ಚಿತ್ರ: ಜೆರಾರ್‍ಡ್ ಗೆಲ್ಲಿಂಗರ್‍

ಅಧ್ಯಾಯ ೨೫

ಡ್ರೆಸ್ಸಿಂಗ್ ಟೇಬಲಿನ ಕನ್ನಡಿಯಲ್ಲಿ ತನ್ನನ್ನು ತಾನೇ ನೋಡಿಕೊಂಡಳು ರಾಣಿ ಕಿತ್ತು ತೆಗೆದಷ್ಟೂ ಬೆಳೆಯುತ್ತಿದ್ದ ಬಿಳಿ ಕೂದಲುಗಳು, ನಿದ್ದೆಯಿಲ್ಲದಂತಿದ್ದ ಕಣ್ಣುಗಳು. ನೋಡಿದಷ್ಟೂ ಆಗುತ್ತಿದ್ದ ನಿರಾಸೆ, ಭಯಂಕರ ಒಂಟಿತನ, ವಯಸ್ಸು ತನ್ನ ಮೇಲೆ ಘೋರವಾದ ಪರಿಣಾಮಗಳನ್ನು ಬೀರಲು ತೊಡಗಿದೆ. ಆ ಬಗ್ಗೆ ಏನನ್ನೂ ಮಾಡುವಂತಿಲ್ಲ.
ಮದುವೆ, ನುಗು, ವಿಚ್ಛೇದನ ಎಲ್ಲವೂ ಕನಸಿನಲ್ಲೆಂಬಂತೆ ನಡೆದು ಹೋಗಿ ದುವು. ಈಗ ಜತೆಯನ್ನು ಬಯಸುವ ದೇಹ, ಸ್ನೇಹವನ್ನು ಬಯಸುವ ಮನಸ್ಸು, ಬೇಡಬೇಡವೆಂದರೂ ಗಂಡಸಿಗೆ ಒಲಿಯುವ, ಗಂಡಸನ್ನು ಒಲಿಸುವ ಬಯಕೆ.

ಅಂದು ಅವಳು ಮೊತ್ತ ಮೊದಲಾಗಿ ಅರವಿಂದನೊಂದಿಗೆ ಹೊರಗೆ ಹೋಗುವವಳಿದ್ದಳು. ಮೊದಲ ಭೇಟಿಯಲ್ಲೇ ಆತ ಅವಳ ಮನಸ್ಸಿಗೆ ಬಂದಿದ್ದ
ಹಳ್ಳಿಯ ಹುಡುಗ. ಆ ಮುಗ್ಧತೆಯಿತ್ತು ಅವನ ಮುಖದಲ್ಲಿ, ಆಕರ್ಷಕ ನಿಲುವು. ತುಂಬಾ ಬುದ್ದಿವಂತ, ಬಹಳ ಓದುತ್ತಾನೆ ಎಂದು ಹೆಸರು ಮಾಡಿದ್ದ. ರಾಣಿ ಅವನನ್ನು ಗಮನಿಸುತ್ತಲೇ ಇದ್ದಳು. ನಾಗಾರ್ಜುನ ಸಾಗರಕ್ಕೆ ಪ್ರವಾಸ ಹೊರಟಾಗ ಅವನ ಜತೆ ಮಾತಾಡುವುದಕ್ಕೆ ಸಂದರ್ಭ ಒದಗಿ ಬಂದಿತ್ತು. ಪ್ರವಾಸದುದ್ದಕ್ಕೂ ಅವನ ಕೂಡಿಯೇ ಇದ್ದಳು –ನಗುತ್ತ, ಮಾತಾಡಿಸುತ್ತ, ಅವನ ಆಸಕ್ತಿಗಳನ್ನು ಕೆರಳಿಸುತ್ತ.

ಪರಿಚಯ ಸ್ನೇಹವಾಗಿ ಬೆಳೆಯಿತು.

ಒಂದು ದಿನ ಅರವಿಂದನೇ ಅವಳನ್ನು ಹುಡುಕಿಕೊಂಡು ಬಂದ, ದೆಹಲಿ ಕಾನ್‌ಫರೆನ್ಸ್‍ಗೆ ಪ್ರಬಂಧ ಬರೆಯುವುದಕ್ಕೋಸ್ಕರ ಅವನಿಗೆ ಯಾವುದೋ ಪುಸ್ತಕ ತುರ್ತಾಗಿ ಬೇಕಾಗಿತ್ತು, ಲೈಬ್ರರಿಯಲ್ಲಿ ವಿಚಾರಿಸಿ ಅದು ಕಳೆದ ಕೆಲವು ತಿಂಗಳು ಗಳಿಂದ ಆಕೆಯ ಬಳಿ ಇದೆಯಂದು ಗೊತ್ತಾಗಿ ಅವಳನ್ನು ಕೇಳಲು ಬಂದಿದ್ದ. ಆ ಪುಸ್ತಕವನ್ನು ತಾನು ಎಂದು ತೆಗೆದುಕೊಂಡು ಬಂದೆ, ಯಾಕೆ ತೆಗೆದು ಕೊಂಡು ಬಂದೆ ಎಂಬುದೇ ರಾಣಿಗೆ ಗೊತ್ತಿರಲಿಲ್ಲ. ಓದಿದ ನೆನಪು ಖಂಡಿತಕ್ಕೂ ಇರಲಿಲ್ಲ. ಅರವಿಂದನಿಗೆ ತಂದುಕೊಡುತ್ತೇನೆ,” ಎಂದಳು. ಮನೆಗೆ ಹೋಗಿ ಪುಸ್ತಕವನ್ನು ಓದತೊಡಗಿದಳು, ಓದಿ ಕೆಲವು ಪಾಯಿಂಟುಗಳನ್ನು ಗುರುತು ಹಾಕಿ ಕೊಂಡು ಮರುದಿನ ಅವನೊಂದಿಗೆ ಆವುಗಳ ಕುರಿತು ಚರ್ಚಿಸಿದಳು, ಮಾತಾಡುತ್ತ ಅವನು ಬಹಳ ಹೊತ್ತು ಅವಳ ಫ್ಲಾಟಿನಲ್ಲಿ ಕುಳಿತಿದ್ದ. ಅವಳು ಚಹಾ ಮಾಡಿ ಕೊಟ್ಟು “ಕಾನ್ಫರೆನ್ಸ್‌ನಲ್ಲಿ ಚೆನ್ನಾಗಿ ಮಾಡಿ,” ಎಂದಳು.

