ಶರೀಫಜ್ಜನಿಗೆ

ಒಂದು ಧರ್ಮಕ್ಕೆ ಮೊಳೆತು
ಇನ್ನೊಂದರಲಿ ಫಲಿತು
ಸಾರ ಒಂದೇ ಎಂದು ಹಾಡಿದಾತ;
ಹನಿಸೇರಿ ಹೊಳೆಯಾಗಿ
ಗುರಿ ಸೇರಿ ಕಡಲಾಗಿ
ನಭವೇರಿ ಮುಗಿಲಾಗಿ ಆಡಿದಾತ;
ಹತ್ತು ವನಗಳ ಸುತ್ತಿ
ಹೂ ಹೂವನೂ ಮುತ್ತಿ
ಒಂದೆ ಜೇನಿನ ಹುಟ್ಟು ಕಟ್ಟಿದಾತ;
ಎಲ್ಲಿ ಹೇಳೋ ತಾತ
ಹಿಂದೆ ಯಾ ಅವಧೂತ
ಸಾಧಿಸಿದ ನಿನ್ನಂತೆ ಧರ್ಮವನ್ನು
ಕಾವ್ಯದಲಿ ಕೆಡೆದ ಆ ಮರ್ಮವನ್ನು ?

ಸೃಷ್ಟಿ ಮರೆಸಿಟ್ಟಿರುವ ಗುಟ್ಟುಗಳನು
ಸಪ್ತಸ್ವರದಾಚೆಯಾ ಮಟ್ಟುಗಳನು
ನಿನ್ನ ನುಡಿಯಲ್ಲಿಟ್ಟೆ
ಭಾಷೆಗರ್ಥವ ಕೊಟ್ಟೆ
ಹಾಡು ಮಾಡಿದೆ ನಿನ್ನ ವ್ಯಥೆಗಳನ್ನು
ಹೇಳು ಹೇಳು ಶರೀಫ
ಹಿಂದೆ ಯಾವ ಖಲೀಫ
ಏರಿದ್ದ ಈ ಹೊನ್ನಿನಟ್ಟವನ್ನು,
ಮಣಿಸಿದ್ದ ಮಾತುಗಳ ಬೆಟ್ಟವನ್ನು ?

ಏನು ಜೀವನಧರ್ಮ
ಏನು ಸೃಷ್ಟಿಯ ಮರ್ಮ
ಏನು ಎಲ್ಲಿ ಯಾಕೆ ತಾಕಿದವನು;
ಬೆಟ್ಟ ಬೆಟ್ಟವ ಕುಲುಕಿ
ಸಪ್ತಸಾಗರ ಕಲಕಿ
ಸೃಷ್ಟಿಮೂಲವ ಹುಡುಕಿ ಜೀಕಿದವನು;
ಹೇಳು ಹೇಳು ಶರೀಫ
ಬೇರೊಬ್ಬ ಯಾರವನು
ನಿನ್ನಂತೆ ನಡೆನುಡಿಯ ಕಾಡಿದವನು?
ತೀರದಾಚೆಯ ತಾರೆ ಕೂಡಿದವನು?

ಅನ್ನ ನೆಲ ಮಾತು ಮತ
ಎಲ್ಲ ಹೊರತಾದರೂ
ಪ್ರೀತಿಯಲಿ ಅವನೆಲ್ಲ ಕಲೆಸಿಬಿಟ್ಟೆ;
ಬಣ್ಣ ಏಳಾದರೂ
ಒಂದೆ ಕಾಮನಬಿಲ್ಲು
ಚಂದವಾದಂತೆ ನೀ ಬಾಳಿಬಿಟ್ಟೆ;
ಗಡಿಮೀರಿ ಮಡಿ ಮೀರಿ
ಬಾನಿನಲಿ ಕುಡಿಯೂರಿ
ಗಾಳಿಯಲಿ ಬಾಳಪಟ ತೇಲಿಬಿಟ್ಟೆ;
ಹೇಳು ಹೇಳು ಶರೀಫ
ಯಾವ ಭಾವಕಲಾಪ
ಇಂಥ ಬಿಡುಗಡೆ ಕೊಟ್ಟ ಸೂತ್ರವಾಯ್ತು – ಹೇಗೆ
ಬರಿ ನೀರು ಪರಿಶುದ್ಧ ತೀರ್ಥವಾಯ್ತು?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಗಳಿಗೆಬಟ್ಟಲ ತಿರುವುಗಳಲ್ಲಿ – ೪೦
Next post ರಾಷ್ಟ್ರ ಪಕ್ಷಿ: ನವಿಲು

