ವ್ಯಸನಕೋಣೆಯಲಿ ನಮ್ಮ ಕಥಾನಾಯಕಿ ಬಿಳಿಯ
ವಸನಧಾರಿ ಮಲಗಿರುವಳಂತೆ ಯಾರಿಗೂ ತಿಳಿಯ-
ದವಳ ಬೇಸರದ ಮೂಲ

ಘನ ಸರಕಾರವೇನೂ ಸುಮ್ಮನೆ ಕೂತಿಲ್ಲ ಕೈಕಟ್ಟಿ
ಮನೆಯ ಸುತ್ತಲೂ ನಿಲ್ಲಿಸಿದೆ ಕಾವಲಿಗೆಂದು ಗಟ್ಟಿ
ಗೂಢಚಾರರ ಜಾಲ

ಸುಮ್ಮನೆ ಓಡಾಡುವವರ ಮೇಲೆ ಕಣ್ಣಿರಿಸಿ
ಗುಮಾನಿ ಬಂದವರ ಜೇಬುಗಳನರಸಿ
ತಿರುಗಾಡುವರು ಗಸ್ತು

ಸಮಸ್ಯೆಗಳ ಮೂಲಗಳ ಹುಡುಕಬಲ್ಲಂತಹ
ವಿಮರ್ಶಕ ಬುದ್ಧಿಜೀವಿಗಳ ವರ್ಗ ಸಹ
ಆಗಿಬಿಟ್ಟಿದೆ ಸುಸ್ತು

ಮಾಯವಾಗಿರುವರೆಷ್ಟೋ ಜನ ಇದ್ದಕಿದ್ದಂತೆ
ಸಾಯದೆಯೆ ಉಳಿದವರಿಂದ ತುಂಬಿರುವುದಂತೆ
ದೇಶದ ಬಂದೀಖಾನೆ

ಅದರೊಂದಿಗೇ ಹುಟ್ಟಿಕೊಳ್ಳುವುದು ಭೂಗತ ಸಾಹಿತ್ಯ
ಸದೆಬಡಿತ ಸರ್ವಾಧಿಕಾರ ನಿರಂಕುಶತ್ವ ಅಸತ್ಯ
ಸಾಹಿತಿಗಳಿಗೆ ಸ್ಫೂರ್ತಿ ತಾನೆ!

ಇತ್ತ ನಾಯಕಿಯೂ ಬದುಕಿಲ್ಲ ಎಷ್ಟೋ ದಿನಗಳ ಕೆಳಗೆ
ಸತ್ತು ಹೋದಳು ಎಂದು ಕಿವಿಯಿಂದ ಕಿವಿಗೆ
ಹಬ್ಬಿರುವುದು ವದಂತಿ

ತೆರೆಸಿ ನೊಡುವುದಕ್ಕೆ ಸರ್ವಥಾ ಒಪ್ಪುವುದಿಲ್ಲ
ಸರಕಾರ-ಎಲ್ಲ ಸರ್ವಾಧಿಕಾರದ ಹಿಂದೆಯೂ ಒಂದಲ್ಲ
ಒಂದು ಭಯಂಕರ ಭ್ರಾಂತಿ!
*****