ಒಂದೇ ಒಂದು ಮರದ ನೆರಳನ್ನಾಗಲೀ, ಬೀಜವನ್ನಾಗಲೀ, ಬೇರನ್ನಾಗಲೀ ಕಾಣದೆ ಇಷ್ಟು ಹೊತ್ತು ನಡೆದುಕೊಂಡು ಬಂದ ಮೇಲೆ ನಾಯಿ ಬೊಗಳುವುದು ಕೇಳುತ್ತಿದೆ.

ರಸ್ತೆಯಲ್ಲದ ರಸ್ತೆಯಲ್ಲಿ ಅರ್ಧ ದೂರ ನಡೆದ ಮೇಲೆ-ಇದರಾಚೆಗೆ ಇನ್ನೇನೂ ಇಲ್ಲ, ಹಳ್ಳ, ಕೊರಕಲು, ಬತ್ತಿದ ನದಿ ಪಾತ್ರಗಳ ಈ ಬಯಲಾಚೆಗೆ ಇನ್ನೇನೇನೂ ಇಲ್ಲ ಅಂತ ಆಗಾಗ ಅನ್ಕಿಸುತಿತ್ತು. ಆದರೂ ಏನೋ ಇದ್ದ ಹಾಗಿದೆ. ಹಳ್ಳಿ ಇದೆ. ನಾಯಿ ಬೊಗಳುವುದು ಕೇಳಿಸುತ್ತಿದೆ. ಹೊಗೆಯ ವಾಸನೆ ಮೂಗಿಗೆ ಅಡರುತ್ತಿದೆ. ಜನವಸತಿಯ ವಾಸನೆ ಬಡಿದು ಭರವಸೆ ಮೂಡುತ್ತಿದೆ.

ಹಳ್ಳಿ ಇನ್ನೂ ದೂರ ಇದೆ. ಗಾಳಿ ಅದನ್ನು ಹತ್ತಿರಕ್ಕೆ ತಂದಿದೆ.

ಬೆಳಗಿನ ಜಾವದಿಂದ ನಡೆಯುತ್ತಿದ್ದೇವೆ. ಈಗ ಸುಮಾರಾಗಿ ಸಾಯಂಕಾಲ ನಾಲ್ಕು ಗಂಟೆ. ನಮ್ಮಲ್ಲಿ ಓಬ್ಬಾತ ತಲೆ ಎತ್ತಿ ಕಣ್ಣರಳಿಸಿ ಆಕಾಶದಲ್ಲಿ ನಿಶ್ಚಲ ನಿಂತ ಸೂರ್ಯನನ್ನು ನೋಡುತ್ತ “ನಾಲ್ಕು ಗಂಟೆ ಈಗ’, ಅಂದ.

ಹೀಗೆ ಅಂದವನು ಮೆಲಿಟನ್. ಅವನ ಜೊತೆಗೆ ಫೌಸ್ಟಿನೋ, ಎಸ್ಟೆಬಾನ್ ಮತ್ತು ನಾನು ಇದ್ದೇವೆ. ನಾವು ನಾಲ್ಕು ಜನ. ಎಣಿಸುತ್ತೇನೆ. ಮುಂದೆ ಇಬ್ಬರು, ಹಿಂದೆ ಇಬ್ಬರು. ಹಿಂದೆ ತಿರುಗಿ ನೋಡಿದೆ. ಯಾರೂ ಇಲ್ಲ. ‘ನಾಲ್ಕು ಜನ ಇದೇವೆ,’ ಅಂದುಕೊಂಡೆ. ಸ್ವಲ್ಪ ಹೊತ್ತಿಗೆ ಮೊದಲು, ಹನ್ನೊಂದು ಗಂಟೆಯ ಸುಮಾರಿಗೆ, ಇಪ್ಪತು ಜನವೋ ಏನೋ ಇದ್ದೆವು. ಒಬ್ಬೊಬ್ಬರು, ಇಬ್ಬಿಬ್ಬರಾಗಿ ಕಳಚಿಕೊಳ್ಳುತ್ತ ಕೊನೆಗೆ ನಮ್ಮ ನಾಲ್ಕು ಜನರ ಗುಂಪು ಮಾತ್ರ ಉಳಿದಿದೆ.

‘ಮಳೆ ಬರಬಹುದು.’ ಅಂದ ಫೌಸ್ಟಿನೋ.

ಎಲ್ಲರೂ ತಲೆ ಎತ್ತಿ ನಮ್ಮ ಮೇಲೆ ಸಾಗುತ್ತಿರುವ ಭಾರವಾದ ಕಪ್ಪು ಮೋಡ ನೋಡಿ ‘ಬಂದರೂ ಬರಬಹುದು’. ಅಂದುಕೊಳ್ಳುತ್ತೇವೆ.

ನಮಗದನಿಸಿದ್ದು ಹೇಳುವುದಿಲ್ಲ. ಮಾತಾಡುವ ಆಸೆ ಹೊರಟೇ ಹೋಗಿ ಎಷ್ಟೋ ಹೊತ್ತಾಯಿತು. ಎಲ್ಲಿ ಬೇಕಾದರೂ ಆಸೆಪಟ್ಟು ಮಾತಾಡಬಹುದು. ಇಲ್ಲಿನ ಧಗೆಯಲ್ಲಿ ಮಾತ್ರ ಮಾತಾಡುವುದೆಂದರೆ ತುಂಬ ಶ್ರಮ. ಇಲ್ಲಿ ಮಾತಾಡಿದರೆ ಹೊರಗಿನ ಶಾಖಕ್ಕೆ ಮಾತು ನಾಲಗೆಯ ಮೇಲೇ ಒಣಗಿ ಉಸಿರು ಸಿಕ್ಕಿಕೊಳ್ಳುತ್ತದೆ.

ಇಲ್ಲಿ ಎಲ್ಲಾನೂ ಹೀಗೇನೇ. ಅದಕ್ಕೇ ಯಾರಿಗೂ ಮಾತಾಡುವ ಆಸೆಯೇ ಇಲ್ಲ.

ನೀರಿನ ದೊಡ್ಡ ಹನಿ ಬೀಳುತ್ತದೆ; ನೆಲದಲ್ಲಿ ಪುಟ್ಟ ತೂತಾಗಿ, ಅದರ ಸುತ್ತ ಎಂಜಲಿನ ಹಾಗೆ ಅಂಟಂಟು ಉಳಿಯುತ್ತದೆ. ಬಿದ್ದದ್ದು ಅದೊಂದೇ ಹನಿ. ಇನ್ನೂ ಬೀಳುತ್ತವೆ ಅನ್ನುವ ಆಸೆಯಲ್ಲಿ ನಮ್ಮ ಕಣ್ಣು ಸುತ್ತ ಹುಡುಕಿ ನೋಡಿದವು. ಹನಿಯ ಪತ್ತೆ ಇಲ್ಲ. ಮಳೆ ಬರುತ್ತಿಲ್ಲ. ತಲೆ ಎತ್ತಿ ನೋಡಿದರೆ ಮಳೆಯ ಮೋಡ ಆಕಾಶದಲ್ಲಿ ತೀರ ವೇಗವಾಗಿ ಎಲ್ಲೋ ಧಾವಿಸುವುದು ಕಾಣುತ್ತಿದೆ. ಹಳ್ಳಿಯಿಂದ ಬೀಸುವ ಗಾಳಿ ಮಳೆಯನ್ನು ಭೇಟಿಮಾಡಿ ಅದನ್ನು ಬೆಟ್ಟಗಳ ನೀಲಿ ನೆರಳಿಗೆ ದಬ್ಬುತ್ತಿದೆ. ಅಕಸ್ಮಾತ್ತಾಗಿ ಇಲ್ಲಿ ಬಿದ್ದ ಒಂದು ಹನಿಯನ್ನು ನೆಲವು ತಿಂದು, ನೆಲದ ಬಾಯಾರಿಕೆಯಲ್ಲಿ ಮಾಯವಾಗಿಬಿಟ್ಟಿತು.

ಇಷ್ಟು ದೊಡ್ಡ ಬಯಲು ಯಾರು ಮಾಡಿದ್ದೋ? ಇದರಿಂದ ಏನುಪಯೋಗವೋ?

ಮತ್ತೆ ನಡೆಯುವುದಕ್ಕೆ ಶುರುಮಾಡಿದ್ದೇವೆ. ಮಳೆಯನ್ನು ನೋಡುವುದಕ್ಕೆ ನಿಂತಿದ್ದೆವು. ಮಳೆ ಬರಲಿಲ್ಲ. ಮತ್ತೆ ನಡೆಯುವುದಕ್ಕೆ ಶರುಮಾಡಿದ್ದೇವೆ. ನಾವು ಎಷ್ಟು ದೂರ ಬಂದಿದ್ದೇವೋ ಅದಕ್ಕಿಂತ ಹೆಚ್ಚು ನಡೆದಿದ್ದೇವೆ ಅನ್ನಿಸುತ್ತದೆ ನನಗೆ. ನನಗೆ ಹೊಳದದ್ದು ಅದು. ಅಕಸ್ಮಾತ್ ಮಳೆ ಬಂದಿದ್ದರೆ ಬೇರೆ ಸಂಗತಿಗಳು ಹೊಳೆಯುತಿದ್ದವು. ಆದರೂ ನಾನು ಚಿಕ್ಕವನಾಗಿದ್ದಾಗಿನಿಂದಲೂ ಬಯಲಲ್ಲಿ ಮಳೆ ಬಂದಿದ್ದು ನೋಡಿಲ್ಲ, ನೀವು ಮಳೆ ಅನ್ನುತ್ತೀರಲ್ಲ ಅಂಥದ್ದು ನಿಜವಾಗಿ ಸುರಿದದ್ದು ನೋಡಿಲ್ಲ.

ಈ ಬಯಲು ಉಪಯೋಗವಿಲ್ಲ. ಇಲ್ಲಿ ಮೊಲವಿಲ್ಲ, ಹಕ್ಕಿ ಇಲ್ಲ, ಏನೇನೂ ಇಲ್ಲ. ಒಂದಷ್ಟು ಮುಳ್ಳಿನ ಗಿಡ, ಅಲೊಂದು ಇಲ್ಲೊಂದು ಒಣ ಹುಲ್ಲಿನ ತೇಪೆ ಬಿಟ್ಟರೆ ಇಲ್ಲಿ ಇನ್ನೇನೇನೂ ಇಲ್ಲ.

ಈಗ ಇಲ್ಲಿದ್ದೇವೆ. ನಾಲ್ಕು ಜನ. ನಡೆಯುತ್ತಾ ಇದ್ದೇವೆ. ಮೊದಲು ಕುದುರೆ ಏರಿ, ಭುಜಕ್ಕೆ ರೈಫಲ್ ನೇತು ಹಾಕಿಕೊಂಡು ಸಾಗಿದ್ದೆವು. ಈಗ ನಮ್ಮ ಹತ್ತಿರ ರೈಫಲ್ ಕೂಡ ಇಲ್ಲ.

ಅವರು ನಮ್ಮ ರೈಫಲ್ ಕಿತ್ತುಕೊಂಡು ಹೋಗಿದ್ದು ಒಳ್ಳೆಯದೇ ಆಯಿತು ಅಂತ ನನಗೆ ಯಾವಾಗಲೂ ಅನ್ನಿಸುತ್ತದೆ. ಈ ಭಾಗಗಳಲ್ಲಿ ಆಯುಧ ಹಿಡಿದು ಓಡಾಡುವುದು ಅಪಾಯದ ಕೆಲಸ. ನೀವು ೩೦-ಬೋರ್ ರೈಫಲು ಹೆಗಲಿಗೆ ಹಾಕಿಕೊಂಡಿರುವುದು ಕಂಡರೆ ದೂಸರಾ ಮಾತೇ ಇಲ್ಲದೆ ಕೊಂದುಬಿಡುತ್ತಾರೆ. ಕುದುರೆಗಳ ವಿಚಾರ ಬೇರ. ಕುದುರೆ ಇದ್ದಿದ್ದರೆ ನಾವು ಇಷ್ಟು ಹೊತ್ತಿಗೆ ಹೊಳೆಯ ಹಸಿರು ನೀರು ರುಚಿ ನೋಡಿರುತಿದ್ದೆವು ತಿಂದ ಅನ್ನ ಜೀರ್ಣವಾಗಲೆಂದು ತುಂಬಿದ ಹೊಟ್ಟೆಗಳನ್ನು ಹಳ್ಳಿಯವರಿಗೆಲ್ಲ ತೋರಿಸುತ್ತ ಪೆರೇಡು ಮಾಡಿರುತಿದ್ದೆವು. ಇದನ್ನೆಲ್ಲ ಮಾಡಿರುತಿದ್ದೆವು-ನಮ್ಮ ಹತ್ತಿರ ಇದ್ದ ಕುದುರೆಗಳು ನಮ್ಮ ಹತ್ತಿರವೇ ಇದ್ದಿದ್ದರೆ. ಅವರು ನಮ್ಮ ರೈಫಲುಗಳ ಜೊತೆಗೆ ಕುದುರೆಗಳನ್ನೂ ತೆಗೆದುಕೊಂಡು ಹೋಗಿದ್ದರು.