ಕಾನ್ಫರೆನ್ಸ್ ಮುಗಿಸಿ ದೆಹಲಿಯಿಂದ ಮರಳಿದ ಅರವಿಂದ ಅವಳನ್ನು ಡಿನ್ನರಿಗೆ ಕರೆದಿದ್ದ. ಗ್ರೀನ್ ಹೋಟೆಲಿಗೆ ಪೋನ್ ಮಾಡಿ ಒಂದು ಟೇಬಲ್ ಕಾದಿರಿಸಿದ್ದ. ತನ್ನ ದೆಹಲಿ ಜಯಭೇರಿಯನ್ನು ಅವನು ನಿಜಕ್ಕೂ ಕೊಂಡಾಡುವ ಹಾಗಿತ್ತು.

ರಾಣಿಯ ಅಲಂಕಾರ ಮುಗಿಯುವ ಹೊತ್ತಿಗೆ ಸರಿಯಾಗಿ ಅರವಿಂದ ಆಟೋ ತೆಗೆದುಕೊಂಡೇ ಬಂದ.

ಹೋಟೆಲಿನಲ್ಲಿ ಕುಳಿತು ಊಟ ಸವಿಯುತ್ತಿದ್ದಂತೆ ದೆಹಲಿ ಕಾನ್‌ಫರನ್ಸ್ ನ ವರ್ಣನೆ ಮಾಡಿದ. ರಾಣಿ ಅವನ್ನೆಲ್ಲ ಎಷ್ಟು ಕೇಳಿಸಿಕೊಂಡಳೋ ಅವಳ ಲಕ್ಷವೆಲ್ಲಾ ಅವನ ಹೊಳೆಯುವ ಕಣ್ಣುಗಳ, ನಗುವಾಗ ಗುಳಿಬೀಳುವ ಕೆನ್ನೆಗಳ, ಆಗಾಗ ಅವನು ಕೈಬೆರಳುಗಳಿಂದ ಹಿಂದೆ ಹಾಕುತ್ತಿದ್ದ ಮುಂಗುರುಳ ಮೇಲಿತ್ತು.

“ಚಂದದ ಹುಡುಗಿಯರೂ ಬಂದಿರಬೇಕಲ್ಲ?” ಎಂದು ಅವನನ್ನು ಕೀಟಲೆ ಮಾಡಿದಳು.

“ಒಬ್ಬಳು ಸ್ವೀಡನ್‌ನ ಹುಡುಗಿಯಿದ್ದಳು,” ಎಂದ ಅರವಿಂದ ನಸು ನಗುತ್ತ.

“ಚೆನ್ನಾಗಿದ್ದಳೆ?” “ಓಹೋ. ನನ್ನನ್ನು ಸ್ವೀಡನ್‌ಗೆ ಆಮಂತ್ರಿಸಿದ್ದಾಳೆ.”
“ಯಾವಾಗ ಹೋಗೋದು?” ಅರವಿಂದ ನಕ್ಕ. ವೈಟರ್ ಬಂದು ಬಿಲ್ ಮುಂದಿಟ್ಟಾಗ ಅವಳು ಕೈಚಾಚಿದಳು. “ಇಲ್ಲ. ಇದು ನನ್ನ ದಿನ,” ಎಂದು ಅರವಿಂದ ಅವಳನ್ನು ತಡೆದ, ನಂತರ ಇಬ್ಬರೂ ಅವಳ ಫ್ಲಾಟಿಗೆ ಮರಳಿದರು. ಫ್ರಿಜ್‌ನಲ್ಲಿ ಸ್ವಲ್ಪ ಮಧ್ಯವಿತ್ತು. ರಾಣಿ ಡ್ರಿಂಕ್ಸ್ ತಯಾರಿಸಿದಳು.
ಮಾತಿನ ಮಧ್ಯೆ ಅರವಿಂದ ತಟ್ಟನೆ ಹೇಳಿದ :
“ರಾಣಿ !”
ಅವಳು ತಲೆಯೆತ್ತಿ ನೋಡಿದಳು. ಅವನ ಕಣ್ಣುಗಳು ಕೆಂಪಾಗಿದ್ದುವು. ಸ್ವರದಲ್ಲಿ ಕಂಪನವಿತ್ತು.
“ಏನು?”
“ಇಲ್ಲ. ಏನಿಲ್ಲ…ಏನೋ ಹೇಳಬೇಕೆಂದಿದ್ದೆ. ಮರೆತು ಹೋಯಿತು” ಎಂದ ನಿಧಾನವಾಗಿ
“ಆ ಸ್ವೀಡಿಷ್‌ ಹುಡುಗಿಯ ಬಗ್ಗೆಯೆ?” ರಾಣಿ ನಿರಾಸೆಯಿಂದ ಕೇಳಿದಳು.
“ಛೇ ಅಲ್ಲವೇ ಅಲ್ಲ. ಕಾನ್ಫರೆನ್ಸ್‌ಗೆ ಯಾವ ಸ್ವೀಡಿಷ್‌ ಹುಡುಗಿಯೂ ಬಂದಿರಲಿಲ್ಲ. ಸುಮ್ಮಗೆ ಹೇಳಿದೆ…. ಹಾಂ ! ನೆನಪಾಯಿತು. ಸಂಸ್ಥೆಯಲ್ಲಿ ಕೆಲವು ಹುದ್ದೆಗಳಿಗೆ ಅರ್ಜಿಗಳನ್ನು ಕರೆದಿದ್ದಾರೆ.”
“ಹೌದು.”
“ನಾನು ಅಪ್ಲೈ ಮಾಡಬೇಕೆಂದಿದ್ದೇನೆ,”
“ಮಾಡಿ, ನಾನೇ ಹೇಳಬೇಕೆಂದಿದ್ದೆ.”
“ನನಗೆ ಸಿಗುತ್ತೆ?”
“ಸಂಸ್ಥೆಯ ಬ್ಲೂ ಐಡ್ ಬಾಯ್ ನೀವು, ನಿಮಗೆ ಸಿಗದೆ ಇನ್ನಾರಿಗೆ ಸಿಗಬೇಕು!” ಎಂದು ಮೂದಲಿಸಿದಳು,
ಇಬ್ಬರೂ ಕೀಟಲೆಯ ಮೂಡಿನಲ್ಲಿದ್ದರು.
ಮತ್ತೆ ಅವನು ಎದ್ದಾಗ ರಾತ್ರಿ ಬಹಳ ಸರಿದಿತ್ತು. ಇಷ್ಟು ಹೊತ್ತಿನಲ್ಲಿ ನಿಮಗೆ ಯಾವ ವಾಹನವೂ ಸಿಗಲ್ಲ,” ಎಂದಳು ಅವಳು, “ನಡೆದೇ ಹೋಗುತೇನೆ,” ಎಂದ ಅರವಿಂದ.

