ಆರೋಪ – ೧೪

ಆರೋಪ – ೧೪

ಚಿತ್ರ: ಜೆರಾರ್‍ಡ್ ಗೆಲ್ಲಿಂಗರ್‍

ಅಧ್ಯಾಯ ೨೭

ಹಿಸ್ಟರಿ ಕಾಂಗ್ರೆಸ್ ಬಹಳ ಅದ್ದೂರಿಯಿಂದ ನಡೆಯಿತು. ಪ್ರಧಾನ ಮಂತ್ರಿಯ ಉದ್ಘಾಟನಾ ಭಾಷಣವನ್ನು ಎಲ್ಲರೂ ಮೆಚ್ಚಿಕೊಂಡಿದ್ದರು. ಇದಾದ ಮೇಲೆ ನಿರಂಜನ್ ರೇ ಅರವಿಂದನನ್ನು ಮನೆಗೆ ಕರೆಸಿ ಊಟ ಹಾಕಿಸಿದರು. ಆತ್ಮೀಯವಾಗಿ ಅವನ ಊರು, ಮನೆ ಬಗ್ಗೆ ವಿಚಾರಿಸಿದರು. ಅದು ಬಹಳ ಸುಂದರವಾದ ಹಳ್ಳಿಯಾಗಿರಬೇಕಲ್ಲವೆ?” ಎಂದರು.

ಅರವಿಂದ “ಹೌದು” ಎಂದ.

ಆದರೆ ಊರ ನೆನಪುಗಳು ಈಗ ಮಾಯಹತ್ತಿದ್ದವು. ಹೈದರಾಬಾದಿಗೆ ಬಂದ ಮೇಲೆ ಅವನು ಒಮ್ಮೆಯೂ ಊರಿಗೆ ಹೋಗಿ ಬಂದಿರಲಿಲ್ಲ. ಯಾರಿಗೂ ಪತ್ರ ಬರೆದಿರಲಿಲ್ಲ. ಯಾರೊಂದಿಗೂ ಸಂಪರ್ಕವಿಲ್ಲ. ಯಾವುದೋ ಹುಚ್ಚು ವೇಗದಲ್ಲಿ ಗದ್ದಲದಲ್ಲಿ ಸೇರಿಕೊಂಡಂತಿತ್ತು. ಯಾರನ್ನು ಮಾತಾಡಿಸುವುದಕ್ಕೂ ಸಮಯವಿಲ್ಲ. ಇದೆಲ್ಲ ಏನು ಯಾಕೆ ಎಂದು ಕೇಳಿಕೊಳ್ಳುವಷ್ಟೂ ವ್ಯವಧಾನವಿಲ್ಲ.

ಒಂದು ದಿನ ಆಫೀಸು ರೂಮಿನಲ್ಲಿ ಕುಳಿತು ಕೆಲಸಮಾಡುತ್ತಿದ್ದ. ಹೊರಗೆ ತುಂತುರು ಮಳೆ, ಪೆನ್ನು ಕೆಳಗಿಟ್ಟು ಕಿಟಕಿಯ ಬಳಿ ಹೋಗಿ ನಿಂತು ಸಿಗರೇಟು ಹಚ್ಚಿಕೊಂಡ. ಏನೇನೋ ನೆನಪುಗಳು. ಅವುಗಳನ್ನು ಚದುರಿಸುವಂತೆ ಇಂಟರ್ ಕಾಮ್ ಸದ್ದಾಯಿತು. “ಸರ್ ನಿಮಗೆ ಫೋನ್!” ರಿಸೆಪ್ಪನ್ ಗೆ ಹೋಗಿ ಫೋನ್ ಕೈಗೆತ್ತಿಕೊಂಡು ಹೆಸರು ಹೇಳಿದ.

“ಹಲೋ!” ಹೆಂಗಸಿನ ದನಿ.
“ಯಸ್?”
“ಅರವಿಂದ್”
“ಸ್ಪೀಕಿಂಗ್”
“ನನ್ನ ಗುರುತು ಹತ್ತಲಿಲ್ವೆ?”
ಕಾತರದ, ಬಳಲಿಕೆಯ ಪ್ರಶ್ನೆ.
“ಇಲ್ಲ.”

ಶಕುಂತಳೆ ಇರಬಹುದೆ ಎಂದುಕೊಂಡ. ಆದರೆ ಅವಳ ಸ್ವರವೇ ಬೇರೆ, ತುಸು ಸೆಕ್ಸಿ ಎನ್ನಬಹುದಾದ ಸ್ವರ. ಈಗ ಮಾತನಾಡುತ್ತಿದ್ದ ಹೆಂಗಸಿನ ಸ್ವರ…

“ನಾನು ಮರೀನಾ”
“ಮರೀನಾ!”
ಆಶ್ಚರ್ಯದಿಂದ ಉದ್ಗರಿಸಿದ.
“ಹೌದು ಮರೀನಾ”
ನನಗೇಕೆ ಹೊಳೆಯಲೇ ಇಲ್ಲ ! ಟೆಲಿಫೋನು ಕಂಬಿಗಳ ಸದ್ದು ಗದ್ದಲಗಳ ನಡುವೆಯೂ ಅವಳ ಸ್ವರವನ್ನು ಸ್ಪಷ್ಟವಾಗಿ ಗುರುತಿಸಬಹುದಾಗಿತ್ತು.

“ಎಲ್ಲಿದ್ದೀಯಾ?”
“ರೇಲ್ವೆ ಸ್ಟೇಷನ್‌ನಲ್ಲಿ… ಸಿಕಂದರಾಬಾದ್ ರೇಲ್ವೆಸ್ಟೇಷನ್‌ಲ್ಲಿ. ಅರವಿಂದ್”

“ಅರ್ಧಗಂಟೆಯಲ್ಲಿ ಬರುತ್ತೇನೆ. ಪ್ಲಾಟ್‌ಫಾರ್ಮ್ ನಂಬರ್ ಒಂದರಲ್ಲಿ ಕಾದಿರು.”
“ಅರವಿಂದ್….”
“ಯಸ್?”
“ಹೀಗೆ ನಿಮ್ಮನ್ನು ಒಮ್ಮೆಲೆ ಅಚ್ಚರಿಗೊಳಿಸಬಾರದಿತ್ತು ನಾನು….”
ಅರವಿಂದ ಫೋನನ್ನು ಅದರ ತೊಟ್ಟಿಲಲ್ಲಿರಿಸಿ ಒಂದು ಕ್ಷಣ ನಿಂತ ಇಷ್ಟೊಂದು ಆತ್ಮೀಯವಾಗಿ ಅವನು ಎಂದೂ ಯಾರೊಂದಿಗೂ ಮಾತಾಡಿರಲಿಲ್ಲ ಈ ಊರಿಗೆ ಬಂದ ಮೇಲೆ, ಇಷ್ಟೊಂದು ಉದ್ಯೋಗವನ್ನೂ ಅನುಭವಿಸಿರಲಿಲ್ಲ. ರಿಸೆಪ್ಶನಿಸ್ಟ್ ಹುಡುಗಿ ಅವನ ಮುಖವನ್ನೇ ನೋಡುತ್ತಿದ್ದಳು.

