲ್ಲ.

ಆಗಲೂ ಅವನು ತಲೆತಪ್ಪಿಸಿಕೊಂಡು ಬಂದವನೇ. ಸುಮ್ಮನೆ ಮುಖ ನೋಡಿದರೇ ಗೊತ್ತಾಗುತಿತ್ತು. ನಾನು ಭವಿಷ್ಯ ಹೇಳುವವನಲ್ಲ ಸ್ವಾಮೀ. ಕುರಿ ಕಾಯುವವನು ಅಷ್ಟೇ. ಭಯಸ್ಥ. ನಿಜ. ನೀವು ಹೇಳಿದ ಹಾಗೆ ನಾನು ದಿಢೀರ್ ಅಂತ ಅವನ ಮೇಲೆ ಬೀಳಬಹುದಾಗಿತ್ತು. ಗುರಿ ಇಟ್ಟು ಕಲ್ಲಲ್ಲಿ ತಲೆಗೆ ಹೊಡೆದಿದ್ದರೆ ಎಚ್ಚರ ತಪ್ಪಿ ಬಿದ್ದಿರುತಿದ್ದ. ನೀವು ಹೇಳಿದ್ದು ನಿಜ. ಯಾರಿಗೂ ಗೊತ್ತಾಗತಿರಲಿಲ್ಲ.

ಅವನಿಂದ ಎಷ್ಟೊಂದು ಜನ ಸತ್ತರು, ಈಗ ತಾನೇ ಕೊಲೆ ಮಾಡಿ ಬಂದ ಅವನು ಅಂತ ಈಗ ಹೇಳುತಿದ್ದೀರಿ. ಎಂಥಾ ಕೆಲಸ ಆಗಿಹೋಯಿತು. ಕೊಲೆಗಾರರನ್ನ ಕೊಲ್ಲುವುದಕ್ಕೆ ಇಷ್ಟ ನನಗೆ. ಸೈತಾನನ ಸಂತಾನ ಕೊಲೆಗಾರರು. ಅವರನ್ನ ಕೊಂದು ದೇವರಿಗೆ ಸಹಾಯಮಾಡುವವನು ನಾನು. ನನ್ನ ನಂಬಿ.

ಏನಂದರೆ, ಎಲ್ಲಾ ಅಷ್ಟಕ್ಕೇ ಮುಗಿಯಲಿಲ್ಲ. ಅವನು ಮತ್ತೆ ಮಾರನೆ ದಿನ ಬಂದಿದ್ದು ನೋಡಿದೆ. ಆಗಲೂ ನನಗೆ ಏನೂ ಗೊತ್ತಿರಲಿಲ್ಲ. ಅಯ್ಯೋ! ನನಗೆ ಗೊತ್ತಿದ್ದಿದ್ದರೆ!

ನವೆದು ಹೋಗಿದ್ದ. ಅಂಗಿ ಚಿಂದಿಯಾಗಿತ್ತು. ಮೂಳೆ ಕಾಣುತಿದ್ದವು. ಅದು ಅವನೇ ಅಂತ ಗುರುತು ಸಿಗಲಿಲ್ಲ. ಹಾಗಾಗಿದ್ದ.

ಅವನ ಕಣ್ಣು ನೋಡಿ ಗುರುತು ಹಿಡಿದೆ. ನೋವು ಉಂಡ ಹಾಗೆ ನಿಷ್ಠೂರವಾಗಿದ್ದವು. ಬಾಯಿ ಮುಕ್ಕಳಿಸುವವನ ಹಾಗೆ ಬಾಯಿ ತುಂಬಾ ನೀರು ತುಂಬಿಕೊಂಡ. ನೀರಿನ ಜೊತೆ ಬಂದಿದ್ದ ಸಾಲಮಂಡರ್ ಮೀನು ಹಾಗೇ ನಂಗಿಬಿಟ್ಟ. ಬೊಗಸೆಯಲ್ಲಿ ಅವನು ನೀರು ಎತ್ತಿಕೊಂಡ ಜಾಗ ಆಳವಿಲ್ಲದೆ ಕೆಸರಾಗಿತ್ತು. ಸಾಲಮಂಡರ್ ಮೀನು ಧಂಡಿಯಾಗಿದ್ದವು. ಅವನಿಗೆ ತುಂಬ ಹಸಿವಾಗಿತ್ತು ಅಂತ ಕಾಣತ್ತೆ.