“ಅಷ್ಟು ದೂರ!”
“ಪರವಾಯಿಲ್ಲ. ನಡೆದರೆ ಹೊಟ್ಟೆ ಹಗುರಾಗುತ್ತದೆ. ಗುಡ್ ನ್ಯಾಟ್!”
“ಗುಡ್ ನ್ಯಾಟ್ !”
ಅರವಿಂದನ ಮುಂದೆ ಐದು ಕಿಲೋಮೀಟರ್ ಉದ್ದದ ದಾರಿಯಿತ್ತು, ಹೊರಗೆ ಪ್ರಶಸ್ತವಾದ ತಿಂಗಳುಬೆಳಕು. ಇಷ್ಟು ಹೊತ್ತಿಗೆ ಕೇಶವುಲು ಮಲಗಿ
ಗೊರಕೆ ಸುರುಮಾಡಿರುತ್ತಾನೆ. ಯಾವ ಅಸ್ತಿತ್ವದ ಸಮಸ್ಯೆಗಳೂ ಸಂದಿಗ್ಗಗಳೂ ಅವನನ್ನು ಕಾಡುವುದಿಲ್ಲ. ಒಮ್ಮೆ ಮಲಗಿದರೆ ಮತ್ತೆ ಅವನು ಏಳುವುದು ಬೆಳಗಾದ ಮೇಲೆಯೇ ಸರಿ. ಸ್ವಂತ ಗೊರಕೆಯೂ ಕೂಡ ಒಬ್ಬ ಮನುಷ್ಯನನ್ನು ಎಚ್ಚರಿಸಲಾರದೆ? ಹಾಗೆಲ್ಲಾದರೂ ಎಚ್ಚರಾದರೆ ಕೇಶವುಲು ಮಗ್ಗುಲು ಬದಲಿಸುತ್ತಾನೆ, ಅಷ್ಟೆ. ಸ್ವಲ್ಪ ಸಮಯದ ನಂತರ ಗೊರಕೆ ಮತ್ತೆ ಕಠೋರವಾಗಿ ಮುಂದುವರಿಯುತ್ತದೆ.

ಕಳೆದೆರಡು ವಾರಗಳಿಂದ ಕೇಶವುಲುನ ಗೊರಕೆಯಿಂದಲೂ ನಾಯರ್‌ನ ಅಡುಗೆಯಿಂದಲೂ ಬಿಡುಗಡೆ ದೊರಕಿತ್ತು. ದೆಹಲಿಯ ಕಾನ್ಫರೆನ್ಸ್ ಮೂರು ದಿನ. ಇದೇ ಸಂದರ್ಭವನ್ನು ಉಪಯೋಗಿಸಿ ಉತ್ತರದ ಕೆಲವು ಪ್ರೇಕ್ಷಣೀಯ ಸ್ಥಳಗಳನ್ನೂ ನೋಡಿಕೊಂಡು ಬಂದಿದ್ದ. ಬೇರೆ ಹವೆ, ಬೇರ ಭೂಭಾಗ, ಬೇರೆ ಮಂದಿಯ ಸಂಪರ್ಕ, ಕುಸಿಯತೊಡಗಿದ್ದ ಮನಸ್ಸನ್ನು ಮತ್ತೆ ಎತ್ತಿ ನಿಲ್ಲಿಸಿತ್ತು,

ದೆಹಲಿಯಿಂದ ಮರಳಿದವನೆ ಡಾಕ್ಟರ್‌ ವೈಶಾಖಿಯ ಸಲಹೆಯನ್ನು ಪಡೆದು ಕೊಂಡು ಲೆಕ್ಚರರ್ ಹುದ್ದೆಗೆ ಅರ್ಜಿಯನ್ನೂ ಹಾಕಿದ್ದ, ಥೀಸಿಸ್ ಕೆಲಸ ಇನ್ನೂ ಮುಗಿದಿರಲಿಲ್ಲ. ಆದರೂ ಡೈರೆಕ್ಟರ್‌ಗೆ ಮನಸ್ಸಿದ್ದರೆ ಕೆಲಸ ಸಿಗಬಹುದಾಗಿತ್ತು.

ಸಮಾಜ ತಲಪುವಾಗ ಅರವಿಂದ ಸುಸ್ತಾಗಿದ್ದ, ಹವೆ ಹಿತವಾಗಿದ್ದರೂ ನಡೆದು ಬಂದುದರಿಂದ ಸಣ್ಣಕೆ ಬೆವರುತ್ತಿತ್ತು. ಕೇಶವುಲು ನಿರೀಕ್ಷಿಸಿದಂತೆ ನಿದ್ದೆಯಲ್ಲಿ ತಲ್ಲೀನನಾಗಿದ್ದ.
ಮೇಜಿನ ಮೇಲೆ ಅವನಿಗಾಗಿ ಚೀಟಿಯೊಂದು ಕಾಯುತ್ತಿತ್ತು, ರೆಡ್ಡಿಯ ಕೈ ಬರಹ!
ತಟ್ಟನೆ ಅವನಿಗೆ ನೆನಪಾಯಿತು. ದಿನವಿಡೀ ರೆಡ್ಡಿ ಸಂಸ್ಥೆಯಲ್ಲೆಲ್ಲೂ ಕಾಣಿಸಿರಲಿಲ್ಲ ಎಂದು, ಚೀಟಿಯಲ್ಲಿ ಯಾವುದೋ ಪತ್ರಿಕಾಲಯದ ವಿಳಾಸವಿತ್ತು. ಅಲ್ಲಿ ಸಿಗುತ್ತೇನೆ ಎಂಬ ಪುಟ್ಟ ಸಂದೇಶ ಮಾತ್ರ.
ಯಾಕೆ? ರೆಡ್ಡಿಗೇನಾಯಿತು! ಎಂದುಕೊಂಡ.
*****