“ಎನಿಥಿಂಗ್ ಬ್ಯಾಡ್?”
“ನೋ .”
ರಸ್ತೆಗೆ ಬಂದು ಆಟೋ ಹಿಡಿದ.
“ಸಿಕಂದರಾಬಾದ್ ಸ್ಟೇಷನ್ ಚಲೋ.”
ನೆನಪಿನ ಪುಟಗಳಿಂದ ಹೊಡೆದು ಹಾಕಿದವಳು ಈಗೇಕೆ ಬಂದಳು? ಅವಳ ಧ್ವನಿಯಲ್ಲಿ ಹಿಂಜರಿತವನ್ನು ಗುರುತಿಸಿದ್ದ. ಇಬ್ಬರೂ ಒಬ್ಬರನ್ನೊಬ್ಬರು ಯಾವ ಮುಖದಿಂದ ಎದುರಿಸುವುದು?

ನಾಗೂರಿನಿಂದ ಮರೀನಾ ಒಮ್ಮೆಲೆ ನಿರ್ಗಮಿಸಿದಾಗ ಅರವಿಂದನಿಗೆ ಮೊದಲು ಸಿಟ್ಟು, ಅವಮಾನ, ಮುಖಭಂಗಗಳ ಅನುಭವವಾಗಿತ್ತು. ಕ್ರಮೇಣ ಅಂದುಕೊಂಡಿದ್ದ- ಮರೀನಾ ತನಗೆ ಬಾಧ್ಯಳೆಂದು ಯಾಕೆ ತಾನು ತಿಳಿಯಬೇಕು? ಕೇವಲ ನಾಲ್ಕು ದಿನ ಜತೆಜತೆಯಾಗಿ ಓಡಾಡಿಕೊಂಡಿದ್ದ ಮಾತ್ರಕ್ಕೆ ಅವಳು ಅವಳ ಆಯ್ಕೆಯ ಸ್ವಾತಂತ್ರ್ಯವನ್ನು ತನಗೆ ಅರ್ಪಿಸಬೇಕೆಂದಿದೆಯೇ? ಅವಳು ರಾಜಶೇಖರನೊಂದಿಗೆ ಓಡಿಹೋಗಿರಬಹುದು ಎಂಬ ನಂಬಿಕೆಯಲ್ಲಿ ರಾಜಶೇಖರನನ್ನೂ ದ್ವೇಷಿಸಲು ತೊಡಗಿದ್ದ. ಆದರೆ ಮರೀನಾ ರಾಜಶೇಖರನೊಂದಿಗೆ ಓಡಿಹೋದಳೆಂಬುದಕ್ಕೆ ಏನೇನೂ ಆಧಾರವಿರಲಿಲ್ಲ. ಒಂದು ವೇಳೆ ಅದೇ ಸರಿಯಾಗಿದ್ದರೂ ತಾನೇಕೆ ಕರುಬಬೇಕು? ಹೀಗೆ ಮರೀನಾಳ ಪ್ರತ್ಯೇಕತೆಯನ್ನು ಒಪ್ಪಿಕೊಳ್ಳುವ ಮೂಲಕವೇ ಅವಳನ್ನು ತನ್ನ ಮನಸ್ಸಿನಿಂದ ಕಿತ್ತೊಗೆಯಲು ಪ್ರಯತ್ನಿಸಿದ್ದ.

ಸ್ಟೇಷನ್ ಮಂದೆ ಇಳಿದು ಫ್ಲಾಟ್ ಪಾರ್ಮ್ ಟಿಕೇಟು ತೆಗೆದುಕೊಂಡ. ಒಳಗೆ ಧಾವಿಸಿದ. ಅವನ ಆತುರಕ್ಕೆ ಯಾರೋ ಬಯ್ದರು. ಯಾವುದೋ ಗಾಡಿ ಆಗತಾನೇ ಬಂದುದರಿಂದ ಪ್ಲಾಟ್‌ಫಾರ್ಮ್ ಜನರಿಂದ ತುಂಬಿಹೋಗಿತ್ತು. ಬಹಳ ದೀರ್ಘ ಪ್ರಯಾಣವನ್ನು ಮುಗಿಸಿ ಬಟ್ಟೆ ಬರೆಯಲ್ಲ ಕೊಳಕಾದ ಜನರು. ಹೆಂಗಸರು, ಮಕ್ಕಳು, ಮುದುಕಿಯರು, ಗಂಟುಮೂಟೆಗಳು, ಭಯ ಆತಂಕಗಳಿಂದ ತುಂಬಿದ ಮುಖಗಳು, ಒಬ್ಬರ ಮೇಲೊಬ್ಬರು ಬೀಳುವ ಕೂಲಿಗಳು, ಜನರು ಇರುವೆಗಳಂತೆ ಬಾಗಿಲ ಮೂಲಕ ಹರಿಯುತ್ತಿದ್ದರು. ಇವರ ನಡುವೆ ಮರೀನಾಳನ್ನು ಕಂಡು ಹುಡುಕುವುದು ಅಸಾಧ್ಯ. ಜನದಟ್ಟಣೆ ಕರಗಲೆಂದು ಒಂದೆಡೆ ಕಾಯುತ್ತ ನಿಂತ.

ಪಕ್ಕದಲ್ಲೊಂದು ಪುಸ್ತಕದಂಗಡಿ, ಆಗತಾನೇ ಪಾರ್ಸಲ್ ಒಡೆದು ಒಬ್ಬಾತ ಹೊಸ ಹೊಸ ಪೇಪರ್‌ಬ್ಯಾಕ್ ಪುಸ್ತಕಗಳನ್ನು ಹೊರಗೆ ತೆಗೆದು ಹಾಕುತ್ತಿದ್ದ. ಕಣ್ಣು ಸೆಳೆಯುವ ಮುಖಚಿತ್ರಗಳು, ಹೊಸ ಕಾಗದದ ವಾಸನೆ ಅಷ್ಟು ದೂರಕ್ಕೆ ಬರುತ್ತಿತ್ತು. ಕೆಲವು ಗಿರಾಕಿಗಳು ಕುತೂಹಲದಿಂದ ಪುಸ್ತಕಗಳನ್ನು ಕೈಗೆತ್ತಿಕೊಂಡು ನೋಡುತ್ತಿದ್ದರು. ಪ್ಲಾಟ್‌ಫಾರ್ಮಿನಲ್ಲಿದ್ದ ಧ್ವನಿವರ್ಧಕದಿಂದ ಸೂಚನೆಗಳು
ಬರುತ್ತಿದ್ದುವು : “ತಲೆಹೊರಗೆ ಒಂದು ರೂಪಾಯಿಗಿಂತ ಹೆಚ್ಚು ಕೂಲಿ ಕೊಡ ಬೇಕಾಗಿಲ್ಲ” ಇತ್ಯಾದಿ.

ಯಾರೋ ಹೆಸರು ಹಿಡಿದು ಕೂಗಿದಂತಾಯಿತು.

ಅರವಿಂದ ತಿರುಗಿ ನೋಡಿದ. ಮರೀನಾ ! ಕೈಚೀಲವನ್ನು ಎದೆಗವಚಿ ಕೊಂಡು ನಿಂತಿದ್ದಳು. ಅಧೈರ್ಯದ ಮುಗುಳುನಗೆ.

ಅರವಿಂದ ಏನೋ ಹೇಳಬೇಕೆಂದು ಬಾಯಿತೆರೆದ ಸುಮ್ಮನಾದ. ಮರೀನಾ ಹೇಳಿದಳು : “ಅಷ್ಟು ಹೊತ್ತಿನಿಂದಲೂ ನಿಮ್ಮನ್ನು ಕಂಡಿದ್ದೆ, ಆದರೆ ನೂಕು ನುಗ್ಗಲಿನಲ್ಲಿ ಸಮೀಪಿಸಲು ಸಾಧ್ಯವಾಗಲಿಲ್ಲ….”

ಅಷ್ಟರಲ್ಲಿ ಧ್ವನಿವರ್ಧಕ ಕರ್ಕಶವಾಗಿ ಮತ್ತೇನೋ ಹೇಳತೊಡಗಿತು. ಮರೀನಾಳ ಮಾತು ಕೇಳಿಸಲಿಲ್ಲ.
“ಹೊರಗೆ ಹೋಗೋಣ. ಎಲ್ಲಿ ನಿಮ್ಮ ಸೂಟ್ ಕೇಸು?”

“ಸೂಟ್ ಕೇಸೇನೂ ಇಲ್ಲ. ಇರೋದು ಈ ಬ್ಯಾಗ್ ಮಾತ್ರ.”

ಅವಳ ಕೈಹಿಡಿದುಕೊಂಡು ಜನಸಂದಣಿಯಲ್ಲಿ ಸೇರಿದ, ಸ್ಟೇಷನ್‌ನ ಹೊರಗೆ ಬಂದ ಮೇಲೆ ಅವಳೆಂದಳು : “ಇದ್ದಕ್ಕಿದ್ದಂತೆ ಹೊರಟು ಬರಬೇಕಾಯಿತು ನಾನು.”

ಎಲ್ಲಿಂದ, ಯಾಕೆ ಎಂದೆಲ್ಲ ಅವನು ವಿಚಾರಿಸಲಿಲ್ಲ. ಆಯಾಸ ಅವಳ ಮುಖದ ಮೇಲೆ ಬರೆದಂತಿತ್ತು. ಮರೀನಾ ಮತ್ತೆ ಅನಾರೋಗ್ಯಕ್ಕೆ ತುತ್ತಾದವಳಂತೆ ಕಂಡುಬಂದಳು. ಅವಳ ಕೈ ತಣ್ಣಗಿದ್ದ ಹಾಗೆ ಅನಿಸಿತು.
ಮುಂಜಾನೆಯೇ ನಾನು ಸ್ಟೇಷನ್ ತಲುಪಿದೆ. ಒಂಬತ್ತು ಗಂಟೆಯ ಹೊತ್ತಿಗೆ ನಿಮ್ಮ ಆಫೀಸಿಗೆ ಫೋನ್ ಮಾಡಿದೆ. ಬಹುಶಃ ಆಗ ಯಾರೂ ಆಫೀಸಿಗೆ ಬಂದಿರಲಾರರು. ಯಾರೂ ಫೋನ್ ಎತ್ತಿಕೊಳ್ಳಲಿಲ್ಲ. ಸ್ವಲ್ಪ ಹೊತ್ತು ತಡೆದು ಮತ್ತೆ ಪ್ರಯತ್ನಿಸಿದಾಗ ನೀವು ಸಿಕ್ಕಿದಿರಿ.”

“ನಾನು ಇಲ್ಲಿದ್ದೇನೆಂದು ಹೇಗೆ ಗೊತ್ತಾಯಿತು.?”

“ನನಗೆ ಗೊತ್ತಿತ್ತು. ನಿಮ್ಮ ಬಗ್ಗೆ ವಿಚಾರಿಸಿ ತಿಳಿದುಕೊಳ್ಳುತ್ತಿದ್ದೆ.”
ಸೈಕಲ್ ರಿಕ್ಷಾ, ಆಟೋರಿಕ್ಷಾ ಮಂದಿ ಬಂದು ಅವರನ್ನು ಸುತ್ತುವರಿದರು. ಅರವಿಂದ ಅವಳಿಗೆ ಹೇಳಿದ : “ನಾನಿರೋದು ಒಂದು ಮೆನ್ಸ್ ಹಾಸ್ಟೆಲ್‌ನಲ್ಲಿ. ಅಲ್ಲಿಗೆ ನಿನ್ನನ್ನು ಕರೆದೊಯ್ಯುವಂತಿಲ್ಲ.”

“ಬಹಳ ಸುಸ್ತಾಗಿದ್ದೇನೆ. ಎಲ್ಲಾದರೂ ಹೋಟೆಲಿನಲ್ಲಿ ಇಳಿಸಿ.”

“ಹೋಟೆಲ್‌ನಲ್ಲೆ ! ನಿನ್ನ ಬಳಿ ಏನೂ ಇದ್ದಹಾಗಿಲ್ಲ.”