ಅವನ ಕಣ್ಣು ನೋಡಿದೆ. ಗವಿಯ ಬಾಯಿ ಥರ ಕಪ್ಪು ತೂತು. ಹತ್ತಿರ ಬಂದ. ‘ಕುರಿ ನಿನ್ನದಾ?’ ಅಂದ. ಅಲ್ಲ, ಅಂದೆ. ‘ಈ ಕುರೀನ ಈ ಲೋಕಕ್ಕೆ ಯಾರು ತಂದರೋ ಅವರದ್ದು.’ ಅಂತಂದೆ.

ಅವನಿಗೆ ನಗು ಬರಲಿಲ್ಲ. ಚೆನ್ನಾಗಿ ಬೆಳೆದಿದ್ದ ಮೇಕೆ ಹಿಡಿದುಕೊಂಡ. ತಲೆ ಕೆಳಗು ಮಾಡಿ, ಅದರ ಮೊಲೆಗೆ ಬಾಯಿ ಹಾಕಿ ಹಾಲು ಹೀರಿದ. ಮೇಕೆ ಒದರತಾ ಇತ್ತು. ಬಿಡಲಿಲ್ಲ ಅವನು. ಸಾಕಾಗುವವರೆಗೂ ಹೀರಿದ. ಅವನ ಹಲ್ಲು ತಗಲಿ ಮೇಕೆಗೆ ನಂಜಾಗದೆ ಇರಲಿ ಅಂತ ಆಮೇಲೆ ನಾನು ಸೊಪ್ಪಿನ ರಸ ಹಚ್ಚಿದೆ.

ಏನು. ಉರ್‍ಕ್ವಿಡೀ ಮನೆಯ ಎಲ್ಲಾರನೂ ಕೊಂದ ಅವನು ಅಂದಿರಾ? ನನಗೆ ಗೊತ್ತಿದ್ದಿದ್ದರೆ ಅವನ ತಲೆಗೆ ಸೌದೆ ತುಂಡಿನಲ್ಲಿ ಹೊಡೆದು ಎಚ್ಚರ ತಪ್ಪಿ ಅವನು ಇಲ್ಲೇ ಬಿದ್ದಿರುವ ಹಾಗೆ ಮಾಡತಿದ್ದೆ.

ನನಗೆ ಹೇಗೆ ತಿಳಿಯಬೇಕು ಹೇಳಿ. ಬೆಟ್ಟದಲ್ಲಿ ಕುರಿ ಕಾಯುವವನು. ಕುರಿ ಬಿಟ್ಟರೆ ಜೊತೆಗೆ ಯಾರೂ ಇಲ್ಲ. ಕುರಿಗಳು ಊರಿನ ಸುದ್ದಿ ಹೇಳಲ್ಲ.

ಮಾರನೆ ದಿನ ಮತ್ತೆ ಬಂದ. ನಾನು ಹೋಗುವ ಹೊತ್ತಿಗೇ ಬಂದ. ಒಂಥರಾ ಸ್ನೇಹಿತರ ಹಾಗೆ ಆಗಿದ್ದೆವು.

ಅವನು ‘ಈ ಸೀಮೆಯವನಲ್ಲ ನಾನು,’ ಅಂದ. ಎಲ್ಲೋ ದೂರದಿಂದ ಬಂದಿದ್ದನಂತೆ. ‘ಈಗ ನಡೆಯುವುದಕ್ಕೆ ಕಾಲಲ್ಲಿ ತ್ರಾಣ ಇಲ್ಲ,’ ಅಂದ. ‘ಎಷ್ಟು ನಡೆದರೂ ಎಲ್ಲಿಗೂ ತಲುಪುತ್ತಾ ಇಲ್ಲ. ಕಾಲಲ್ಲಿ ಬಲ ಇಲ್ಲ. ಕುಸೀತಾ ಇವೆ. ನಮ್ಮ ಮನೆ ದೂರ. ಅಗೋ ಆ ಬೆಟ್ಟಕ್ಕಿಂತಲೂ ದೂರ,’ ಅಂದ. ಎರಡು ದಿನದಿಂದ ಕಾಡಿನ ಸೊಪ್ಪು, ಎಲೆ ಬಿಟ್ಟರೆ ಬೇರೇನೂ ತಿಂದಿಲ್ಲ ಅಂದ. ಅದೆಲ್ಲಾ ಅವನೇ ಹೇಳಿದ್ದು.

