ದೇವರಾಜು ಅರಸು ಕಾಲ್ದಾಗೂ ಅವರ ಸುತ್ತ ನಾನಾ ನಮೂನೆ ಹೆಣ್ಣುಗಳಿದ್ವು ಬಿಡ್ರಿ. ಜೆ.ಹೆಚ್.ಪಟೇಲರಂತೂ ಓಪನ್ ಸ್ಟೇಟ್ಮೆಂಟೇ ಕೊಟ್ಟಿದರಲ್ರಿ! ವೈನ್ ಅಂಡ್ ವುಮನ್ ನನ್ನ ವೀಕ್ ನೆಸ್ ಅಂತ. ಆವಯ್ಯ ಹೆಂಗಸರ ಒಡ್ಡೋಲಗದಲ್ಲಿ ಪಾನಯಾತ್ರೆ ಮಾಡ್ತಾನೇ ಶವಯಾತ್ರೆಗೆ ಹೊಂಟ ಸಿವಶರಣ. ಅದ್ರೂವೆ ಇವರೆಲ್ಲಾ ಟಚ್ ಮಾಡಿದ ಕನ್ನೇನ ಕೈ ಹಿಡಿದು ಹಾಸಿಗೆಗೆ ಎಳೆದ್ರೆ ಹೊರ್ತು ಅಧಿಕಾರದ ಗದ್ದುಗೆಗೆ ಎಳೆಯದ ಶಾಣ್ಯಾರ್ರಿ. ಆದರೆ ಯಡೊರಿ ಎಂಬ ಆರೆಸ್ಸುಸು ಶರಣ ಶೋಭಾಯಾತ್ರೆಗೆ ಹೊಂಟದ್ದೇ ಈಗ ಯಡವಟ್ಟಾಗೇತ್ರಿ. ಆರೆಸ್ಸೆಸು ಲೀಡರ‍್ಸ್ ಸೋತು ಸುಣ್ಣವಾದಾಗ ಶೋಭಾಯಾತ್ರೆ ಮಾಡೋದು ಕಾಮನ್ ಥಿಂಗ್. ಹಂಗೆ ನಾನೊ ಶೋಭಾಯಾತ್ರೆ ಮಾಡಿದ್ರೆ ಯಾಕ್ರಲಾ ಹಿಂಗೆ ಬೊಬ್ಬೆ ಹೊಡಿಲಿಕತ್ತೀರಿ ಅಂತ ಯಡೂರಿ ತಮ್ಮವರಿಗೇ ಉಲ್ಟ ಹೋಡಿಲಿಕತ್ತವರೆ. ‘ಜೋಡಿ ಎತ್ತು’ ಎಂದೇ ಕುಖ್ಯಾತರಾದ ಕುಮ್ಮಿ-ಯಡ್ಡಿ ಮೇಲೆ ಬಿಜೆಪಿನೋರ್ಗೆ ಪುಲ್ ಡವುಟೈತೆ. ಈವತ್ತೋ ನಾಳೆನೋ ಯಡೂರಿ ಕೊಮಾರಸಾಮಿ ಕಿತ್ತಾಡೋದು ಗ್ಯಾರಂಟಿ. ಅತಿ ಸ್ನೇಹ ಗತಿಗೇಡು ಅಂಬಂಗೇ ಆಗೋದು ಎಂದು ಗಿಳಿಸ್ಯಾಸ್ತ್ರ ಹೇಳಲಿಕತ್ತಿರುವಾಗ್ಲೆ ‘ಜೆಡಿ‌ಎಸ್ ಉಪಕಾರಿ ಬಿಜೆಪಿ ಪಾಲಿಗೆ ಕೂಗುಮಾರಿ’ ಯಂತಾದ ಯಡೂರಿ ಪಕ್ಷದೋರ ಜೊತೆಗೇ ಕಿತ್ತ್ಯಾಡ್ಲಿಕತ್ತಬೇಕೆ! ಹೆಣ್ಣಿನಿಂದಲೇ ಇಹವು ಹೆಣ್ಣಿನಿಂದಲೇ ಪರವು ಹೆಣ್ಣಿನಿಂದಲೇ ಸಕಲ ಸಂಪದವು ಎಂದೇ ನಂಬಿದ ವಿಧುರನೂ ವಿಕ್ಷಿಪ್ತನೂ ಓಲ್ಡ್‍ಮ್ಯಾನೂ ಆದ ಯಡೂರಿ ಚಪಲ ಚೆನ್ನಿಗನಾಗಿ ಶೋಭಾ ಕರಂದ್ಲಾಜೆಯ ಈಸ್ಟೈಲಿಗೆ ಕ್ಲೀನ್ ಬೋಲ್ಡ್ ಆಗಿ ಅಮರ ಪ್ರೇಮಿಯಾಗಿ ರೂಪಾಂತರವಾಗಬೇಕೆ. ‘ಯಾರು ಏನು ಮಾಡುವರೋ ನನಗೇನು ಕೇಡು ಮಾಡುವರೋ ಕುಮ್ಮಿಯು ನನ್ನಯ ಜೊತೆಗಿರುವಾಗ, ಗೋಡ್ರ ಬ್ಲೆಸ್ಸಿಂಗ್ಸ್ ನನಗಿರುವಾಗ ಯಾರು ಏನು ಮಾಡುವರೋ’ ಅಂತ ಕೆಟ್ಟರಾಗದಲ್ಲಿ ಹಾಡುತ್ತಾ ಶೋಭಾಳನ್ನೇ ಎಂದೆಂದಿಗೂ ಮಂತ್ರಿ ಮಾಡುವೆ, ಎದುರಾಡಿದವರ ಮೂತಿಗಿಕುವೆ ಅಂತ ಚಂಡಿ ಹಿಡಿದಾಗ ತೊಟ್ಟಿಲಲ್ಲೇ ಚಡ್ಡಿ ತೊಟ್ಟು ಲಟ್ಟಿ ಹಿಡಿದು ಕವಾಯತ್ತು ಮಾಡಿ ಮಾಡಿಯೇ ಮುದಿಯರಾಗಿ ಹೋದ ಪಾರ್ಟಿ ವರ್ಕರ್ಸ್ ಹೌಹಾರಿ ಹೋದ್ವು. ಕೇವಲ ನೈನ್ ಇಯರ್ಸ್ ಗರ್ಲ್‍ನ ಮಿನಿಸ್ಟರ್ ಮಾಡೋದಾದ್ರೆ ನಾವು ಸುಮ್ನಿರಾಕಿಲ್ಲ ಅಂತ ಗೆಟಪ್ ಚೇಂಜ್ ಮಾಡಿ ರಾಜಿನಾಮೆ ಬಿಸಾಕ್ತೀವಿ ಅಂತ ಬ್ರೇಕ್ ಡ್ಯಾನ್ಸಿಗಿಳಿದ್ರು. ಯಡೂರಿ ಮಾತ್ರ ಕ್ಯಾರೇ ಅನ್ಲಿಲ್ಲ. ಷಹಜಾನ್ ಸಾಬಿ ತನ್ನ ಪ್ರೇಯಸಿಗಾಗಿ ತಾಜ ಮಹಲನ್ನೇ ಕಟ್ಟಿಸಿಕೊಟ್ಟ. ಅಟ್‍ಲೀಸ್ಟ್ ನಾನು ನನ್ನ ಖಾಸಾ ಡಾಟರ್ಗೆ ಯಕಸ್ಚಿತ್ ಮಂತ್ರಿ ಪದವಿ ಕೊಡಬಾರದೆ? ಹಠಕ್ಕಿಳಿದ ಯಡೂರಿ. ನನ್ನನ್ನು ಕೆಣಕಿದರೆ ೫೦ ಸ್ಯಾಸಕರ ಸಮೇತ ಜಂಪ್ ಮಾಡ್ತೀನಿ…. ಬಿ ಕೇರ‍್ಫುಲ್ ಅಂತ ವಾರ್ನ್ ಮಾಡಬೇಕೆ! ಈ ವಯಸ್ಸಿನಾಗೆ ಇದೆಂತಹ ಬ್ಯಾಡ್‍ಟೇಸ್ಟು ಎಂದು ಇಡೀ ಪಕ್ಷವೇ ಅಪಸ್ವರ ಹಾಡಿದರೂ ಯಡೂರಿ ಬಗ್ಗಲಿಲ್ಲ. ತನ್ನ ಶೋಭಾ ಬಗ್ಗೆ ಅಸಂಬದ್ಧ ಮಾತುಗಳನ್ನಾಡಿದರೂ ಕುಗ್ಗಲಿಲ್ಲ. ಯಡ್ಡಿ ನನ್ನ ಫಾದರ್, ಗಾಡ್ ಫಾದರ್, ಗ್ರಾಂಡ್ ಫಾದರ್ ಎಂದೆಲ್ಲಾ ಶೋಭಕ್ಕ ಆಣೆ ಪ್ರಮಾಣ ಮಾಡಿದರೂ ಗುಮಾನಿ ತಪ್ಪಲಿಲ್ಲ. ಕೇಂದ್ರದ ಹಳೆ ತಲೆಗಳಿಗೂ ದೂರು ಹೋಯ್ತು. ನಾನು ಬ್ರಹ್ಮಚಾರಿಯಲ್ಲ ಅವಿವಾಹಿತನೆಂದಿದ್ದ ವಾಜಪೇಯಿ ಮುಗುಳ್ನಕ್ಕು ಸುಮ್ಮನಾದರೆ ಪಕ್ಷದ ಅಧ್ಯಕ್ಷ ರಾಜನಾಥ್ ಸಿಂಗ್ ರಾಜ್ಯದ ಉಸ್ತುವಾರಿ ಹೊತ್ತ ಗೆಹ್ಲೋಟ ಸುಮ್ಗಿರಲಾರ್ದೆ ತನಿಖೆಗೆ ಬಂದ್ರು. ಆಗ ಖುಷಿಯಾಗಿ ತಕಥೈ ಎಂದು ಕುಣಿದು ಕುಪ್ಪಳಿಸಿದ್ದು ವಿರೋಧಿ ಗ್ಯಾಂಗ್ ಅಂಬೋದು ಪರಮಸತ್ಯ. ಒಂದು ಹೆಣ್ಣಿನ ಸಲುವಾಗಿ ತನ್ನ ತಲೆಯಮ್ಯಾಗೆ ತಾನೇ ಚಪ್ಪಡಿ ಎಳೆದುಕೊಳ್ಳುತ್ತಿರುವ ಚಪಲಚೆನ್ನಿಗ ಯಡೂರಿ ದರ್ಬಾರಿನ ಅಂತ್ಯ ಸಮೀಪಿಸಿತೆಂದೇ ಭಾವಿಸಿದ ವಿರೋಧಿ ಗ್ಯಾಂಗ್ ‘ಜನಗಣಮನ’ ಹಾಡಲು ತಯಾರಿ ನಡೆಸಿತು. ಓಡೋಡಿ ಬಂದ ಪಕ್ಷದ ಲೀಡರ್ಸ್ ಯಡೊರಿ ಎದುರು ಮಂಡಿಯೂರಿ ಕಣ್ಣೀರ್ಗರೆಯುತ್ತಾ ‘ಹೆಣ್ಣಿನಿಂದ್ಲ ರಾಮಾಯಣವಾತು ಹೆಣ್ಣಿನಿಂದಲೆ ಮಾಭಾರತ್ದಾಗೆ ಫೈಟಿಂಗ್ ಆತು. ಬೇಡ ಕಣ್ ಯಡೂರಿ ಈಗ ವಿಧಾನ ಪರಿಷತ್ ಚುನಾವಣೆ ಟೇಮು. ನೀನು ಸ್ವಲ್ಪ ಅದುಮಿಕೊಳದಿದ್ರೆ ಪಕ್ಷಕ್ಕೆ ಬ್ಯಾಡ್ ಟೇಮ್ ವಕ್ಕರಿಸ್ಕೋತದೆ ಎಂದು ಮುಂತಾಗಿ ಹಿತವಚನ ಹೇಳಿದರು. ಆದರೆ ಹೆಣ್ಣಿನ ಪಿತ್ತ ನೆತ್ತಿಗಡರಿದ್ದ ಯಡೊರಿ ಒಂದಿಟಾರ ಮಣಿಲಿಲ್ರಿ. ನಿಮ್ಮ ಆಕೆನಾ ಪಕ್ಷದ ಪ್ರಧಾನ ಕಾರ್ಯದರ್ಶಿ ಮಾಡ್ತೀವಯ್ಯ ಅಂತ ರಾಜಿಸೂತ್ರ ಹೊಸೆದ್ರು ಗೆಹ್ಲೋಟ. ಈ ಬ್ಯಾಡ್ ನ್ಯೂಸು ಹುಟ್ಟುತ್ತಲೇ ಲಿಂಬಾವಳಿ ಅಶೋಕು ಶೆಟ್ಟರ್ ಸುಮಾರು ಮಂದಿ ಲಬಲಬೋ ಶುರುಮಾಡಿದರು. ಆಗ ಎಲ್ಲರ ನಾಯಕನಾಗಿ ಕಂಗೊಳಿಸಿದವ ಬಸವನಗೌಡ ಯತ್ನಾಳ, ತನ್ನ ಯತ್ನ ಮೀರಿ ಅರಚಾಡಿ ಆಕೆಗೆ ಗೇಟ್ ಪಾಸ್ ಕೊಡದಿದ್ದರೆ ಸಾಮೂಹಿಕ ರಾಜಿನಾಮೆ ಒಗೆದೇವು ಎಂದು ಬಬ್ರುವಾಹನನ ಪೋಜ್ ಕೊಡ್ಲಿಕತ್ತಿದ. ಸಿಡಿಮಿಡಿಗೊಂಡ ಯಡೂರಿ ತಾನೇ ರಾಜಿನಾಮೆ ಕೊಡುವ ಡ್ರಾಮಾ ಮಾಡಿ ಪಕ್ಷವನ್ನೇ ಇಕ್ಕಟ್ಟಿಗೇ ತಳ್ಳಬೇಕೆ! ಯಾಕೋ ಬಿಜೆಪಿ ಟೇಮೇ ಪಸಂದಿಲ್ಲವೆಂದುಕೊಂಡರು ಓಲ್ಡ್ ಲೀಡರ್ಸ್. ಪ್ರಮೋದ ಮಹಾಜನನ ಮರಣದ ನಂತರ ಫೀಲಿಂಗ್ ಹಸಿಯಾಗಿರುವಾಗಲೇ, ಯಡ್ಡಿ ಶೋಭಾರ ಮುಗಿಯದ ಎಪಿಸೋಡ್ ಮೆಗಾ ಧಾರಾವಾಹಿಯಂತೆ ಮುಂದುವರೆದಾಗ ಸಧ್ಯಕ್ಕೆ ಯಡೂರಿಯ ಎಗನೆಸ್ಟ್ ಮಾಡಿಕೊಂಬೋದು ತರವಲ್ಲವೆಂದು ಥಿಂಕ್ ಮಾಡಿ ಎಗರಾಡುತ್ತಿದ್ದ ಯತ್ನಾಳನಿಂದ ಅಪಾಲಜಿ ಬರೆಸಿಕೊಂಡು ಯಡೂರಿಯ ಕೂಲ್ ಮಾಡಿದರಲ್ಲದೆ, ಮುಂದಿನ ದಿನಗಳಲ್ಲಿ ಯಡ್ಡಿ ಐಲಾಟದ ಬಗ್ಗೆ ಭಾರಿ ಕ್ರಮ ತಕ್ಕೊಂಡು ಶೋಭಾಳ್ನ ಕಾಶಿಯಾತ್ರೆಗೆ ಕಳಿಸುವುದಾಗಿ ವಚನ ನೀಡಿ ಯತ್ನಾಳನನ್ನು ಸಮಾಧಾನಿಸಿದ ಶಾಸ್ತ್ರ ಮಾಡಿ ಮುಗಿಸಿದರು. ಒಳಗೇ ಕುದಿದ ಯಡೂರಿ ಮಂಡಲದ ವಿಸ್ತರಣೆಯನ್ನು ಪೋಸ್ಟ್‍ಪೋನ್ ಮಾಡ್ಲಿಕ್ಕೆ ಕೊಮಾರಸಾಮಿ ಕಿವಿಲೂದಿದ್ದೂ ಸುಳ್ಳಲ್ರಿ. ಶೋಭಾಗೆ ದಕ್ಕದ ಮಂತ್ರಿ ಪದವಿ ಯಾರಿಗೂ ದಕ್ಕಕ್ಕೋಬ್ಯಾಡ ಎಂದು ಅವುಡುಗಚ್ಚಿತು ಅಸಹಾಯಕ ಯಡೂರಿ. ಶೋಭಾ ಸಲುವಾಗೆ ಯಡ್ಡಿಯನ್ನು ವಿರೋಧಿಸ ಹತ್ತಿದ್ದ ಯತ್ನಾಳ, ಈಶ್ವರಿ ಶಂಕ್ರಮೂತ್ರಿ ಶೆಟ್ಟರ್ ಯಡ್ಡಿ ಮಂಡಿಸಿದ ವೀಕ್ ಬಜೆಟ್ ಬಗ್ಗೆ ಧಿಂಕ್ ಮಾಡುವ ಗೋಜಿಗೆ ಹೋಗದೆ. ಸಿ‌ಇಟಿ ಗೊಂದಲ, ಮೀಸಲಾತಿ ವಿರುದ್ಧ ನಿಂತ ಹೈಕಳಿಗೆ ಬುದ್ದಿ ಹೇಳ್ದೆ ಯಡ್ಡಿ ಶೋಭಾರ ಮೋರೆಗೆ ಕಪ್ಪು ಬಳಿದು ಆನಂದಿಸುತ್ತಿರುವ ಬಿಜೆಪಿ ತನ್ನ ಪತನದ ಹಾದಿ ಹಿಡಿದಿದೆ ಎಂಬುದು ಕಾಂಗ್ರೆಸ್ನ ಪ್ರೆಸೆಂಟ್ ಸಂಶೋಧನೆ ಆಗೇತ್ರಿ. ಎಲ್ಲರೂ ಪವರ್ ಪಾಲಿಟಿಕ್ಸಿಗಿಳಿದು ಸಿಕ್ಕಿದಷಸ್ಟು ದೋಚಿ ದುಂಡಗಾಗುತ್ತಾ ಹುಚ್ಚು ಮುಂಡೆ ಮದುವ್ಯಾಗೆ ಉಂಡೋನೇ ಜಾಣ ಎಂಬಂತಾಡುತ್ತಿರುವುದನ್ನು ನೋಡಿ ಪಕ್ಷಾಧ್ಯಕ್ಷ ಸದಾನಂದಗೌಡ ಸೈಲೆಂಟಾಗಿ ಸೈಡ್ನಾಗಿದ್ದು ಸ್ಮೈಲಿಂಗ್ ಪೋಜ್ಗೆ ಮಾತ್ರ ಸೀಮಿತವಾಗೇತಿ. ಪರಿಷತ್ ಚುನಾವಣೆನಾಗೆ ಬಿಜೆಪಿ ತನ್ನ ನಾಕೂ ಮಂದಿ ಅಭ್ಯರ್ಥಿಗಳ್ನ ಗೆಲ್ಲಿಸಿಕೊಂಡ್ರೂ ತಮಗೆ ಕ್ಕೆಕೊಟ್ಟ ತಮ್ಮವರೇ ಮೂವರು ಯಾರು ಅಂಬೋ ಒಳಗುದಿಗೆ ಬಿದ್ದಿದೆ. ಕಾಂಗ್ರೆಸ್ನಾಗೂ ಇಬ್ಬರು ಕೈ ಕೊಟ್ಟಾರೆ. ಚೆಡಿ‌ಎಸ್‍ನೋರ್ದು ಸೋತರೂ ಮೀಸೆ ಮಣ್ಣಾಗಲಿಲ್ಲ ಅಂಬೋ ಒಣಜಂಭ. ಅಲ್ಲಿಗೆ ಎಲ್ಲವೂ ನೆಟ್ಟಗಿಲ್ಲ ಅಂಬೋದ್ನ ಅರಿತು ಆಯಾಯ ಪಕ್ಷದೋರು ತಮ್ಮ ಡೊಂಕು ಬಾಲವನ್ನು ಮುಂದಾರ ನೆಟ್ಟಗೆ ಮಾಡಿಕೊಳ್ಳಬೇಕಾಗೇತಿ. ವಿಪ್ ಉಲ್ಲಂಘಿಸಿದ ಸಿದ್ದು ಬಣದ ಮ್ಯಾಗೇ ಗೋಡ ಅಂಡ್ ಹಿಸ್ ಸನ್ಸ್ ಯಾವ ಬಾಣ ಪ್ರಯೋಗ ಮಾಡಿಯಾರೆಂಬುದನ್ನು ಮುಂದಿನ ಡೇಸ್ನಾಗೆ ರಜತ ಪರದೆಯ ಮೇಲೆ ನೋಡಿ ಆನಂದಿಸಿರಿ ಎಂಬಲ್ಲಿಗೆ ಶೊಭಾಯಾತ್ರೆ ಪುರಾಣವು ಪರಿಸಮಾಪ್ತಿಯಾಗುತ್ತಿದೆ. ಓದಿದವರಿಗೆ ಓದಿಸಿ ಕೇಳಿದವರಿಗೆ ಪುಣ್ಯ ಫಲ ಪ್ರಾಪ್ತಿರಸ್ತು……. ಶುಭಂ.
*****
( ದಿ. ೨೨-೦೬-೨೦೦೬)

Latest posts by ವೇಣು ಬಿ ಎಲ್ (see all)