ಅಧ್ಯಾಯ ೨೬
ರೆಡ್ಡಿ ಕೊಟ್ಟಿದ್ದ ವಿಳಾಸದ ಮೇಲೆ ಅವನನ್ನು ನೋಡಲು ಹೊರಟ ಅರವಿಂದ ಮರುದಿನ ಬೆಳಗ್ಗೆ, ಸ್ವಲ್ಪ ಸುತ್ತಾಡಿದ ನಂತರ ಪತ್ರಿಕಾಲಯ ಕಾಣಸಿಕ್ಕಿತು. ದೊಡ್ಡ ದೊಡ್ಡ ಆಫ್ಸೆಟ್, ಮೊನೊಟ್ಯಾಪ್ ಮುದ್ರಣ ಯಂತ್ರಗಳ ನಡುವೆ ದಾರಿಮಾಡಿಕೊಂಡು ಒಳಗೆ ಹೋದರೆ ಉದ್ದವಾದ ಹಾಲು, ಹಾಲಿನಲ್ಲೆಲ್ಲ ಟ್ಯೂಬ್ ಲ್ಯಾಟುಗಳ ಪ್ರಕಾಶಮಾನವಾದ ಬೆಳಕು ಚೆಲ್ಲಿತ್ತು. ಮೂಲೆಯೊಂದರಲ್ಲಿ ಟೆಲಿ ಪ್ರಿಂಟರು ಸದ್ದು ಮಾಡುತ್ತಿತ್ತು. ಹಾಲಿನ ಉದ್ದಕ್ಕೂ ಹಾಕಿದ್ದ ಡೆಸ್ಕುಗಳ ಹಿಂದೆ ಸಂಪಾದಕರ ಗುಂಪು.

ರೆಡ್ಡಿ ಏನೋ ಬರೆಯುತ್ತಿದ್ದವನು ಆರವಿಂದನನ್ನು ಕಂಡು ಎದ್ದು ಬಂದ. “ಹೋಗೋಣ ಹೊರಗೆ ನಡೆಯಿರಿ,” ಎಂದು ಅವನನ್ನು ಹೊರಗೆ ಕರೆದೊಯ್ದ. ಕಾಂಪೌಂಡ್ ಗೋಡೆಗೆ ತಗಲಿ ಜಿಂಕ್ ಶೇಟ್ ಹಾಕಿದ್ದ ರೆಡ್ಡಿನಲ್ಲಿ ಕ್ಯಾಂಟೀನು. ರೆಡ್ಡಿ ಎರಡು ಚಹಾಕ್ಕೆ ಹೇಳಿದ.
ಇಬ್ಬರೂ ಬೆಂಚಿನ ಮೇಲೆ ಕುಳಿತರು.
“ಕಾನ್ಫರೆನ್ಸ್ ಹೇಗೆ ನಡೆಯಿತು?”
“ಚೆನ್ನಾಗಿ ನಡೆಯಿತು.”
“ನಿಮ್ಮ ಪೇಪರು?”
“ಸಾಕಷ್ಟು ಚರ್ಚೆಗೊಳಗಾಯಿತು.”
“ಗುಡ್ !”
“ಸಂಸ್ಥೆ ಯಾಕೆ ಬಿಟ್ಟಿರಿ?”
“ನನ್ನ ಟರ್ಮು ಮುಗಿಯಿತು.”
“ಎಕ್ಸ್ಟೆಂಡ್ ಮಾಡಿಸಿಕೊಳ್ಳಲಿಲ್ಲವೆ?”
“ಅಪ್ಲೆ ಮಾಡಿದ್ದೆ.”
“ಏನಾಯಿತು?”
“ಸಿಗಲಿಲ್ಲ.”
“ಎಲ್ಲರಿಗೂ ಸಿಗುತ್ತಿದೆ !”
“ನನ್ನ ಸೂಪರ್‌ವೈಸರ್ ಶಿಫಾರ್ಸು ಮಾಡಲಿಲ್ಲ,” ಎಂದ ರೆಡ್ಡಿ.
ಇದರ ಒಟ್ಟಾರೆ ಹಿನ್ನೆಲೆ ತಿಳಿದಿದ್ದ ಅರವಿಂದನಿಗೆ ಆಶ್ಚರ್ಯವೆನಿಸಲಿಲ್ಲ. ರೆಡ್ಡಿಯ ಕುರಿತು ಸ್ವಲ್ಪ ಬೇಸರವೇ ಆಯಿತು. ನಿರಂಜನ್ ರೇ ಬಹಳ ಸುಲಭವಾಗಿ ರೆಡ್ಡಿಯಿಂದ ಕೈತೊಳೆದುಕೊಂಡಿದ್ದರು.
“ಪತ್ರಿಕೆಯ ಕೆಲಸಕ್ಕೆ ಅಂಟಿಕೊಳ್ಳುತ್ತೀರ?”
“ಸದ್ಯಕ್ಕೆ.”
“ಓದು?”
“ನನಗೆ ಡಿಗ್ರಿಯ ಮೇಲೆ ಮೋಹವಿಲ್ಲ…”
ಟೀ ಬಂತು. ಇಬ್ಬರೂ ಮೌನವಾಗಿ ಟೀ ಕುಡಿದರು.
“ನಿಮ್ಮ ಥೀಸಿಸ್ ಹೇಗೆ ಸಾಗಿದೆ?”
“ಇನ್ನೂ ಆರಂಭದ ಹಂತದಲ್ಲೇ ಇದೆ.”
“ಬೇಗನೆ ಮುಗಿಸಿಬಿಡಿ.”
“ಸಂಸ್ಥೆಯಲ್ಲೇ ಒಂದು ಕೆಲಸಕ್ಕೆ ಅರ್ಜಿ ಹಾಕಿದ್ದೇನೆ, ರೆಡ್ಡಿ.”
“ಸಿಗುತ್ತದೆಯ?”
“ನೋಡಬೇಕು.”
“ಆಗಾಗ ಈ ಕಡೆ ಬರುತ್ತಿರಿ, ಅರವಿಂದ್.”
ರೆಡ್ಡಿಯನ್ನು ಬಿಟ್ಟು ಬರುವಾಗ ಅಮೂಲ್ಯವಾದ್ದನ್ನೇನೋ ಕಳೆದುಕೊಂಡ ಹಾಗೆನಿಸಿ ಬಹಳ ಬೇಸರವಾಯಿತು. ತಾನಿದನ್ನು ನಿರೀಕ್ಷಿಸಿಯೂ ಇರಲಿಲ್ಲವೇ ಎಂದು ಕೂಡ ಅನಿಸಿತು. ಹಲವು ಬಾರಿ ರೆಡ್ಡಿಗೆ ಮುಂಜಾಗ್ರತ ಹೇಳೋಣ ಎಂದು ಕೊಂಡಿದ್ದ. ಆದರೆ ರೆಡ್ಡಿ ಅದನ್ನೆಲ್ಲ ಕೇಳುವವನಲ್ಲ. ತನ್ನ ನಂಬಿಕೆಗೆ ಸರಿಯಾಗಿ ನಡೆದುಕೊಳ್ಳುವವನು, ಹಟವಾದಿ, ಹಸುಳೆಯಂತೆ ಮಿದು, ಅವನ ಮುಂದೆ ಅರವಿಂದ ಯಾವಾಗಲೂ ತಲೆತಗ್ಗಿಸಿ ನಿಂತವನೇ. ಎಲ್ಲವನ್ನೂ ಕಳೆದುಕೊಳ್ಳಲು ತಯಾರಾದವನು ರೆಡ್ಡಿ. ಆದ್ದರಿಂದಲೇ ಯಾರೂ ಯಾವ ಬೆಲೆಗೂ ಆತನನ್ನು ಕೊಳ್ಳುವಂತಿಲ್ಲ.