ಉರ್‍ಕ್ವಿಡೀ ಮನೆಯವರನ್ನೆಲ್ಲ ಕರುಣೆ ಇಲ್ಲದೆ ಕೊಂದ, ಅನ್ನುತೀರಾ? ನನಗೆ ಗೊತ್ತಿದ್ದಿದ್ದರೆ ಅವನು ನನ್ನ ಮೇಕೆಯ ಹಾಲು ಕುಡಿಯುತ್ತಾ ಇದ್ದಾಗಲೇ ಅವನ ಕಥೆ ಮುಗಿಸಿಬಿಡುತಿದ್ದೆ.

ನೋಡುವುದಕ್ಕೆ ಕೆಡುಕನ ಥರ ಕಾಣಲಿಲ್ಲ. ಹೆಂಡತಿ, ಮಕ್ಕಳ ಬಗ್ಗೆ ಹೇಳಿದ. ಮನೆಯಿಂದ ಎಷ್ಟು ದೂರ ಬಂದಿದೇನೆ ಅಂದ. ಅವರ ಬಗ್ಗೆ ಹೇಳುವಾಗ ಅಳುವವರ ಥರ ಸೊರಗುಟ್ಟಿದ.

ಮೂಳೆ ಚಕ್ಕಳ, ಬಡಕಲು ಮೈ. ಕಬ್ಬಿಣದ ಸರಳಿನ ಹಾಗೆ ತೆಳ್ಳಗೆ, ಸಿಡಿಲು ಬಡಿದು ಸತ್ತಿದ್ದ ಪ್ರಾಣಿಯ ಮಾಂಸ ನಿನ್ನೆ ತಾನೇ ತಿಂದಿದ್ದ. ಆ ಸತ್ತ ಪ್ರಾಣಿಯ ಮೈಯನ್ನ ಇರುವೆಗಳು ಅಗಲೇ ಓಂದಷ್ಟು ತಿಂದಿದ್ದವು. ಉಳಿದಿದ್ದನ್ನು ನಾನು ಹಾಕಿಕೊಂಡಿದ್ದ ಬೆಂಕಿಯಲ್ಲಿ ಬೇಯಿಸಿಕೊಂಡ. ಮೂಳೆಯನ್ನು ಕೂಡ ಚೆನ್ನಾಗಿ ಚೀಪಿದ.

‘ಕಾಯಿಲೆ ಬಂದು ಸತ್ತ ಪ್ರಾಣಿ ಅದು,’ ಅಂದೆ.

ಅವನು ಕಿವಿಗೆ ಹಾಕಿಕೊಳ್ಳಲಿಲ್ಲ. ಅವನಿಗೆ ತುಂಬ ಹಸಿವಾಗಿತ್ತು.

ಅವರೆಲ್ಲಾರನ್ನೂ ಕೊಂದ ಅನ್ನುತ್ತೀರಲ್ಲಾ? ನನಗೆ ಗೊತ್ತಿದ್ದಿದ್ದರೆ. ನಾನೇನು ಮಾಡಲಿ. ಪೆದ್ದ, ಎಲ್ಲಾರನ್ನೂ ನಂಬುತೇನೆ. ಬರೀ ಕುರಿ ಕಾಯುವವನು ನಾನು. ಅದು ಬಿಟ್ಟರೆ ಬೇರೆ ಏನೂ ಗೊತಿಲ್ಲ ನನಗೆ. ನನ್ನ ಜೊತೆಯಲ್ಲೇ ಇದ್ದು, ನನ್ನ ಬೆಂಕಿಯಲ್ಲೇ ಮಾಂಸ ಬೇಯಿಸಿಕೊಂಡು ನನ್ನ ಜೊತೆ ಊಟ ಮಾಡಿದ ಅಂದರೆ!