ನಾನು ಹೊರಳಿ ಬಯಲನ್ನು ನೋಡಿದೆ. ಇಷ್ಟು ವಿಸ್ತಾರವಾದ ನಿಷ್ಫಲ ಭೂಮಿ. ನೋಟವನ್ನು ತಡೆದು ನಿಲ್ಲಿಸುವಂಥದು ಏನೂ ಇಲ್ಲದೆ ನಿಮ್ಮ ನೋಟ ಸಲೀಸಾಗಿ ಜಾರಿಕೊಂಡು ಸುಮ್ಮನೆ ಹೋಗುತ್ತ ಇರುತ್ತದೆ. ಅಲ್ಲೊಂದು ಇಲ್ಲೊಂದು ಓತಿ ಬಿಲದಿಂದ ಆಚೆಗೆ ತಲೆ ಹಾಕಿ, ಸುಡುವ ಬಿಸಿಲು ತಾಕಿದ ತಕ್ಷಣ ಬಂಡೆಯ ನೆರಳಿಗೆ ಸರಿದು ಬಚ್ಚಿಟ್ಟುಕೊಳ್ಳುತ್ತವೆ. ಇಲ್ಲೇ ದುಡಿಯಬೇಕಾದ ನಮ್ಮ ಗತಿ ಏನು? ಬಿಸಿಲು ತಪ್ಪಿಸಿಕೊಳ್ಳಲು ನಾವೇನು ಮಾಡಬೇಕು? ನಾವು ಬೀಜ ಬಿತ್ತಿ ಬೆಳೆಯುವುದಕ್ಕೆ ಗಾಯದ ಹಕ್ಕಳೆಯಂಥ ಈ ಭೂಮಿ ನಮಗೆ ಯಾಕೆ ಕೊಟ್ಟರು?

‘ಇಲ್ಲಿಂದ ಹಳ್ಳಿಯವರೆಗೂ ಭೂಮಿ ನಿಮ್ಮದೇ,’ ಅಂತ ಅಂದರು.

‘ದೊಡ್ಡ ಬಯಲು?’

‘ಹ್ಞೂಂ, ಇಡೀ ಮಹಾಬಯಲು ನಿಮ್ಮದೇ.’

ನಮಗೆ ಬೇಕಾದದ್ದು ಇಂಥ ಬರಡು ಬಯಲು ಅಲ್ಲ ಅನ್ನುವ ಮಾತು ನಮ್ಮ ನಾಲಗೆಯ ತುದಿಗೆ ಬಂದಿತು. ನಮಗೆ ಬೇಕಾಗಿದ್ದದ್ದು ನದಿಯ ಪಕ್ಕದ ಭೂಮಿ. ನದಿಯ ಆಚೆಯ ದಡದಲ್ಲಿ, ಕ್ಯಾಸುರೀನಾ ಅನ್ನುತ್ತಾರಲ್ಲ ಆ ಗಿಡಗಳು ಬೆಳೆಯುವ, ಹಸಿರು ಹುಲ್ಲ ಇರುವ ಫಲವತ್ತಾದ ಭೂಮಿ ಬೇಕಾಗಿತ್ತು. ಬರಡು ಎತ್ತಿನ ಒಣ ಚರ್ಮದಂಥ ಈ ಬಟಾ ಬಯಲು ನೆಲವಲ್ಲ.