ಚಟುವಟಿಕೆಗಳಿಂದ ಜಿಗಿಜಿಗಿಸುವ ನಗರ, ಅರವಿಂದ ಅನೇಕ ಬಸ್ಸುಗಳನ್ನು ಕೈಬಿಟ್ಟ. ಕೊನೆಗೆ ಹತಾಶನಾಗಿ ತಳ್ಳಿಕೊಂಡೇ ಒಂದು ಬಸ್ಸಿನೊಳಗೆ ನುಗ್ಗುವ ಭರದಲ್ಲಿ ಯಾರದೋ ಪಾದವನ್ನು ತುಳಿದು ಬಯ್ಯಿಸಿಕೊಂಡ. ಒಳಗೆಯೂ ನೂಕು ನುಗ್ಗುಲು, ಹೊರಗಿನವರು ಒಳಗೆ ಬರುವಂತಿಲ್ಲ ; ಒಳಗಿನವರು ಹೊರಗೆ ಇಳಿಯುವಂತಿಲ್ಲ. ಕಂಡಕ್ಟರ್‌ ಎಲ್ಲರಿಗೂ ಬಯ್ದು ಕೊಂಡೇ ಟಿಕೇಟು ಕೊಡುತ್ತಿದ್ದ.

ಒಂದು ಕ್ಷಣ ಅರವಿಂದನಿಗನಿಸಿತು : ಯಾವ ದಿಕ್ಕಿನಲ್ಲಿ ಸರಿಯುತ್ತಿದ್ದೇನೆ ನಾನು? ಸ್ವಲ್ಪ ಹೊತ್ತು ನಿಂತು ಯೋಚಿಸಲೂ ಕೂಡ ಸಮಯವಿಲ್ಲದಂತೆ ವರ್ತಿಸುತ್ತಿದ್ದೇನಲ್ಲ! ಆದರೆ ಅವನ ಸ್ಟಾಪು ಬಂದಿತ್ತು. ಹೇಗೋ ಹೊರಕ್ಕೆ ಹಾರಿಕೊಂಡಿದ್ದ. ಒಂದೆರಡು ಮಿನಿಟುಗಳಲ್ಲಿ ಮತ್ತೆ ಸಂಸ್ಥೆಯ ಆವರಣದಲ್ಲಿದ್ದ.

ಯಥಾ ಕ್ರಮದಲ್ಲಿ ಬದುಕು ಸಾಗುತ್ತಲೇ ಇತ್ತು. ಒಂದು ದಿನ ರಾಣಿ ಹೇಳಿದಳು :
“ನಿಮ್ಮ ಬಗ್ಗೆ ರೇಯೊಂದಿಗೆ ಮಾತಾಡಿದ್ದೇನೆ.”
“ಏನು ಮಾತಾಡಿದಿರಿ?”
ತುಸು ಕುತೂಹಲ ವ್ಯಕ್ತಪಡಿಸಿದ,
“ಕೆಲಸ ಹುಡುಕುತ್ತಾ ಇದ್ದೀರಿ ಎಂದು ಹೇಳಿದೆ.”
“ರೇ ಏನಂದರು?”
“ಇಲ್ಲೂ ಅಪ್ಪೆ ಮಾಡಿದ್ದಾನೆ” ಅಂದರು. ನಿಮ್ಮ ಬಗ್ಗೆ ಒಳ್ಳೆ ಅಭಿಪ್ರಾಯ ಇದೆ ಅವರಿಗೆ.
“ಥ್ಯಾಂಕ್ಸ್.”
“ಯಾಕೆ?”
“ರೇಗೆ ನನ್ನ ಸಂಗತಿ ತಿಳಿಸಿದ್ದಕ್ಕೆ.”
“ಅದರಲ್ಲೇನಿದೆ, ಎಂದು ಕತ್ತು ಕೊಂಕಿಸಿದಳು ರಾಣಿ, ಅವಳ ದೃಷ್ಟಿಯಲ್ಲಿ ಅರವಿಂದನಿಗೆ ಕೆಲಸ ಸಿಕ್ಕಿದ ಹಾಗೆಯೇ ಇತ್ತು. ಹಾಗೆಂದು ಕನಿ ಹೇಳಿದಳು, ಬೆಟ್ ಇಟ್ಟುಕೊಂಡಳು.

ಇಂಟರ್ವ್ಯೂ ನೆಪಮಾತ್ರಕ್ಕೆ ನಡೆಯಿತು. ಅದಾದ ಒಂದೆರಡು ದಿನಗಳಲ್ಲಿ ರಿಜಿಸ್ಟ್ರಾರರು ಸಹಿ ಮಾಡಿದ ನೇಮಕ ಪತ್ರವೂ ಅವನ ಕೈಸೇರಿತು. ಸದ್ಯಕ್ಕೆ ಕೆಲಸ ಟೆಂಪರರಿಯಾಗಿದ್ದರೂ ಮುಂದೆ ಖಾಯವಾಗುವ ಸಾಧ್ಯತೆಯಿತ್ತು.