“ಸ್ವಲ್ಪ ಹಣ ಇದೆ. ದಾರಿಯಲ್ಲಿ ಸ್ವಲ್ಪ ಬಟ್ಟೆಬರೆ ಕೊಂಡುಕೊಳ್ಳುತ್ತೇನೆ.”
ಇಬ್ಬರೂ ಮೊದಲು ಶಾಪಿಂಗ್ ಮುಗಿಸಿದರು ಬಟ್ಟೆ ಬರೆ ಇತ್ಯಾದಿಗಳನ್ನು ಒಂದು ಸೂಟ್‌ಕೇಸಿನಲ್ಲಿ ತುರುಕಿದ್ದಾಯಿತು. ಪಕ್ಕದ ಇನ್ನೊಂದು ಅಂಗಡಿಯಿಂದ ಮರೀನಾ ಏನೇನೋ ಕ್ಯಾಪ್ಸೂಲುಗಳನ್ನು ಕೊಂಡಳು.

ಅರವಿಂದ ಪರಿಚಯದ ಕನ್ನಡದವರೊಬ್ಬರ ಹೋಟೆಲಿಗೆ ಅವಳನ್ನು ಕರೆ ದೂಯ್ದು ಅಟ್ಯಾಚ್ ಬಾತ್‌ನ ಒಂದು ರೂಮು ಕೊಡಿಸಿದ. “ನನ್ನ ಸ್ನೇಹಿತೆ. ಯಾವುದೋ ಕೆಲಸದ ಮೇಲೆ ಬಂದಿದ್ದಾರೆ. ಒಂದೆರಡು ದಿನ ಇರುತ್ತಾರೆ,” ಎಂದ.

ಮರೀನಾ ಲೆಡ್ಜರ್‌ನಲ್ಲಿ ಹೆಸರು, ವಿಳಾಸ ಬರೆದಳು.

“ಅಡ್ವಾನ್ಸ್?”
“ಬೇಕಿಲ್ಲ.” ಎಂದರು ಮಾಲಿಕರು,
ಹೋಟೆಲ್ ಹುಡುಗ ಸೂಟ್‌ಕೇಸನ್ನು ತೆಗೆದುಕೊಂಡು ಹೋಗಿ ರೂಮಿನಲ್ಲಿರಿಸಿ, “ಕಾಫಿಗೆ ಹೇಳಲೆ?” ಅರವಿಂದ ಕೇಳಿದ.
“ಪ್ಲೀಸ್!”
ಅರವಿಂದ ಕಾಫಿಗೆ ಹೇಳಿದ.
ಮರೀನಾ ಹಾಸಿಗೆಯಲ್ಲಿ ಕುಳಿತಳು. ಹೊರಗೆ ಬಿಸಿಲಿನಲ್ಲಿ ಸುತ್ತಾಡಿ ಬಹಳ ಸುಸ್ತಾಗಿ ಬಿಟ್ಟಿತ್ತು.

“ಮರೀನಾ!” ಅವಳು ತಲೆಯೆತ್ತಿ ನೋಡಿದಳು.
“ಲೆಡ್ಜರಿನಲ್ಲಿ ಸುಳ್ಳು ಹೆಸರು ಯಾಕೆ ಬರೆದೆ?”
“ಸುಳ್ಳು ಹೆಸರೆ?”
“ಮೀರಾ ಎಂದರೆ ಯಾರು?”
“ಓ ! ಅದೇ ! ಕಳೆದ ಕೆಲವು ವರ್ಷಗಳಿಂದ ಅದೇ ನನ್ನ ಹೆಸರು.” “ಯಾಕೆ?”
ಅವನ ಧ್ವನಿಯಲ್ಲಿ ಕಾತರ, ಸಿಟ್ಟು, ಕಳಕಳಿ ತುಂಬಿದ್ದುವು. ಆ ಒಂದು ಪ್ರಶ್ನೆಯಲ್ಲಿ ಅವನು ಎಲ್ಲವನ್ನೂ ಕೇಳುವಂತಿತ್ತು.
“ಹೇಳುತ್ತೇನೆ….”
ಅವಳು ಮೇಲಿಂದ ಮೇಲೆ ಕೆಮ್ಮತೊಡಗಿದಳು. ಒಣ ಕೆಮ್ಮು, ಎದೆ ಗೂಡನ್ನು ಒಂದೇ ಸವನೆ ಬಡಿಯುತ್ತಿತ್ತು. ಕಣ್ಣುಗಳಲ್ಲಿ ವಿಷಾದ, ಅಸಹಾಯಕತೆ, ಯಾತನೆ, ಉಸಿರಿಗಾಗಿ ಅವಳು ಚಡಪಡಿಸತೊಡಗಿದಳು. ಅರವಿಂದ ಎದ್ದವನೆ ಅವಳನ್ನು ತನ್ನ ಎದೆಗೆ ಆನಿಸಿ ಬೆನ್ನು ತಡವತೊಡಗಿದ. ಎಷ್ಟೋ ಹೊತ್ತಿನ ಮೇಲೆ ಮತ್ತೆ ಅವಳ ಉಸಿರಾಟ ಹದಕ್ಕೆ ಬಂತು.
*****

ಅಧ್ಯಾಯ ೨೮

ಹೋಟೆಲಿನಲ್ಲಿ ಹೆಚ್ಚು ದಿನ ಉಳಿದುಕೊಳ್ಳುವಂತಿಲ್ಲ. ಅದೂ ಮರಿನಾಳ ಈ ಸ್ಥಿತಿಯಲ್ಲಿ, ಅವಳಿಗೊಂದು ವಸತಿ ಹುಡುಕಬೇಕಿತ್ತು. ಪತ್ರಿಕೆಗಳ ಜಾಹೀರಾತು ಕಾಲಮುಗಳ ಮೇಲೆ ಕಣೋಡಿಸಿದ. ಅವಳಿಗೆ ಅನುಕೂಲವಾದ ಯಾವುದೂ ಕಾಣಿಸಲಿಲ್ಲ.

ಅರವಿಂದನಿಗೆ ತಟ್ಟನೆ ಶಕುಂತಳೆಯ ನೆನಪಾಯಿತು. ಅವಳ ಸಹಾಯ ಕೇಳಬಹುದೆನಿಸಿತು. ಸ್ವಲ್ಪ ಸಮಯದ ಮಟ್ಟಿಗಾದರೂ ಅವಳು ಮರೀನಾಳಿಗೆ ಆಶ್ರಯ ನೀಡಬಹುದಾದರೆ ತುಂಬಾ ಚೆನ್ನಾಗಿರುತ್ತದೆ ಅಂದುಕೊಂಡ.
ಶಕುಂತಳೆ ರಿಸರ್ಚಿಗೆ ತಿಲಾಂಜಲಿಯನ್ನರ್ಪಿಸಿ ನಗರದ ಬ್ಯಾಂಕೊಂದರಲ್ಲಿ ಪ್ರೊಬೆಶನರಿ ಆಫೀಸರ್ ಆಗಿ ಕೆಲಸ ಮಾಡುತ್ತಿರುವುದು ಅವನಿಗೆ ಗೊತ್ತಿತ್ತು.