ಅದಕ್ಕೇ ಈಗ ನಿಮ್ಮ ಹತ್ತಿರ ನನಗೆ ಗೊತ್ತಿರುವುದೆಲ್ಲ ಹೇಳಿ, ನನ್ನದೇನೂ ತಪ್ಪಿಲ್ಲ ಅನ್ನುವುದನ್ನು ತಿಳಿಸುವುದಕ್ಕೆ ಬಂದಿದೇನೆ. ಅಪರಾಧದಲ್ಲಿ ನನ್ನದೂ ಪಾಲಿದೆ ಅನ್ನುತೀರಾ? ಯಾರಿಗೆ ಗೊತ್ತಿತ್ತು ಹೀಗೆ ಅಂತ? ಅವನು ಬಚ್ಚಿಟ್ಟುಕೊಳ್ಳುವುದಕ್ಕೆ ಸಹಾಯ ಮಾಡಿದೆ ಅಂತ ನಾನು ಜೈಲಿಗೆ ಹೋಗುತ್ತೇನೆ ಅನ್ನುತೀರಾ? ಉರ್‍ಕ್ವಿಡೀ ಮನೆಯವರನ್ನೆಲ್ಲ ಕೊಂದಿದ್ದು ನಾನಲ್ಲ. ಅಲ್ಲಿ, ನದಿ ಪಕ್ಕದಲ್ಲಿ ಕೆಸರು ನೀರಿನ ಹೊಂಡದಲ್ಲಿ ಹೆಣ ಇದೆ ಅಂತ ನಿಮಗೆ ಹೇಳುವುದಕ್ಕೆ ಬಂದೆ. ಅವನು ಯಾರು, ಹೇಗಿದ್ದ, ಯಾವಾಗ ಬಂದ ಎಲ್ಲಾ ನನ್ನಿಂದ ಹೇಳಿಸಿ, ನಾನು ಅದೆಲ್ಲ ಹೇಳಿದಮೇಲೆ, ನನ್ನನ್ನೂ ಅಪರಾಧಿ ಅನ್ನುತೀರಲ್ಲ, ಸರಿಯಾ?

ನನ್ನನ್ನು ನಂಬಿ. ಆ ಮನುಷ್ಯ ಯಾರು ಅಂತ ನನಗೆ ಗೊತ್ತಿದ್ದಿದ್ದರೆ ಅವನನ್ನ ಕೊಲ್ಲುವುದಕ್ಕೆ ಉಪಾಯ ಮಾಡುತಿದ್ದೆ. ನನಗೇನು ಗೊತ್ತಿತ್ತು? ನಾನೇನು ಭವಿಷ್ಯ ಹೇಳುವವನಲ್ಲ.

ತಿನ್ನುವುದಕ್ಕ ಏನಾದರೂ ಕೊಡು ಅಂತ ಕೇಳಿದ, ಮಕ್ಕಳ ಬಗ್ಗೆ ಹೇಳಿ ಕಣ್ಣೀರಿಟ್ಟ, ಅಷ್ಟೇ.

ಈಗ ಸತ್ತು ಹೋಗಿದಾನೆ. ನದಿ ಮಧ್ಯ ಬಂಡೆಯ ಮೇಲೆ ಬಟ್ಟೆ ಒಣಗಿಹಾಕಿದಾನೆ ಅಂದುಕೊಂಡಿದ್ದೆ. ಆದರೆ, ಅಲ್ಲಿದ್ದದ್ದು ಅವನೇ, ಬಿದ್ದುಕೊಂಡಿದ್ದ, ಮುಖ ನೀರಿನಲ್ಲಿತ್ತು. ನೀರಿಗೆ ತಲೆ ಇಟ್ಟಿದಾನೆ, ಎತ್ತುವುದಕ್ಕೆ ಆಗತಾ ಇಲ್ಲ, ನೀರಲ್ಲೇ ಉಸಿರು ಎಳೆದುಕೊಂಡಿದಾನೆ ಅಂದುಕೊಂಡಿದ್ದೆ. ಆಮೇಲೆ ನೋಡಿದರೆ ಬಾಯಲ್ಲಿ ರಕ್ತ ಬಂದಿತ್ತು. ಗುಂಡೇಟು ಬಿದ್ದು ತಲೆ ತುಂಬ ತೂತಾಗಿದ್ದವು.

