ಹಾರಲಿ ಎನ್ನಯ ಹೃದಯವು ಬೀಸಿ
ಭೂಮಿಯನೇ ಒಡೆದೂ, ಅಹ್ವಾ ಇಹವನ್ನೇ ಒಗೆದು
ಭೂಮಿಯ ಭೇದಿಸಿ, ಗಗನವ ಛೇದಿಸಿ
ಸತ್ಯದಲೀ ಮಿಂದೂ; ಓಹೋ ಹೊಸ ವಿಶ್ವವ ತಂದು

ಮನಸಿನ ಓಟದಿ, ಮಿಂಚಿನ ನೋಟದಿ
ಗಗನವನೇ ಇಣಕಿ; ಅಬ್ಬಾ ತಾರೆಗಳಾ ಕೆಣಕಿ
ಈಶ್ವರನಾದ್ಭುತ ತಾಂಡವ ನಾಟ್ಯದಿ
ಸರ್ವದೊಳು ದುಡಕಿ; ನಾನೇ ನಿಜವನ್ನೇ ಹುಡುಕಿ

ಚಲ್ಲುವ ಕೈಗಳ ಅದ್ಭುತ ಮಾಟದಿ
ನೀರೊಳು ಪ್ರಳಯವ ಜಗದೊಳು ರೌದ್ರವ ನಾಮಾಡಿ
ಓಡುವ ನವಿರಿನ ಕಾಲ್ಗಳ ಆಟದಿ
ಕ್ಷಿತಿಜಕ್ಕೇ ಓಡಿ ; ಬಿಡದೇ ಸಂಜೆಯ ಸೂರ್ಯನ ಕಾಡಿ

ಗಿರಿಶೃಂಗಗಳ ಸರ್ರನೆ ಕೀಳುತ
ಜಗವನ್ನೇ ಜಗಿದು; ಓಹೋ ಸಾಗರವನೇ ಕುಡಿದು
ಬರ್ರನೆ ಸರ್ರನೆ ಏರುತ ಹಾರುತ
ವಿಶ್ವವನೇ ಮರೆದು; ವೀರ ಸತ್ಯದೊಳು ಬೆರೆದು

ನರಕದ ಮಧ್ಯದಿ ನಾಕವ ಕಟ್ಟುತ
ಸತ್ಯವನೇ ಬಿತ್ತಿ; ಸವಿಯ ಶಾಂತಿಯನ್ನೇ ಎತ್ತಿ
ಕಲ್ಲನು ಕೆತ್ತುತ; ಶಿವರೂಪಾಗುತ
ಸತ್ಯದ ಮುತ್ತನು ಹುಡುಕುತೆ ಕೂಡುವೆ ಚಿತ್ಸ್ಯಕ್ತಿ
*****