ಅರವಿಂದ ಹೋದಾಗ ಅವಳು ಯಾವುದೋ ಕಾಗದ ಪತ್ರಗಳನ್ನು ನೋಡುವುದರಲ್ಲಿ ತಲ್ಲೀನಳಾಗಿದ್ದಳು. ಅರವಿಂದನನ್ನು ಕಂಡು ತುಸು ಅಚ್ಚರಿ ಸೂಚಿಸಿದಳು. ಅಲ್ಲಿ ಮಾತಾಡುವುದಕ್ಕಾಗದೆ ಲಾಂಜಿಗೆ ಬಂದು ಕುಳಿತಳು.

“ಹೀಗೇಕೆ ಮಾಡಿದಿರಿ?”

“ಹೇಗೆ?”
“ಓದು ಬಿಟ್ಟು ಈ ಕೆಲಸಕ್ಕೆ ಯಾಕೆ ಸೇರಿಕೊಂಡಿರಿ?”
“ನನಗೆ ಕೆಲಸ ಬೇಕಿತ್ತು, ಅದಕ್ಕೆ.” ಮೊಟಕಾಗಿ ಉತ್ತರಿಸಿದಳು ಶಕುಂತಳೆ.

ಅವಳು ಬದಲಾದಂತೆ ಕಂಡು ಬಂದಳು. ಮೈಕೈ ತುಂಬಿತ್ತು. ಸಂತೋಷದಲ್ಲಿದ್ದಂತೆ ತೋರಿತು. ಆದರೂ ಈ ಬ್ಯಾಂಕಿಂಗ್ ಪರಿಸರದಲ್ಲಿ ಅವಳನ್ನು ಊಹಿಸುವುದೂ ಕಷ್ಟದ ಮಾತಾಗಿತ್ತು. ತಾವಿಬ್ಬರೂ ನಡೆಸಿದ ಅನೇಕ ಚರ್ಚೆಗಳು ಅವನ ನೆನಪಿಗೆ ಬಂದುವು. ಶಕುಂತಳೆಯ ಮಾತು ನಿರರ್ಗಳ, ಸ್ಟಾಲಿನನ ರಶಿಯವೇ, ರೊಡೇಶಿಯಾದ ಸ್ವಾತಂತ್ರವೇ, ದಕ್ಷಿಣ ಅಮೇರಿಕೆಗಳ ಸಮಸ್ಯೆಯೇ, ಹೈದರಾಬಾದು ಎಲೀನೀಕರಣವೇ, ಸ್ತ್ರೀ ಸ್ವಾತಂತ್ರ್ಯವೇ- ಯಾವ ವಿಷಯವೇ ಆಗಲಿ ಶಕುಂತಳೆಗೆ ಅದರಲ್ಲಿ ಆಸಕ್ತಿ, ಇಂಥ ಹೆಣ್ಣು ಈಗ ಎಲ್ಲವನ್ನೂ ಬಿಟ್ಟು ಲೆಡ್ಜರುಗಳನ್ನು ಎತ್ತಿ ಹಾಕುವ ಕೆಲಸದಲ್ಲಿ ತೊಡಗಿದ್ದಳು. ನೀಟಾಗಿ ಪ್ರೆಸ್ ಮಾಡಿದ ಸೀರೆ, ಯಾವುದೋ ಬೆಲೆ ಬಾಳುವ ಅತ್ತರು. ಒಪ್ಪವಾಗಿ ಬಾಚಿದ ತಲೆಗೂದಲು, ಇವಳೇ ನಿಜಕ್ಕೂ ಶಕುಂತಳೆಯೇ?

“ಏನೊ ಯೋಚಿಸುತ್ತಿದ್ದೀರಿ?”
“ಏನೂ ಇಲ್ಲ.”
ಶಕುಂತಳೆ ವ್ಯಂಗ್ಯವಾಗಿ ನಕ್ಕಳು.
“ಓಕೇ. ಈಗ ಬಂದ ಉದ್ದೇಶ?”
ಅರವಿಂದ ಅವಳ ಮುಖ ನೋಡಿದ. ಅದರಲ್ಲಿರುವ ಅಸಹನೆ, ಅಸಡ್ಡೆ, ಸಿಟ್ಟುಗಳನ್ನು ಗುರುತಿಸಿದ. ಅವಳೀಗ ತನ್ನ ಹಿಂದಿನದೆಲ್ಲ ಮರೆಯಲು ಪ್ರಯತ್ನಿಸುವಂತಿತ್ತು. ಸಂಸ್ಥೆಗೆ ಸಂಬಂಧಿಸಿದ ಯಾರೊಂದಿಗೂ ಮಾತಾಡುವುದು ಅವಳಿಗೆ ಬೇಕಿರಲಿಲ್ಲ.
“ಸುಮ್ಮಗೇ” ಎಂದ.
ಅಷ್ಟರಲ್ಲಿ ಯಾರೋ ದಪ್ಪದ ವ್ಯಕ್ತಿಯೊಬ್ಬರು ಬಂದು ಅವರನ್ನು ಸೇರಿ ಕೊಂಡರು. ಶಕುಂತಳೆ ಗೊಂದಲದಲ್ಲಿ ಬಿದ್ದಂತೆ ಕಂಡಿತು.
“ಇವರು ನನ್ನ ಹಸ್ಬೆಂಡ್,” ಎಂದಳು.
ಶಕುಂತಳೆಯ ಗಂಡನಿಗೆ ಮಧ್ಯವಯಸ್ಸಿರಬಹುದು. ಕಿವಿಯ ಬಳಿ ಕೂದಲು ನರೆಯಲು ಆರಂಭವಾಗಿತ್ತು.
“ಇವರು ಅರವಿಂದ ಅಂತ… ಸಂಶೋಧನೆ ಮಾಡುತ್ತಿದ್ದಾರೆ.”
“ಗ್ಲ್ಯಾಡ್ ಟು ಮೀಟ್ ಯೂ, ನಾನು ಆನಂದರಾವ್ ಅಂತ.”
“ಇಲ್ಲಿ ಚೀಫ್ ಅಕೌಂಟೆಂಟ್ ಆಗಿದ್ದಾರೆ,” ಶಕುಂತಳೆ ಸೇರಿಸಿದಳು.
“ಯಾವ ವಿಷಯದಲ್ಲಿ ಸಂಶೋಧನೆ ಮಾಡುತ್ತಿದ್ದೀರ?”
“ಕುತುಬ್ ಶಾಹಿಗಳ ಬಗ್ಗೆ.”
ಅನಂದರಾವ್ ಗೊಳ್ಳನೆ ನಕ್ಕರು.
“ನಗುವಂಥಾದ್ದೇನಿದೆ ಅದರಲ್ಲಿ?” ಶಕುಂತಳೆ ಕೇಳಿದಳು.
“ಅಲ್ಲಾ, ನನಗೆ ಕುತುಬ್‌ಶಾಹಿ ಅಂದೊಡನೆ ಅನಬ್‌ಶಾಹಿ ದ್ರಾಕ್ಷಿ ನೆನಪಾಯ್ತು. ಅದಕ್ಕೇ.”