ರಾಣಿಗೆ ಬಹಳ ಖುಷಿಯಾಗಿತ್ತು. ಕೆಲಸ ತಾನೇ ಕೊಡಿಸಿದಂತೆ ವರ್ತಿಸಿದಳು ಕೆಲಸ ಸಿಕ್ಕಿದ ನೆವದಲ್ಲಿ ಪಾರ್ಟಿ ಗಿಟ್ಟಿಸಿಕೊಳ್ಳಲು ಮರೆಯಲಿಲ್ಲ. ಪ್ರತಿ ಸಂಜೆ ಎಲ್ಲಾದರೂ ತಿರುಗಲು ಹೋಗುವುದು, ಯಾವುದಾದರೂ ಹೋಟೆಲಿನಲ್ಲಿ ಊಟ ಮಾಡುವುದು, ಸಿನಿಮಾ ನೋಡುವುದು-ಈಗ ದೈನಂದಿನ ಚಟುವಟಿಕೆಗಳಾಗಿದ್ದುವು.

“ಯಾಕೆ ನೀವಿನ್ನೂ ಸಂತೋಷವಾಗಿಲ್ಲ ! ಎಂದು ರಾಣಿ ಒಮ್ಮೆ ಕೇಳಿದ್ದಳು. ಹೌದು, ಯಾಕೆ ಇನ್ನೂ ಸಂತೋಷವಾಗಿಲ್ಲ? ಎಂದೋ ಬಯಸಿದುದನ್ನೆಲ್ಲ ಒಂದೊಂದಾಗಿ ಸಾಧಿಸುತ್ತ ಬಂದಿದ್ದೇನೆ. ಕೆಲಸ ಸಿಕ್ಕಿದೆ. ಡಾಕ್ಟರೇಟ್ ಬರುತ್ತದೆ. ಒಂದೆರಡು ವರ್ಷಗಳಲ್ಲಿ ವಿದೇಶಕ್ಕೆ ಹೋದರೂ ಹೋದೆ. ರೇಯ ಮೆಚ್ಚುಗೆಗೆ ಪಾತ್ರನಾಗಿದ್ದೇನೆ. ಆದರೂ ಯಾಕೆ ಮನಸ್ಸಿಗೆ ಲವಲವಿಕೆಯಿಲ್ಲ. ನನ್ನ ಸ್ವಭಾವವೇ ಹೀಗೆಯೆ?

ತಟ್ಟನೆ ನಾಗೂರಿನ ದಿನಗಳು ನೆನಪಾದವು.
“ಯಾವುದೋ ಹುಡುಗಿಯನ್ನು ಹಂಬಲಿಸುತ್ತಿದ್ದೀರಿ!
ರಾಣಿ ಅವನನ್ನು ಕೆಣಕಿದಳು. ಅವಳು ತೊಟ್ಟಿದ್ದ ಹತ್ತಿಯ ಏಪ್ರನ್ನ ಸೀಳಿನಿಂದ ಕಾಡು ತೊಡೆಯ ತನಕ ಕಾಣಿಸುತ್ತಿತ್ತು. ನೀನಿನ್ನೂ ವರ್ಜಿನ್ ಅಲ್ಲವೆ? ಗೊತ್ತು ನನಗೆ ನಿನ್ನ ಮುಖವೇ ಹೇಳುತ್ತದೆ. ಆದರೆ ಈ ರಾತ್ರಿ ಮಾತ್ರ ನಿನ್ನ ಬಿಡಲ್ಲ. ಖಂಡಿತ ಬಿಡಲ್ಲ-ಎಂಬಂತೆ ಕೆಣಕುತ್ತ, ನಗುತ್ತ, ಕೀಟಲೆ ಮಾಡುತ್ತ ಕುಳಿತಿದ್ದಳು ಅವಳು.

“ಇಲ್ಲ.” ಎಂದು ತಡೆಯಲು ಯತ್ನಿಸಿದ. ಆದರೆ ರಾಣಿ ಕಡಲಿನಂತೆ ಅಮಲಿನಂತೆ ಅವನನ್ನು ತುಂಬಿಕೊಂಡಳು.

ಒಂದು ದಿನ, ರೇಯಿಂದ ಕರೆ ಬಂತು, ಯಾಕಿರಬಹುದು ಎಂದುಕೊಂಡೇ ಅವರನ್ನು ನೋಡಲು ಹೋದ. ರೇ ಹಸನ್ಮುಖರಾಗಿ ಕಂಡು ಬಂದರು. ಕೂಡಲು ಹೇಳಿದರು. ಕೂತ.

ಅರವಿಂದನಿಗನಿಸಿತು : ನಾನು ರೆಡ್ಡಿಯ ಕುರಿತು ಮಾತಾಡಬೇಕು. ರೆಡ್ಡಿ ಸಂಸ್ಥೆಯಿಂದ ನಿರ್ಗಮಿಸಿ ಕೆಲವು ದಿನಗಳೇ ಸರಿದಿದ್ದುವು, ಸ್ವಲ್ಪ ಕಾಲ ಎಲ್ಲರೂ ಆ ಬಗ್ಗೆ ಮಾತಾಡಿಕೊಳ್ಳುತ್ತ ಇದ್ದರು. ನಂತರ ಅದು ತನ್ನಿಂತಾನೇ ತಣ್ಣಗಾಯಿತು. ರೆಡ್ಡಿಯದೂ ತಪ್ಪಿರಬಹುದು. ಸಂಸ್ಥೆಯನ್ನು ಟೀಕಿಸಿ ಅವನು ಪೇಪರಿನಲ್ಲಿ ಬರೆಯಬೇಕಾಗಿರಲಿಲ್ಲ. ನೇರವಾಗಿ ರೇಯೊಂದಿಗೆ ಮಾತಾಡಬಹುದಿತ್ತು….

“ಕೆಲಸ ಇಷ್ಟವಾಯಿತೇ?”
“ಯಸ್ ಸರ್, ಥ್ಯಾಂಕ್ಯೂ.”