ನಮ್ಮ ಮನಸ್ಸಿನ ಮಾತು ಹೇಳುವುದಕ್ಕೆ ಅವರು ಅವಕಾಶವನ್ನೇ ಕೊಡಲಿಲ್ಲ. ಜನತೆಯ ಪ್ರತಿನಿಧಿ ನಮ್ಮ ಜೊತೆ ಹರಟಲು ಬಂದವರಲ್ಲ. ಭೂಮಿಯ ಹಕ್ಕು ಪತ್ರ ನಮ್ಮ ಕೈಗಿಟ್ಟು ‘ಇಷ್ಟೊಂದು ದೊಡ್ಡ ಭೂಮಿ ನಿಮ್ಮ ನಿಮ್ಮದೇ ಆಯಿತು ಅಂತ ಶಾಕ್ ಆಗಬೇಡಿ.’ ಅಂದರು.

‘ಆದರೆ, ಬರಡು ಬಯಲು ಸ್ವಾಮೀ…’

‘ಚಿಂತೆಯಿಲ್ಲ, ಸಾವಿರಾರು ಎಕರೆ ಇದೆ ನಿಮ್ಮ ಹೆಸರಿಗೆ.’

‘ನೀರೇ ಇಲ್ಲವಲ್ಲ, ಬಾಯಿ ಮುಕ್ಕಳಿಸುವುದಕ್ಕೂ…’

‘ಮಳೆಗಾಲದಲ್ಲಿ ಮಳೆ ಬರುವುದಿಲ್ಲವೇ? ನಿಮಗೆ ನೀರಾವರಿ ಭೂಮಿ ಕೊಡುತ್ತೇವೆ ಅಂತ ಯಾರಾದರೂ ಬರೆದುಕೊಟ್ಟಿದ್ದರಾ? ಒಂದು ಮಳೆ ಬಂದರೆ ಸಾಕು, ಯಾರೋ ಜುಟ್ಟು ಹಿಡಿದು ಎಳೆದ ಹಾಗೆ ಬಿತ್ತಿದ ಬೀಜದ ಮೊಳಕೆ ಮೇಲೆ ಬರುತ್ತವೆ.’

‘ಸ್ವಾಮೀ, ನೆಲದ ತುಂಬ ಬಂಡೆ, ಕಲ್ಲು ನೊರಜು. ನೀವು ಕೊಟ್ಟಿರುವ ಭೂಮಿಯಲ್ಲಿ ನೇಗಿಲು ನೆಲಕ್ಕೆ ಇಳಿಯುವುದೇ ಇಲ್ಲ. ಬೀಜ ಬಿತ್ತುವುದಕ್ಕೆ ಹಾರೆ ತೆಗೆದುಕೊಂಡು ನೆಲ ಅಗೆದು ಹಳ್ಳ ತೋಡಬೇಕು. ಅಷ್ಟು ಮಾಡಿದರೂ ಆ ಬಂಜರು ಬಯಲಲ್ಲಿ ಯಾವ ಬೆಳೆಯೂ ಬರುವುದಿಲ್ಲ.’

‘ಹಾಗಂತ ಬರೆದುಕೊಡಿ. ಈಗ ಹೋಗಿ ಸಾಕು. ನಿಮಗೆ ಭೂಮಿ ಕೊಡುತ್ತಿರುವುದು ದೊಡ್ಡ ಎಸ್ಟೇಟುಗಳ ಸಾಹುಕಾರರೇ ಹೊರತು ಸರ್‍ಕಾರವಲ್ಲ.’

‘ತಾಳಿ ಸ್ವಾಮೀ. ನಾವು ಸರ್ಕಾರದ ವಿರುದ್ಧ ಏನೂ ಹೇಳಲಿಲ್ಲ. ನಮ್ಮ ತಕರಾರು ಇರುವುದು ಇದು ಬಂಜರು ಬಯಲು ಅಂತ ಅಷ್ಟೆ, ಆ ಭೂಮಿ ಇಟ್ಟುಕೊಂಡು ಏನೂ ಮಾಡುವುದಕ್ಕೆ ಆಗುವುದಿಲ್ಲ. ಏನೂ ಬೆಳೆಯುವುದಕ್ಕೆ ಆಗುವುದಿಲ್ಲ. ಎಲ್ಲವನ್ನೂ ಮೊದಲಿನಿಂದ ವಿವರಿಸಿ ಹೇಳುತ್ತೇವೆ ಬೇಕಾದರೆ…’