ಅರವಿಂದ ಮರೀನಾಳ ಸುದ್ದಿ ಎತ್ತದೆ ಅಲ್ಲಿಂದ ಮರಳಿದ.
ಬಡಾವಣೆಯೊಂದರಲ್ಲಿ ಒಂದು ರೂಮು ಸಿಕ್ಕಿತು. ಮನೆಯಲ್ಲಿ ವಯಸ್ಸಾದ ಗಂಡ, ಹೆಂಡತಿ ಇಬ್ಬರೇ. ಮಕ್ಕಳೆಲ್ಲ ಎಲ್ಲೆಲ್ಲೋ ದೂರ ಇದ್ದುದರಿಂದ ಒಂದು ರೂಮನ್ನು ಬಾಡಿಗೆಗೆ ಕೊಡಲು ನಿರ್ಧರಿಸಿದ್ದರು. ರೂಮಿನ ಜತೆ ಊಟವನ್ನೂ ಹಾಕಲು ತಯಾರಾಗಿದ್ದರು. ಖರ್ಚು ಸ್ವಲ್ಪ ದುಬಾರಿಯಂತೆ ಕಂಡರೂ ಭದ್ರತೆಯ ದೃಷ್ಟಿಯಿಂದ ಅನುಕೂಲವಾಗಿತ್ತು. ಎರಡು ತಿಂಗಳ ಬಾಡಿಗೆ ಹಣ ಅಡ್ವಾನ್ಸ್ ತೆತ್ತು, ಅರವಿಂದ ಮರೀನಾಳನ್ನು ಹೋಟೆಲಿನಿಂದ ಮುಕ್ತಿಗೊಳಿಸಿದ.

ಈ ಮಧ್ಯೆ ಅವಳ ದೇಹಸ್ಥಿತಿಯ ಬಗ್ಗೆ ಅವನಿಗೆ ಗಾಬರಿಯಾಗತೊಡಗಿತು. ಮರೀನಾ ಮಾತ್ರ ನನಗೇನೂ ಆಗುತ್ತಿಲ್ಲ, ನಿಮಗೆ ಸುಮ್ಮನೆ ಗಾಬರಿ ಎನ್ನುತ್ತಿದ್ದಳು. ನಂತರ ಅವನ ಒತ್ತಾಯಕ್ಕೆ ಡಾಕ್ಟರನ್ನು ಕಾಣಲು ಒಪ್ಪಿದಳು. ಎಕ್ಸ್‌ರೇ, ರಕ್ತಪರೀಕ್ಷೆ ಎಲ್ಲ ಆದ ನಂತರ ಡಾಕ್ಟರರು ಅರವಿಂದನನ್ನು ಕರೆದು ಕ್ಷಯದ ಸೂಚನೆಯಿರುವುದಾಗಿ ಹೇಳಿದರು.

“ಏನು ಮಾಡಬೇಕು?”
“ದೀರ್ಘ ಕಾಲದ ಚಿಕಿತ್ಸೆ ಬೇಕಾಗಬಹುದು.”
“ಗುಣವಾಗುತ್ತದೆಯೆ?”
“ಕ್ಷಯ ಈಗ ಗುಣವಾಗದ ರೋಗವೇನೂ ಅಲ್ಲ. ಅಲ್ಲದೆ ಗಾಬರಿಯಾಗುವಷ್ಟು ಅಡ್ವಾನ್ಸ್ ಆಗಿಲ್ಲ. ಒಳ್ಳೇ ಹವೆ ಮುಖ್ಯ. ಹವಾಬದಲಾವಣೆ ಸಾಧ್ಯವೆ?”

ಅರವಿಂದ ಮರೀನಾಳಿಗೆ ರೋಗದ ಬಗ್ಗೆ ತಿಳಿಸದೆ ಹವಾಬದಲಾವಣೆ ಬಗ್ಗೆ ಡಾಕ್ಟರರು ಹೇಳಿದುದನ್ನು ತಿಳಿಸಿದ. ನಾಗೂರು ಅವನ ಮನಸ್ಸಿನಲ್ಲಿತ್ತು. ನಾಗೂರಿನಲ್ಲಿ ಅವಳು ಮೊದಲು ಬಂದಿಳಿದಾಗಲೂ ಇಂಥದೇ ಸ್ಥಿತಿಯಲ್ಲಿದ್ದಳು. ಆದರೆ ಒಂದೆರಡು ತಿಂಗಳುಗಳಲ್ಲಿ ಪೂರ್ಣ ಬದಲಾಗಿ ಬಿಟ್ಟಿದ್ದಳು.

ಮರೀನಾ ಮಾತ್ರ ಎಲ್ಲಿಗೂ ಹೋಗುವ ಆತುರ ತೋರಲಿಲ್ಲ.

“ಅರವಿಂದ್, ನಿಮ್ಮ ಸಮಯ ನನಗೋಸ್ಕರ ಹಾಳುಮಾಡಿಕೋಬೇಡಿ. ನನ್ನ ಬಗ್ಗೆ ಏನೂ ಯೋಚನೆ ಬೇಡ. ಮೊದಲಿನಿಂದಲೂ ನನ್ನ ಆರೋಗ್ಯ ಅಷ್ಟ ಕಷ್ಟೇ. ಹೀಗೆ ಇದ್ದಕ್ಕಿದ್ದಂತೆ ಬಂದು ನಿಮಗೆ ತೊಂದರೆ ಕೊಟ್ಟುದು ನನ್ನ ತಪ್ಪು ಈಗ ನನಗೆ ಬೇಕಾಗಿರೋದು ಒಂದು ಕೆಲಸ…. ಅಷ್ಟು ಮಾಡಿ ಕೊಡಿ,” ಎಂದು ಹೇಳತೊಡಗಿದಳು.

