ಮುಚ್ಚಿಕೊಂಡ ಕದಗಳ
ಆಹ್ವಾನವಿಲ್ಲದ ಅಂತಃಪುರದೊಳಗೂ
ಹೇಗೋ ನುಗ್ಗಿಬಿಡುತ್ತಾಳೆ
ಗೊತ್ತೇ ಆಗದಂತೆ
ಮೆಲ್ಲ ಮೆಲ್ಲಗೆ ಗೂಡುಕಟ್ಟಿ
ಕನಸಿನ ಮೊಟ್ಟೆ ಇಟ್ಟುಬಿಡುತ್ತಾಳೆ
ಇವಳದೇ ಜೀವಭಾವ
ಮೈಮನಗಳ ತುಂಬಿಕೊಂಡು
ಮೊಟ್ಟೆಯೊಡೆದು ಹುಟ್ಟಿಬಂದ
ಕನಸಿನ ಕಂದನಿಗೆ
ವರ್ಣನೆಗೆ ಸಿಲುಕದ
ಅದೆಷ್ಟು ವರ್ಣಗಳು!
ಒಳಗೆಲ್ಲಾ ಹೋಲಿ
ಎರಚಿದ ರಂಗುಗಳು!

ಬಣ್ಣದ ಅಂತಃಪುರಕೆಲ್ಲ
ಜೀವ ಬಂದಿದೆ ಈಗ
ಇವಳು ಕಚಗುಳಿ ಇರಿಸಿ
ಕುಣಿಸಿದಂತೆಲ್ಲಾ
ತಕಥೈ ಕುಣಿಯುತ್ತಾ
ಅಪೂರ್ಣ ಕಥೆಗಳೇ
ಇತಿಹಾಸವಾಗಿಬಿಡುವ
ಈ ನಾಡಿನಲ್ಲಿ
ಮಾನುಷ ಬಣ್ಣಗಳು
ಇವಳ ಆವ್ಹಾಯಿಸಿಕೊಂಡೂ
ಅರ್ಥವಿಲ್ಲದ ಕಥೆಗಳಾಗಿಬಿಡುತ್ತವೆ.

ಜೀವ ಸೆಲೆಯುಕ್ಕಿಸುವ
ಇವಳು ಮಾತ್ರ
ಏನೂ ಗೊತ್ತಿಲ್ಲದಂತೆ ಒಳಗೇ
ಎಂದೆಂದಿಗೂ ಮುಗಿಯದ
ಜೀವಂತ ಕವಿತೆಯಾಗಿ ಉಕ್ಕುತ್ತಾ
ಹರಿಯುತ್ತಲೇ ಇರುತ್ತಾಳೆ
ಎಲ್ಲೆಡೆಗೆ ಹಬ್ಬಿ
ಎಲ್ಲರನೂ ತಬ್ಬಿ
ಪ್ರೇಮಸಂದೇಶ ಸಾರುತ್ತಲೇ ಉಳಿಯುತ್ತಾಳೆ
ಈ ಅನನ್ಯ ಹೇಮೆ!
*****