ಪ್ರತಿನಿಧಿಯವರಿಗೆ ನಮ್ಮ ಮಾತು ಕೇಳಲು ಇಷ್ಟವಿರಲಿಲ್ಲ. ಹೀಗೆ ಅವರು ನಮಗೆ ಈ ಭೂಮಿ ಕೊಟ್ಟರು. ಈ ಸುಡುವ ಭೂಮಿಯ ನಡುಪಟ್ಟಿಯ ಮೇಲೆ ನಾವು ಬೀಜ ಬಿತ್ತಬೇಕು, ಬೆಳೆಯಬೇಕು, ಏನಾದರೂ ಸರಿ ಬೇರುಬಿಡುತ್ತದೋ ಬೆಳೆಯುತ್ತದೋ ನೋಡಬೇಕು ಅಂತ ಅವರು ಬಯಸಿದ್ದರು. ಇಲ್ಲಿ ಏನೂ ಬೆಳಯುವುದಿಲ್ಲ. ಇಲ್ಲಿ ರಣಹದ್ದುಗಳೂ ಇರುವುದಿಲ್ಲ. ತಲೆ ಎತ್ತಿ ನೋಡಿದರೆ ಅಗೋ ಅಲ್ಲಿ ಮೇಲೆ ಗಿರ ಗಿರ ಸುತ್ತುತ್ತಾ, ಯಾವ ಚಲನೆಯೂ ಕಾಣದ, ಮುಂದೆ ಹೆಜ್ಜೆ ಇಟ್ಟರೆ ಹಿಂದಕ್ಕೆ ಜಾರುವಂತಾಗುವ ಈ ಬರಡು ಭೂಮಿಯ ಧಗೆಯಿಂದ ಸಾಧ್ಯವಾದಷ್ಟು ಬೇಗ ಹಾರಿ ಹೋಗಲು ಹವಣಿಸುವ ರಣಹದ್ದು ಕಾಣುತ್ತವೆ.

‘ಅವರು ನಮಗೆ ಕೊಟ್ಟದ್ದು ಇದೇ ಭೂಮಿ,’ ಅನ್ನುತ್ತಾನೆ ಮೆಲಿಟನ್.

‘ಏನು?’ ಅಂದ ಫೌಸ್ಟಿನೋ.

ನಾನು ಏನೂ ಅನ್ನುವುದಿಲ್ಲ. ಮೆಲಿಟನ್ ಯೋಚನೆ ನೆಟ್ಟಗಿಲ್ಲ. ತಲೆ ಬಿಸಿಯೇರಿದೆ. ಅದಕ್ಕೇ ಹೀಗೆ ಮಾತಾಡುತಿದ್ದಾನೆ. ಬಿಸಿಲ ಧಗೆ ಅವನ ಹ್ಯಾಟು ದಾಟಿ ಮಿದುಳಿಗೆ ತಾಕಿರಬೇಕು. ಇಲ್ಲದಿದ್ದರೆ ಹೀಗೆ ಯಾಕೆ ಮಾತಾಡುತ್ತಾನೆ? ನಮಗೆ ಯಾವ ಭೂಮಿ ಕೊಟ್ಟರು ಮೆಲಿಟನ್? ಸುಂಟರ ಗಾಳಿ ಬೀಸಿದರೆ ಧೂಳು ಏಳುವುದಕ್ಕೆ ಇಲ್ಲಿ ಹಿಡಿ ಮಣ್ಣೂ ಇಲ್ಲ ಅಂದುಕೊಳುತ್ತೇನೆ.

‘ಇಲ್ಲಿ ಏನಾದರೂ ಮಾಡತೇನೆ. ಕುದುರೆಗಳನ್ನ ಓಡಿಸುವುದಕ್ಕೆ ಇದು ತಕ್ಕ ಜಾಗ,’ ಅನ್ನುತಿದ್ದಾನೆ.

‘ಯಾವ ಕುದುರೆ?’ ಎಸ್ಟೆಬಾನ್ ಅವನನ್ನು ಕೇಳುತ್ತಾ ಇದ್ದಾನೆ.