ಚಿಕಿತ್ಸೆಯೇನೋ ಮುಂದರಿಯುತ್ತಿತ್ತು. ಆದರೆ ಅವಳ ಮನಸ್ಸು ನೆಮ್ಮದಿಯಲ್ಲಿರಲಿಲ್ಲ. ಎಷ್ಟೋ ಬಾರಿ ಏನೋ ಹೇಳಲು ಬಾಯಿ ತೆರೆದು ಸುಮ್ಮನಾಗಿಬಿಡುತಿದ್ದಳು. ಅರವಿಂದ ಅವಳ ಗತಜೀವನದ ಬಗ್ಗೆ ಏನನ್ನೂ ಕೇಳುತ್ತಿರಲಿಲ್ಲ. ಯಾವ ನೆನಪುಗಳನ್ನೂ ಮಾಡುತ್ತಿರಲಿಲ್ಲ.

ಅನೇಕ ದಿನಗಳ ನಂತರ ಅವನಿಗೆ ರೆಡ್ಡಿಯ ನೆನಪಾಯಿತು. ಅವನನ್ನು ಹೋಗಿ ಭೇಟಿ ಮಾಡಿದ. ಮರೀನಾಳ ವಿಷಯ ಹೇಳಿದ. ನನ್ನ ಗೆಳತಿ, ಅವಳಿಗೊಂದು ಕೆಲಸ ಬೇಕು. ಗ್ರಾಫಿಕ್ ಕಲೆ ಗೊತ್ತು, ಸಂಬಳ ಎಷ್ಟಾದರೂ ಚಿಂತಿಲ್ಲ ಎಂದ.

ರೆಡ್ಡಿ ಪ್ರಯತ್ನಿಸುತ್ತೇನೆ ಎಂದು ಭರವಸೆ ಕೊಟ್ಟ. ಅವನು ತಾನೇ ಕೆಲಸ ಬಿಟ್ಟು ಸ್ವಂತ ಪತ್ರಿಕೆಯೊಂದನ್ನು ಹಾಕುವ ಯೋಜನೆಯಲ್ಲಿದ್ದ.

ರೆಡ್ಡಿಯ ಪತ್ರಿಕೆಯ ಮಾಲಿಕ ಮಾರ್ವಾಡಿ ತಿಂಗಳಿಗೆ ಮುನ್ನೂರ ಐವತ್ತು ರೂಪಾಯಿ ಸಂಬಳದಲ್ಲಿ ಮರೀನಾಳನ್ನು ತಾತ್ಕಾಲಿಕವಾಗಿ ಕೆಲಸಕ್ಕೆ ತೆಗೆದು ಕೊಳ್ಳಲು ಒಪ್ಪಿದ. ಆರ್ಡರ್ ದೊರೆತ ಮರುದಿನವೇ ಅವಳು ಕೆಲಸಕ್ಕೆ ಸೇರಿ
ಕೊಂಡಳು.

“ಖುಷಿಯಾಯಿತೆ?” ಅರವಿಂದ ಕೇಳಿದ, “ಓ ಯಸ್ ! ನಿಮ್ಮ ಉಪಕಾರ ಮರೆಯಲಾರೆ.”

ಅವಳಿಗೆ ನಿಜಕ್ಕೂ ಖುಷಿಯಾಗಿತ್ತೆ? ಕೇವಲ ಒಂದು ಕೆಲಸ ಹುಡುಕಿ ಕೊಂಡು ಅವಳು ಇಲ್ಲಿಗೆ ಬಂದಳೆ? ಹೈದರಾಬಾದು ಅವಳನ್ನು ತಿಂದುಹಾಕಿತ್ತು. ದಿನಾ ಆಫೀಸಿಗೆ ಹೋಗಿ ಬರುವುದಕ್ಕೆ ಸೀಸನ್ ಟಿಕೇಟು ತೆಗೆದುಕೊಂಡಿದ್ದಳು. ಕೈಚೀಲ, ಅದರೊಳಗೆ ಅಲೂಮಿನಿಯಮಿನ ಪುಟ್ಟದೊಂದು ಲಂಚ್‌ಬಾಕ್ಸ್, ಕೋಂಪ್ಯಾಕ್ಟ್. ಜನಸಮುದ್ರದಲ್ಲಿ ಕರಗುತ್ತಿದ್ದಳು-ಮರೀನಾ.

ಮಸ್ಕರೆನ್ನಾ ಒಮ್ಮೆ ಹೇಳಿದ್ದರು: “ಹೆಸರಿಗೆ ತಕ್ಕಂತೆ ಅವಳು ಅಗಾಧವಾಗಿದ್ದಾಳೆ. ಟೆಂಪರಮೆಂಟಲ್ ಕೂಡ, ಕೆಲವೊಮ್ಮೆ ನನ್ನ ಮಗಳೇ ನನಗೆ ಅರ್ಥವಾಗುವುದಿಲ್ಲವಲ್ಲ ಎನಿಸುತ್ತಿದೆ.”

ಅರವಿಂದ ಅಂದುಕೊಂಡಂತೆ ಮರೀನಾ ಚೇತರಿಸಿಕೊಳ್ಳಹತ್ತಿದ್ದಳು. ಆಫೀಸಿನಲ್ಲಿ ಅವಳಿಗೆ ಗ್ರಾಫಿಕ್ ಕೆಲಸ ಕೊಟ್ಟಿದ್ದರು. ಅವಳ ಕಲೆಗಾರಿಕೆ ಎಲ್ಲರಿಗೂ ಇಷ್ಟವಾಗಿತ್ತು. ಕೆಲಸವನ್ನು ಅವಳು ಮೊತ್ತ ಮೊದಲಿಗೆ ಆಸ್ಪದಿಸುವಂತೆ ಕಂಡಿತು. ಆದರೂ ಅವಳು ಹೆಚ್ಚಾಗಿಯೂ ಯಾರೊಂದಿಗೂ ಬೆರಯುವ ಇರಾದೆ ತೋರಿಸಲಿಲ್ಲ. ಅರವಿಂದ ಬಂದು ಅವನಾಗಿ ಎಬ್ಬಿಸಿದರೆ ಮಾತ್ರ ಅವನೊಂದಿಗೆ ಹೊರಗೆ ತಿರುಗಾಡಲು ಬರುತ್ತಿದ್ದಳು. ಒಂದೆರಡು ಬಾರಿ ಅವಳನ್ನು ಸಿನಿಮಾಕ್ಕೂ ಕರೆದು ಕೊಂಡು ಹೋಗಿದ್ದ. ನಗರದ ಒಳ್ಳೆ ರೆಸ್ಟುರಾಂಟುಗಳಲ್ಲಿ ಊಟ ಮಾಡಿದ್ದರು. ಮೂಸಿಯಮ್ ಮುಂತಾದ ಕಡೆ ಸುತ್ತಿದ್ದರು.