ಆದಷ್ಟು ಬೇಗ ಥೀಸಿಸ್ ಬರೆದು ಮುಗಿಸಿಬಿಡಿ. ಹಾಗಿದ್ದರೆ ಪರ್ಮನೆಂಟ್ ಮಾಡೋದಕ್ಕೆ ಅನುಕೂಲವಾಗುತ್ತದೆ.”
“ಪ್ರಯತ್ನಿಸುತ್ತೇನೆ.”
“ನೋಡಿ, ಈಗ ನಿಮ್ಮನ್ನು ಬರಹೇಳಿದ ಕಾರಣ, ಈ ಬೇಸಿಗೆಯಲ್ಲಿ ಇಲ್ಲಿ ಇಂಟರ್‌ನ್ಯಾಶನಲ್ ಹಿಸ್ಟರಿ ಕಾಂಗ್ರೆಸ್‌ನ ಸಮ್ಮೇಳನ ನಡೆಯುತ್ತೆ.”
“ನನಗೆ ಗೊತ್ತು.”
“ಇನಾಗರೇಟ್ ಮಾಡೋದಕ್ಕೆ ಪ್ರಧಾನಮಂತ್ರಿಯನ್ನ ಆಮಂತ್ರಿಸಿದ್ದೇನೆ. ಒಪ್ಪಿಕೊಂಡಿದ್ದಾರೆ. ಉದ್ಘಾಟನಾ ಭಾಷಣ ನಾವೇ ತಯಾರಿಸಿಕೊಡಬೇಕಾಗುತ್ತದೆ.”

“ನಾವೇ !?”
“ಹೌದು, ನಾವು ಡ್ರಾಫ್ಟ್ ಮಾಡಿ ಕಳಿಸಬೇಕು. ಇದಕ್ಕೆ ನಿಮ್ಮನ್ನು ಕರೆಸಿದ್ದು.”

ಈ ಸಮ್ಮೇಳನದ ವಿಷಯ, ನಿಲುವುಗಳನ್ನು ತೋರವಾಗಿ ವಿವರಿಸಿ ಸುಮಾರು ಇಪ್ಪತ್ತು ನಿಮಿಷಗಳ ಭಾಷಣ ತಯಾರಿಸುವಂತೆ ಹೇಳಿದರು. ಅರವಿಂದ ಅನುಮಾನಿಸುತ್ತಿರುವುದನ್ನು ಕಂಡು-

“ಡೋಂಟ್ ವರಿ, ನಿಮ್ಮಿಂದ ಆಗುತ್ತದೆ ಈ ಕೆಲಸ, ಆದ್ದರಿಂದಲೇ ಇದನ್ನ ನಿಮಗೆ ವಹಿಸಿದ್ದು,” ಎಂದು ಭರವಸೆ ಹೇಳಿದರು.

ರೇ ಮುಂದೂಡಿದ ಮಾರ್ಲ್‌ಬರೋ ಸಿಗರೇಟನ್ನು ಹೆಕ್ಕುವಾಗ ಅರವಿಂದನಿಗೆ ರೆಡ್ಡಿಯ ವಿಷಯ ಪೂರ್ತಿ ಮರೆತುಹೋಗಿತ್ತು. ತಾನೀಗ ವಹಿಸಿಕೊಂಡ ಹೊಸ ಜವಾಬ್ಬಾರಿ ಮಾತ್ರ ಅವನ ತಲೆಯಲ್ಲಿ ತುಂಬಿತ್ತು. ಲೈಬ್ರರಿಗೆ ಹೋಗಿ ಕಳೆದ ಹಲವು ವರ್ಷಗಳಲ್ಲಿ ಪ್ರಧಾನಮಂತ್ರಿ ಮಾಡಿದ ಭಾಷಣಗಳ ಸಂಚಿಕೆಗಳನ್ನು ಹುಡುಕಿ ತೆಗೆದ. ಇತಿಹಾಸ ರಾಜಕೀಯಗಳ ಬಗ್ಗೆ ಸರಕಾರದ ಧೋರಣೆಗಳನ್ನು ಅಭ್ಯಾಸ ಮಾಡಿದ. ಹಲವು ಬರೇ ಬೋಳೆ ಮಾತುಗಳು, ಕೆಲವರ ತುಂಬಾ ಸದ್ದು ಗದ್ದಲದ ಉದ್ಘಾರಗಳು, ಕಾಲಕಾಲಕ್ಕೆ ಬೇರೆ ಬೇರೆ ವ್ಯಕ್ತಿಗಳು ಸಿದ್ದಪಡಿಸಿದ ಭಾಷಣಗಳಂತಿದ್ದುವು. ಆದರೂ ಇವುಗಳ ಮೂಲಧೋರಣೆಯಲ್ಲಿ ವ್ಯತ್ಯಾಸವಿರಲಿಲ್ಲ. ಸರಕಾರದ ಠೀವಿ, ವಸ್ತುನಿಷ್ಠತೆಯ ವ್ಯಾಪಾರಮುದ್ರೆ ಎಲ್ಲದರ ಮೇಲೂ ಇತ್ತು.

ಅರವಿಂದ ಹಗಲು ರಾತ್ರಿ ನಿದ್ದೆಗೆಟ್ಟು ಕೆಲಸ ಮಾಡತೊಡಗಿದ. ಒಮ್ಮೆ ಕೇಶವುಲು ಏನೆಂದು ವಿಚಾರಿಸಿದ. ಅವನಿಗೆ ಡಾಕ್ಟರಲ್ ಪ್ರಬಂಧ ಬರೆಯುತ್ತಿದ್ದೇನೆಂದು ಸುಳ್ಳು ಹೇಳಬೇಕಾಯಿತು. ಹೌದೇ ಎಂದು ಕೇಶವುಲು ಆಶ್ಚರ್ಯ ಅಭಿಮಾನಗಳಿಂದ ಹುಬ್ಬೇರಿಸಿ ಮತ್ತೆ ತನ್ನ ಲೈಂಗಿಕ ಪುಸ್ತಕಗಳಲ್ಲಿ ಮಗ್ನನಾದ. ಓದುತಲೇ ನಿದ್ದೆ ಹೋಗುತ್ತಿದ್ದ ಆತ. ನಿದ್ದೆಯೊಂದಿಗೆ ಆರಂಭವಾಗುವ ಗೊರಕೆ. ಸಮಾಜದ ಬೇರೆ ಕೊಠಡಿಗಳಲ್ಲಿ ಮದ್ಯಪಾನ, ಇಸ್ಪೀಟಾಟಗಳು ನಡೆಯುತ್ತಲೇ ಇದ್ದುವು. ಕಾಂಪೌಂಡ್ ಗೋಡೆಯಾಚೆಗೆ ಪೇಟೆ ನಿದ್ರಿಸಲು ಬಹಳ ಹೊತ್ತಾಗುತಿತ್ತು. ರಾತ್ರಿಯ ಸಿನಿಮಾ ಬಿಟ್ಟು ಬರುವ ಮಂದಿ, ಕುಡುಕರು, ಜಗಳ ಮಾಡುವ ಜೋಪಡಿಯವರು, ಸೂಳೆಯರು, ತಲೆಹಿಡುಕರು. ಎಲ್ಲದರ ಮಧ್ಯೆ ಅರವಿಂದ
ಇತಿಹಾಸದ ಬಗ್ಗೆ ಚಿಂತಿಸುತ್ತ ನಿದ್ದೆಗೆಟ್ಟು ಕುಳಿತಿರುತ್ತಿದ್ದ.