ಸಣ್ಣ ಕತೆ

  • ಮತ್ತೆ ಬಂದ ವಸಂತ

    ಚಿತ್ರ: ಆಮಿ ಮೊದಲ ರಾತ್ರಿಯ ಉನ್ಮಾದದಲ್ಲಿದ್ದ ಮಧುವಿನ ಕಿವಿ ಹಿಂಡಿ ಅವಳಂದಳು. ‘ಮಧು, ಇಂದಿನಿಂದ ನಾವು ಗಂಡ - ಹೆಂಡತಿಯಾಗಿರುವುದು ಬೇಡ. ಬದುಕಿನ ಕೊನೆ ತನಕವೂ ಗೆಳೆಯ… Read more…

  • ಬಾಗಿಲು ತೆರೆದಿತ್ತು

    ಆ ಮನೆಯ ಮುಂದಿನ ಬಾಗಿಲು ಯಾವಾಗಲೂ ಇಕ್ಕಿರುವುದು! ನನ್ನ ಓದುವ ಕೋಣೆಯ ಕಿಡಿಕೆಯೊಳಗಿಂದ ಆ ಮನೆಯ ಬಾಗಿಲು ಕಾಣುವುದು. ನಾನು ಕಿಡಿಕೆಯೊಳಗಿಂದ ಎಷ್ಟೋ ಸಲ ಅತ್ತ ಕಡೆ… Read more…

  • ಗದ್ದೆ

    ಅದೊಂದು ಬೆಟ್ಟದ ಊರು. ಪುಟ್ಟ ಪುಟ್ಟ ಗುಡ್ಡಕ್ಕೆ ತಾಗಿಕೊಂಡು ಸಂದಿಯಲ್ಲಿ ಗೊಂದಿಯಲ್ಲಿ ಎದ್ದ ಗುಡಿಸಲುಗಳು ಅರ್ಥಾತ್ ಈ ಜೀವನ ಕಳೆಯೋ ಬಗೆಯಲಿ ಕಟ್ಟಿಕೊಂಡ ಪುಟ್ಟ ಮನೆಗಳು ಹೊತ್ತು… Read more…

  • ದೇವರು ಮತ್ತು ಅಪಘಾತ

    ಊರಿನ ಕೊನೆಯಂಚಿನಲ್ಲಿದ್ದ ಕೆರೆಯಂಗಳದಲ್ಲಿ ಅಣಬೆಗಳಂತೆ ಮೈವೆತ್ತಿದ್ದ ಗುಡಿಸಲುಗಳಲ್ಲಿ ಕೊನೆಯದು ಅವಳದಾಗಿತ್ತು. ನಾಲ್ಕೈದು ಸಾರಿ ಮುನಿಸಿಪಾಲಿಟಿಯವರು ಆ ಗುಡಿಸಲುಗಳನ್ನು ಕಿತ್ತು ಹಾಕಿದ್ದರೂ ಮನುಷ್ಯ ಪ್ರಾಣಿಗಳ ಸೂರಿನ ಅದಮ್ಯ ಅವಶ್ಯಕ… Read more…

  • ಮುಗ್ಧ

    ಆಲೀ........ ಏ ಆಲೀ........ ಐಸಮ್ಮ ಮಗನನ್ನು ಎಷ್ಟು ಜೋರಾಗಿ ಕರೆದರೂ ಆಲಿಯಿಂದ ಉತ್ತರ ಬರಲಿಲ್ಲ. ಒಂದು ಕಡೆ ಕತ್ತಲೆಯಾಗುತ್ತಾ ಬರುತ್ತಿದೆ. ಬೀಡಿ ಕಟ್ಟುಗಳನ್ನು ಸಂಜೆಯ ಒಳಗೆ ಬ್ರಾಂಚಿಗೆ… Read more…