ಒಂದು ದಿನ ಸುತ್ತಾಡಿಕೊಂಡು ಮರೀನಾಳ ರೂಮು ಸೇರುವಾಗ ರಾತ್ರಿಯಾಗಿತ್ತು.
ಅರವಿಂದ ಹೊರಡುವಾಗ ಮರೀನಾ ಹೇಳಿದಳು.

“ಅರವಿಂದ್‌ !”
ಅವಳು ಮಾತಿಗೆ ತಡವರಿಸುವಂತೆ ಕಂಡಳು.
“ಏನು?”
“ನನ್ನದೊಂದು ಕೋರಿಕೆ.”
“ಹೇಳು”
“ನೀವು ಹೀಗೆ ಆಗಾಗ ನನ್ನನ್ನು ನೋಡಲು ಬರುತ್ತಿರುವುದು ಸರಿಯಲ್ಲ.” ಅರವಿಂದ ಒಂದು ಕ್ಷಣ ಅವಾಕ್ಕಾದ.
“ಯಾಕೆ?”
“ನಿಮಗೆ ಸುಮ್ಮನೆ ತೊಂದರೆ ಸಮಯ ಹಾಳು.”
“ಅದೇನೂ ಇಲ್ಲ.”
“ಮಾತ್ರವಲ್ಲ….”
“ಮತ್ತೆ?”
“ಜನ ಏನುದುಕೊಳ್ಳುತ್ತಾರೆ !”
“ಅಷ್ಟೇನೇ?”
“ಅಷ್ಟು ಸಾಲದೆ?”
ಅರವಿಂದನಿಗೆ ಫಕ್ಕನೆ ರೇಗಿತು.

“ರಾಜಶೇಖರನೊಂದಿಗೆ ಓಡಿ ಹೋಗುವಾಗ ಜನ ಏನೂ ಅಂದುಕೊಳ್ಳಲಿಲ್ಲವೆ? ನನಗೆ ಗೊತ್ತು ನೀನೆಂದೂ ನನ್ನನ್ನು ಮೆಚ್ಚಲಿಲ್ಲ. ನಾನು ನಿನಗೆ ಏನೂ
ಅಲ್ಲ.”

ಮರೀನಾ ಬೆರಗಾಗಿ ಅವನನ್ನು ನೋಡುತ್ತಿರುವಂತೆಯೇ ಅಲ್ಲಿಂದ ಧಡ ಧಡನೆ ಮೆಟ್ಟಲಿಳಿದು ರಸ್ತೆಗೆ ಬಂದ. ಖಾಲಿ ಆಟೋ ಒಂದನ್ನು ನಿಲ್ಲಿಸಿ ಹತ್ತಿದ ಡ್ರೈವರ್ ಕೇಳಿದ : “ಕಿಧರ್ ಸಾಬ್?”
ಎಲ್ಲಿಗೆ? ತನ್ನ ವಿಳಾಸವೇ ಮರೆತುಹೋದಂತೆ ಅನಿಸಿತು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವರದಿಗಾರ
Next post ಸ್ವರ್ಗದಲಿ ದೇವ ನಗುತಿಹನೇನು?

ಸಣ್ಣ ಕತೆ

  • ಆನುಗೋಲು

    ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ… Read more…

  • ಜಡ

    ಮಾರಯ್ಯನನ್ನು ಅವನ ಹಳ್ಳಿಯಲ್ಲಿ ಹಲವರು ಹಲವು ಹೆಸರುಗಳಿಂದ ಕರೆಯುತ್ತಿದ್ದರು. ಹಾಗಾಗಿ ಅವನ ನಿಜವಾದ ಪೂರ್ತಿ ಹೆಸರು ಮಾರಯ್ಯನೆಂಬುವುದು ಸಮಯ ಬಂದಾಗ ಅವನಿಗೆ ಒತ್ತಿ ಹೇಳಬೇಕಾಗಿ ಬರುತ್ತಿತ್ತು. ಅಂತಹ… Read more…

  • ಕರೀಮನ ಪಿಟೀಲು

    ಕರೀಮನ ಹತ್ತಿರ ಒಂದು ಪಿಟೀಲು ಇದೆ. ಅದನ್ನು ಅವನು ಒಳ್ಳೆ ಮಧುರವಾಗಿ ಬಾರಿಸುತ್ತಾನೆ. ಬಾರಿಸುತ್ತ ಒಮ್ಮೊಮ್ಮೆ ಭಾವಾವೇಶದಲ್ಲಿ ತನ್ನನ್ನು ತಾನು ಮರೆತುಬಿಡುತ್ತಾನೆ. ಕರೀಮನ ಪಿಟೀಲುವಾದವೆಂದರೆ ಊರ ಜನರೆಲ್ಲರೂ… Read more…

  • ಜೋತಿಷ್ಯ

    ತಮಿಳು ಮೂಲ: ಕೊನಷ್ಟೈ "ನೀವು ಏನು ಬೇಕಾದರೂ ಹೇಳಿ, ನನಗೆ ಜ್ಯೋತಿಷ್ಯದಲ್ಲಿ ನಂಬಿಕೆ ತಪ್ಪುವುದಿಲ್ಲ. ಅದರಲ್ಲಿಯೂ ರಾಮಲಿಂಗ ಜೋಯಿಸರಲ್ಲಿ ಪೂರ್ಣ ನಂಬಿಕೆ"ಎಂದಳು ಕಮಲಾ. ಸಮಯ, ಸಂಧ್ಯಾ ಕಾಲ.… Read more…

  • ಕರಿ ನಾಗರಗಳು

    ಚಿತ್ರ: ಆಂಬರ್‍ ಕ್ಲೇ ಇಶಾಂ ನಮಾಜಿಗೆ (ರಾತ್ರೆಯ ನಮಾಜು) ಮೊದಲು ಅರಬ್ಬಿ ಪುಸ್ತಕವನ್ನು ಬ್ಯಾಗಿನೊಳಗಿಟ್ಟುಕೊಂಡು, ಅದನ್ನು ದುಪಟ್ಟದೊಳಗೆ ಮರೆ ಮಾಡಿಕೊಂಡು ಓಡಿ ಬಂದ, ತರನ್ನುಮ್‌ ನೀರು ಹರಿಯುತ್ತಿದ್ದ… Read more…