ನಾನು ಎಸ್ಟೆಬಾನ್ನನ್ನು ಗಮನವಿಟ್ಟು ನೋಡಿರಲಿಲ್ಲ. ಈಗ ಮಾತಾಡುತಿದ್ದನಲ್ಲ, ನೋಡಿದೆ. ಹೊಟ್ಟೆ ಮುಚ್ಚುವಂಥ ಅಂಗಿ ತೊಟ್ಟಿದ್ದ. ಅಂಗಿಯ ಅಂಚಿನಿಂದ ಕೋಳಿಯಂಥದ್ದು ಏನೋ ಇಣುಕುತ್ತಾ ಇದೆ.

ಹ್ಞೂಂ, ಕೆಂಪು ಕೋಳಿ. ಎಸ್ಟೆಬಾನ್ ಅದನ್ನು ಅಂಗಿಯೊಳಗೆ ಬಚ್ಚಿಟ್ಟುಕೊಂಡಿದ್ದಾನೆ. ಅದರ ನಿದ್ದೆ ಕಣ್ಣು, ಆಕಳಿಸುವ ಹಾಗೆ ತೆರೆದ ಬಾಯಿ ಕಾಣುತಿದ್ದವು.

‘ಏಯ್ ಎಸ್ಟೆಬಾನ್, ಕೋಳಿಯನ್ನ ಕದ್ದೆಯಾ?’

‘ನಂದು, ಕೋಳಿ’, ಅನ್ನುತ್ತಾನೆ ಅವನು.

‘ಮೊದಲು ನಿನ್ನ ಹತ್ತಿರ ಇರಲಿಲ್ಲ. ಎಲ್ಲಿ ಖರೀದಿ ಮಾಡಿದೆ ಅದನ್ನ?’

‘ಖರೀದಿ ಮಾಡಲಿಲ್ಲ, ನಮ್ಮ ಮನೆಯಿಂದ ತಂದ ಕೋಳಿ ಇದು.’

‘ತಿನ್ನುವುದಕ್ಕೆ ಅಂತ ತಂದೆ, ಅಲ್ಲವಾ?’

‘ಇಲ್ಲ. ಸಾಕುವುದಕ್ಕೆ ಅಂತ ತಂದಿದೇನೆ.. ಮನೆ ಖಾಲಿ ಮಾಡಿ ಹೊರಟೆ. ಕೋಳಿಗೆ ಕಾಳು ಹಾಕುವವರು ಯಾರೂ ಇಲ್ಲ. ದೂರ ಹೋಗುವುದು ಇದ್ದಾಗೆಲ್ಲ ಕೋಳಿಯನ್ನ ಜೊತೆಗೇ ತೆಗೆದುಕೊಂಡು ಹೋಗತೇನೆ.’

‘ಅಲ್ಲೇ ಇಟ್ಟುಕೊಂಡಿದ್ದರೆ ಉಸಿರು ಕಟ್ಟಿ ಸತ್ತು ಹೋಗತದೆ. ಗಾಳಿ ಆಡಲಿ, ಹೊರಗೆ ತೆಗಿ.’

ಅವನು ಕೋಳಿಯನ್ನ ಕಂಕುಳಲ್ಲಿಟ್ಟುಕೊಂಡು, ತಲೆ ತಗ್ಗಿಸಿ, ಅದರ ಬಾಯಿಗೆ ಬಿಸಿ ಗಾಳಿ ಊದುತ್ತಾನೆ. ಆಮೇಲೆ ‘ಶಿಖರ ಮುಟ್ಟಿದೆವು’ ಅನ್ನುತ್ತಾ ಇದ್ದಾನೆ.

ಅವನ ಮಾತು ಕೇಳಿಸಿಕೊಳುತ್ತಾ ಇಲ್ಲ ಈಗ. ನಾವೆಲ್ಲ ಒಬ್ಬರ ಹಿಂದೆ ಒಬ್ಬರು ಸಾಲಾಗಿ ಶಿಖರದಿಂದ ಕೆಳಗೆ ಕಮರಿಗೆ ಇಳಿಯುತಿದ್ದೇವೆ. ಎಸ್ಟೆಬಾನ್ ಎಲ್ಲರಿಗಿಂತ ಮುಂದೆ ಇದ್ದಾನೆ. ಕೋಳಿಯ ಕಾಲು ಹಿಡಿದುಕೊಂಡಿದ್ದಾನೆ. ಅದಕ್ಕೆ ಕಲ್ಲು ಬಂಡೆ ತಾಗಬಾರದೆಂದು ಹುಷಾರಾಗಿ ಕೈ ಬೀಸುತ್ತ ಇದ್ದಾನೆ.

