ಅವನು ಬರುತ್ತಾನೆ
ಮಾತುಗಳ ಮಾಲೆಹಾಕಿಕೊಂಡು ಮೌನದ ಬೇಲಿ ಸುತ್ತಿಕೊಂಡು
ತನ್ನ ಪರಾಕು ಪಂಪ ತಾನೇ ಒತ್ತಿಕೊಳ್ಳುತ್ತ ಅಥವಾ ಒತ್ತಿಸಿಕೊಳ್ಳುತ್ತ
ತಲೆ ನಿಗುರಿಸಿ ಎದೆ ಉಬ್ಬಿಸಿ ಬಿಮ್ಮನೆ ಬೀಗಿ ಬರುತ್ತಾನೆ
ಮಾತಿನ ಹೊಳೆಯಲ್ಲಿ ಮಂತ್ರ ಮಹಾರಾಜರ ತೇಲಿಸಿ ಮುಳುಗಿಸುತ್ತ
ಬಾಯ ಒರಳಲ್ಲಿ ಹಿರಿಯರನರೆದಾಡುತ್ತ
ಹಲ್ಲ ತೀಟೆಯಲ್ಲಿ ಕಿರಿಯರ ಕೊರೆದು ಸಣ್ಣ ಮಾಡುತ್ತ
ಮೂಗಿನ ನೇರಕ್ಕೆ ಜಗವನಳೆದು ಸೀನಿ ಸುರಿಯುತ್ತ
ಬಡಾಯಿ ಬಾಹುಗಳ ಉದ್ದಗಲಗಳಿಗೆ ಚಾಚಿ ತಬ್ಬಿ
ಹೂಟ್ಟೆಯುಬ್ಬರ ತೋರುತ್ತ ತನ್ನಪ್ಪನೊಬ್ಬನೇ ಪರಮ ಪುರುಷ
ತನ್ನವಗವಳೊಬ್ಬಳೇ ಜಗಮೀರಿದ ಗರತಿ ಎನುತ್ತ
ತನ್ನ ವಂಶ ವೃಕ್ಷಕ್ಕೆ ಅನಾದಿ ಬೀಜದ ಪಾವಿತ್ರ್ಯ ತೋರುತ್ತ
ಹಗಲಿನ ಮುಖಕ್ಕೆ ಕೊಳ್ಳಿ ತೋರಿಸುತ್ತ
ವಿಶ್ವಗೂಢತೆಯ ರೋಮರೋಮಗಳಲ್ಲಿ ತುಂಬಿಕೊಂಡು
ತಾನು ಕುಡಿದೊಂದೆರಡು ಬಾವಿಗಳಲ್ಲಿ ಸಾಗರಗಳ ಮುಕ್ಕಳಿಸುತ್ತ
ತನ್ನ ಬಾಯಲ್ಲೀರೇಳು ಲೋಕಗಳ ಬಿಂಬಿಸಿ
ಕೃಪಾಪೋಷಕ ನಗೆಯಿಂದ ಜಗವ ಪಾವನಗೊಳಿಸಿ
ನಮ್ಮನು ಉದ್ಧರಿಸುಲು ಬರುತ್ತಾನೆ
ಬಂದು ನಿಂತು ಜಗದಗಲ ಮುಗಿಲಗಲವಾದ
ತನ್ನುದರದಡಿಯಲ್ಲಿ ನಮಗೆ ಕಾವು ಕೊಡುತ್ತಾನೆ
ಬೆಚ್ಚಗಿದೆಯೆಂದು ನಾವು ಆಶ್ರಯ ಪಡೆದೆವೋ ಸರಿ
ಕಪ್ಪ ನೆರಳಪುಟ್ಟಿ ನಮ್ಮ ಮುಚ್ಚಿ
ಉಸಿರುಕಟ್ಟಿ ನಾವು ಮೂಕರಾಗಿ
ಬಿಳಿಚಿಕೊಂಡು ಬೆಪ್ಪರಾದರೆ ಅವನ ತಪ್ಪೇ?
ನೋಡು ಅವನು ಬಂದೇ ಬರುತ್ತಾನೆ
ಬಿಡಿಸಿಕೊಳ್ಳಲು ನೀನು ಯತ್ನಿಸಿದಂತೆಲ್ಲಾ
ಪರಲೋಕಕೇರುವ ಪರಿಪೂರ್ಣ ಪವಾಡದೇಣಿಯಿಂದಾದರೂ
ನಿನ್ನ ಸೆಳೆದು ತನ್ನ ಸುತ್ತಲೇ ಜೇಡನಂತೆ ತಿರುಗಾಡಿಸುತ್ತಾ
ಕೊನೆಗೆ ನಿನ್ನ ನುಂಗಿ ನೀರು ಕುಡಿಯುತ್ತಾನೆ
ಸೋಹಮ್ಮೆಂದು ನಿನ್ನ ಸೊನ್ನೆಯಾಗಿಸುತ್ತಾನೆ
ನೀನು ನೀನಾಗುಳಿಯಬೇಕೆಂದರೆ ದೂರ ಓಡು
ಅಗೋ ಬಂದ! ಬಂದೇ ಬರುತ್ತಾನೆ.
*****