ಬೇವಾರ್‍ಸಿ! ನನ್ ಪುಟ್ನಂಜೀನ
ರೂಪಾನ್ ಆಡ್ತಿನಿ ಬಾಪ್ಪ!
ನಂಗ್ ಆಗಾಗ್ಗೆ ಆಡೀಸ್ತೈತೆ
ನನ್ ಪುಟ್ನಂಜೀ ರೂಪ! ೧
ಆಲ್ನಲ್ ಕಮಲದ್ ಊ ತೇಲ್ಬುಟ್ಟಿ
ಮೇಲ್ ಒಂದ್ ತೆಳ್ನೆ ಲೇಪ
ಚಿನ್ನದ್ ನೀರ್‍ನಲ್ ಕೊಟ್ಟಂಗೈತೆ
ನನ್ ಪುಟ್ನಂಜೀ ರೂಪ! ೨
ಅಮಾಸೇಲಿ ಅತ್ತೀಸ್ದಂಗೆ
ಒಂದ್ ಅತ್ ನೂರ್ ಮತಾಪ
ಬೆಳಕಾಗ್ತೈತೆ ಕಂಡ್ರೆ ನಂಗೆ
ನನ್ ಪುಟ್ನಂಜೀ ರೂಪ! ೩
ಔಸ್ದೀಗ್ ಇಂಕ್ರ ಬೇಕಂದ್ರೂನೆ
ಔಳ್ ತಾವ್ ಇಲ್ಲ ಕೋಪ!
ಅದಕೆ ಅಸ್ಟೊಂದ್ ಚಂದಾಗೈತೆ
ನನ್ ಪುಟ್ನಂಜೀ ರೂಪ! ೪
ನನಗೇನಾರ ಕೋಪ ಬಂದ್ರೆ
ನಂ ನಂ ಪ್ರೀತಿ ನೆಪ್ಪ
ಕರಕೊಂಡ್ ಬಂದಿ ಕೋಪಾನ್ ಇಕ್ತೈತ್
ನನ್ ಪುಟ್ನಂಜೀ ರೂಪ! ೫
ಬಟ್ಟೇ ಕಪ್ಪೀನ್ ತೊಳಿಯಾಕ್ ನಾವು
ಯಂಗಾಕ್ತೀವಿ ಸೋಪ
ಮನಸಿನ್ ಕೆಟ್ ಬಾವನೇಗೊಳ್ಗಂಗೆ
ನನ್ ಪುಟ್ನಂಜೀ ರೂಪ! ೬
ದೇವರ ತಾಕ್ ನಾನ್ ಒಯಾಕಿಲ್ಲ
ಅಣ್ಣು ಕಾಯಿ ದೂಪ!
ದೇವರ್‍ಗ್ ಅಣ್ ಕಾಯ್ ದೂಪ ಎಲ್ಲಾ
ನನ್ ಪುಟ್ನಂಜೀ ರೂಪ! ೭
ಸಿಡಿಯೋ ಮದ್ದಿನ್ ಸುಟ್ಟಾಕ್ದಂಗೆ
ಮಡಗಿದ್ದೇನೆ ಕೇಪ-
ನನ್ ತಾಪತ್ರೇನ್ ಉಡಾಯ್ಸತೈತೆ
ನನ್ ಪುಟ್ನಂಜೀ ರೂಪ! ೮
ಚಿನ್ನದ ಬರಣೀಲ್ ತುಂಬಿಟ್ಟಂಗೆ
ಆಲು ಸಕ್ರೆ ತುಪ್ಪ-
ಒಳ್ಳೇ ಗುಣಗೊಳ್ನ್ ಒಳಗಿಟ್ಟೈತೆ
ನನ್ ಪುಟ್ನಂಜೀ ರೂಪ! ೯
ಪುಟ್ಟಂಜೀನ ಕೈ ಇಡಿದೋನು
ನೀನೆ ಭಲೆ! ಭೂಪ!
ಅಂತ ನಂಗೆ ಬೆನ್ ತಟ್ತೈತೆ
ನನ್ ಪುಟ್ನಂಜೀ ರೂಪ! ೧೦
ದೇವಸ್ತಾನ್ದಾಗ್ ಎಂಗಿರತೈತೆ
ಚಿನ್ನದ್ ನಂದಾದೀಪ
ಅಂಗ್ ನನ್ ಅಟ್ಟೀನ್ ಬೆಳಗಿಸ್ತೈತೆ
ನನ್ ಪುಟ್ನಂಜೀ ರೂಪ! ೧೧
ಇದನ ಕೇಳ್ದೋರ್ ಯಾರಾರ್ ‘ಅಯ್ಯೊ!
ಇವನ್ ಒಬ್ ಉಚ್ಚ! ಪಾಪ!’
ಅಂದೋರ್‍ಗ್ ‘ಅಯ್ಯೋ ಪಾಪಾಂ’ತೈತೆ
ನನ್ ಪುಟ್ನಂಜೀ ರೂಪ! ೧೨
*****