ಅದೆಲ್ಲಾ ಏನೋ ಹೇಗಾಯಿತೋ ನನಗೆ ಗೊತ್ತಿಲ್ಲ. ಏನಾಯಿತೋ ಅದನ್ನ ನಿಮಗೆ ಹೇಳುವುದಕ್ಕೆ ಬಂದೆ. ಏನೂ ಸೇರಿಸದೆ, ಏನೂ ಬಿಡದೆ ಎಲ್ಲಾ ಹೇಳಿದೇನೆ. ನಾನು ಕುರಿ ಕಾಯುವವನು. ಬೇರೆ ಏನೂ ನನಗೆ ಗೊತಿಲ.
*****
ಸ್ಪಾನಿಷ್ ಮೂಲ: ಹ್ವಾನ್ ರುಲ್ಫೋ Juan Rulfo
ಕಥೆ ಹೆಸರು : El hombre The man

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಜ್ಞಾನದ ಗಂಗ
Next post ನಿರೀಕ್ಷೆ

ಸಣ್ಣ ಕತೆ

 • ಅವರು ನಮ್ಮವರಲ್ಲ

  ಪೇದೆ ಪ್ರಭಾಕರ ಫೈಲುಗಳನ್ನು ನನ್ನ ಟೇಬಲ್ ಮೇಲೆ ಇಟ್ಟು, ‘ಸರ್ ಸಾಹೇಬರು ನಿಮ್ಮನ್ನು ಕರೆಯುತ್ತಿದ್ದಾರೆ’ ಎಂದು ಹೇಳಿ ಮಾಮೂಲಿನಂತೆ ಹೊರಟು ಹೋದ. ಸಮಯ ನೋಡಿದೆ. ೧೦:೩೦ ಗಂಟೆ.… Read more…

 • ಧನ್ವಂತರಿ

  ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

 • ಮತ್ತೆ ಬಂದ ವಸಂತ

  ಚಿತ್ರ: ಆಮಿ ಮೊದಲ ರಾತ್ರಿಯ ಉನ್ಮಾದದಲ್ಲಿದ್ದ ಮಧುವಿನ ಕಿವಿ ಹಿಂಡಿ ಅವಳಂದಳು. ‘ಮಧು, ಇಂದಿನಿಂದ ನಾವು ಗಂಡ - ಹೆಂಡತಿಯಾಗಿರುವುದು ಬೇಡ. ಬದುಕಿನ ಕೊನೆ ತನಕವೂ ಗೆಳೆಯ… Read more…

 • ನಂಟಿನ ಕೊನೆಯ ಬಲ್ಲವರಾರು?

  ಕುಳಿತವನು ಅಲುಗದಂತೆ ತದೇಕ ಚಿತ್ತದಿಂದ ಕಡಲನ್ನು ನೋಡುತ್ತಿದ್ದ. ಹಾಗೇ ಕುಳಿತು ಅರ್ಧಗಂಟೆ ಕಳೆದಿತ್ತು. ಮೊಲದ ಬಾರಿಗೆ ಕಡಲ ಕಂಡವನ ಚಿತ್ತ ಕಲಕುವುದೇಕೆಂದು ಕುಳಿತಲ್ಲೇ ಅವನನ್ನು ಬಿಟ್ಟು ತಿರುಗಾಡಿ… Read more…

 • ಕೇರೀಜಂ…

  ಮಂಜೇಲ್ಮುಂಜೇಲಿ ಯೆದ್ಬೇಗ್ನೇ ಕೇರ್ಮುಂದ್ಗಡೆ ಸಿವಪ್ಪ ಚೂರಿ, ಕತ್ತಿ, ಕುಡ್ಗೋಲು, ಯಿಳ್ಗೆಮಣೆ, ಕೊಡ್ಲಿನ... ಮಸ್ಗೆಲ್ಗೆ ಆಕಿ, ಗಸ್ಗಾಸಾ... ನುಣ್ಗೆ ತ್ವಟ್ವಟ್ಟೇ... ನೀರ್ಬಟ್ಗಾಂತಾ, ಜ್ವಲ್ಸುರ್ಗಿಗ್ಯಾಂತಾ, ಅವ್ಡುಗಚ್ಗೊಂಡೂ ಮಸೆಯತೊಡ್ಗಿದ್ವನ... ಕಟ್ದಿ ತುರ್ಬು,… Read more…