ಕಣ್ಣೆದುರಲ್ಲಿ ಅಂತಾರಾಷ್ಟ್ರೀಯ ಇತಿಹಾಸ ಸಮ್ಮೇಳನ, ವರ್ಣರಂಜಿತ ಶಾಮಿಯಾನದ ಕೆಳಗೆ ದೇಶವಿದೇಶಗಳ ಪಂಡಿತರು, ಗಣ್ಯರು, ಸ್ಟೇಜಿನ ಮೇಲೆ ಪ್ರಧಾನಮಂತ್ರಿ, ಮೈಕ್ರೋಫೋನ್‌ನ ಮೂಲಕ ಎಲ್ಲೆಡೆ ಕೇಳಿಸುತ್ತಿದ್ದುದು ಅವನದೇ ವಿಚಾರಗಳು, ಅವನದೇ ವಾದಗಳು.

ಅವನದೇ ಧ್ವನಿ!

ಆಗಾಗ ಏಳುತ್ತಿದ್ದ ಕರತಾಡನದ ಅಲೆಗಳಲ್ಲಿ ಒಮ್ಮೊಮ್ಮೆ ಮಾತು ಕೇಳಿಸುತಿರಲಿಲ್ಲ.

ಅವನು ಮಾತ್ರ ಎಲ್ಲರಿಂದಲೂ ದೂರ, ರಾಣಿಯ ಜತೆಯಲ್ಲಿ ಐಸ್‌ಕ್ರೀಮ್ ತಿನ್ನುತ್ತ ನಿಂತಿದ್ದ. “ಆಹಾ ! ಎಂತಹ ಭಾಷಣ !” ಎನ್ನುತ್ತಿದ್ದಳು ಅವಳು.
*****

ತಿರುಮಲೇಶ್ ಕೆ ವಿ

ಕಾಸರಗೋಡಿನ ಕಾರಡ್ಕ ಎಂಬಲ್ಲಿ ೧೯೪೦ ರಲ್ಲಿ ಜನನ. ಕಾಸರಗೋಡು, ತಿರುವನಂತಪುರ, ಹೈದರಾಬಾದುಗಳಲ್ಲಿ ವಿದ್ಯಾಭ್ಯಾಸ. ಇಂಗ್ಲೀಷ್ ಸಾಹಿತ್ಯದಲ್ಲಿ ಎಂ. ಎ.; ಭಾಷಾಶಾಸ್ತ್ರದಲ್ಲಿ ಪಿಎಚ್.ಡಿ. ಕೇರಳದ ಹಲವೆಡೆ ಇಂಗ್ಲೀಷ್ ಅಧ್ಯಾಪಕರಾಗಿ ವೃತ್ತಿಜೀವನ ಆರಂಭ; ಆನಂತರ ಹೈದರಾಬಾದಿನ ಉನ್ನತ ಶಿಕ್ಷಣ ಸಂಸ್ಥೆ ಸೆಂಟ್ರಲ್ ಇನ್ಸ್‌ಟಿಟ್ಯೂಟ್ ಆಫ್ ಇಂಗ್ಲಿಷ್ ಎಂಡ್ ಫಾರಿನ್ ಲಾಂಗ್ವೇಜಸ್‌ನಲ್ಲಿ ಪ್ರಾಧ್ಯಾಪಕ.೨೦೦೨ರಲ್ಲಿ ನಿವೃತ್ತಿ.ಅಮೇಲೆ ಅಮೆರಿಕ, ಯೆಮೆನ್ ದೇಶಗಳಲ್ಲಿ ಅಧ್ಯಾಪನ. ಸದ್ಯ ಹೈದರಾಬಾದಿನಲ್ಲಿ ವಾಸ್ತವ್ಯ. ‘ಮುಖಾಮುಖಿ’ ಕವನಸಂಕಲನಕ್ಕೆ ಕೇರಳದ ಕುಮಾರನ್ ಆಶಾನ್ ಅವಾರ್ಡ್ ಮತ್ತು ಕಾಂತಾವರದ ವರ್ಧಮಾನ ಪ್ರಶಸ್ತಿ; ‘ಅವಧ’ ಕವನ ಸಂಕಲನಕ್ಕೆ ಮತ್ತು ‘ಸಮ್ಮುಖ’ ಲೇಖನ ಸಂಕಲನಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮತ್ತು ‘ಅಕ್ಷಯ ಕಾವ್ಯ’ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ೨೦೧೫ರ ಸಾಲಿನ ಪ್ರಶಸ್ತಿ ಲಭಿಸಿದೆ. ಅಲ್ಲದೆ, ಪುತ್ತೂರು ಕರ್ನಾಟಕ ಸಂಘದ ನಿರಂಜನ ಪ್ರಶಸ್ತಿ, ಮತ್ತು ಶಿವಮೊಗ್ಗ ಕರ್ನಾಟಕ ಸಂಘದ ಹಾ.ಮಾ.ನಾ. ಪ್ರಶಸ್ತಿಗಳೂ ದೊರಕಿವೆ.ಕರ್ನಾಟಕ ಸಹಿತ್ಯ ಅಕಾಡೆಮಿಯ ಗೌರವ ಸಾಹಿತ್ಯ ಪ್ರಶಸ್ತಿಗೂ ಇವರು ಪಾತ್ರರಾಗಿದ್ದಾರೆ. ತಿರುಮಲೇಶ್ ಇಂಗ್ಲೀಷ್‌ನಲ್ಲೂ ಹಲವಾರು ಲೇಖನಗಳನ್ನು ಮತ್ತು ಪುಸ್ತಕಗಳನ್ನು ಬರೆದಿದ್ದಾರೆ.
*****
ತಿರುಮಲೇಶ್ ಕೆ ವಿ

Latest posts by ತಿರುಮಲೇಶ್ ಕೆ ವಿ (see all)