ಕೆಳಗೆ ಇಳಿಯುತ್ತ ಇದ್ದ ಹಾಗೆ ಭೂಮಿಯ ಲಕ್ಷಣ ಬದಲಾಗುತ್ತಾ ಇದೆ. ಹೀಸರಗತ್ತೆಗಳ ಸಾಲು ಬೆಟ್ಟ ಇಳಿಯುತ್ತೆದಿಯೋ ಅನ್ನುವ ಹಾಗೆ ಧೂಳು ಏಳುತ್ತಿದೆ. ನಮ್ಮ ಮೈಗೆಲ್ಲ ಧೂಳು ಮೆತ್ತಿದ್ದು ಖುಷಿಯಾಗುತ್ತಿದೆ. ಹನ್ನೊಂದು ಗಂಟೆಗಳಷ್ಟು ಹೊತ್ತು ಬಂಜರು ಬಯಲಿನ ಗಟ್ಟಿ ನೆಲ ಮೆಟ್ಟಿ ಮೆಟ್ಟಿ ನೆಲದ ವಾಸನೆ ಹೊತ್ತು ನಮ್ಮ ಮೈಗೆ ಅಡರುತ್ತಿರುವ, ನೆಲದ ರುಚಿ ನಾಲಗೆಗೆ ತಾಕಿಸುತ್ತಿರುವ ಧೂಳು ಇಷ್ಟವಾಗುತ್ತಿದೆ.

ನದಿಯ ದಂಡೆಯ ಮೇಲೆ, ಕ್ಯಾಶುರೀನ ಮರಗಳ ಮೇಲೆ ಚಚಲಾಕ ಹಕ್ಕಿಗಳು ಕಾಣುತ್ತಿವೆ. ಅವೂ ನಮಗೆ ಇಷ್ಟವಾಗುತ್ತಿವೆ.

ನಾಯಿಗಳು ಇಲ್ಲೇ ಬೊಗಳುವ ಹಾಗೆ ಕೇಳಿಸುತ್ತಿದೆ. ಹಳ್ಳಿಯಿಂದ ಬೀಸುವ ಗಾಳಿ ಕಣಿವೆಯನ್ನೇರಿ ಬಂಡೆಗೆ ಅಪ್ಪಳಿಸಿ ಹಳ್ಳಿಯ ಶಬ್ದವನ್ನು ನಮ್ಮ ಕಿವಿಗೆ ತುಂಬುತ್ತಿದೆ.

ಮನೆಗಳ ಮೊದಲ ಸಾಲು ಹತ್ತಿರವಾದ ಹಾಗೆ ಎಸ್ಟೆಬಾನ್ ಕೋಳಿಯನ್ನು ಅಪ್ಪಿಕೊಳ್ಳುತ್ತಾನೆ. ಅದರ ಕಾಲಿಗೆ ಕಟ್ಟಿದ ದಾರ ಬಿಚ್ಚಿ ಕಾಲಿನ ಜೋಮು ಹೋಗುವ ಹಾಗೆ ನೇವರಿಸುತ್ತಾನೆ. ಆಮೇಲೆ, ಮರಗಳ ಗುಂಪಿನ ಹಿಂದೆ ಮರೆಯಾಗುತ್ತಾನೆ.

‘ನನ್ನ ಜಾಗ ಬಂತು’, ಅನ್ನುತ್ತಾನೆ ಎಸ್ಟೆಬಾನ್.

ನಾವು ಹಳ್ಳಿಯ ನಡೂ ಮಧ್ಯಕ್ಕೆ ಹೋಗುತ್ತೇವೆ.

ನಮಗೆ ಕೊಟ್ಟ ಭೂಮಿ ಇನ್ನೂ ಮುಂದಿದೆ.
*****
ಸ್ಪಾನಿಷ್ ಮೂಲ: ಹ್ವಾನ್ ರುಲ್ಫೋ / Juan Rulfo
ಕಥೆ ಹೆಸರು : Nos han dado la tierra