ಯಾವುದು ಮೊದಲೊ,
ಮೊದಲಿಗ ರಾರೋ,
ಭಾವವಿಸಂಗತ,
ಅಲೇಖ್ಯ ನಂದನಕೆ,

ಕೊನೆ ಎಲ್ಲಿಯದೊ,
ಕೊನೆಯಿಸುವವರಾರೋ,
ಭೂರಮೆ ಭಾಗ್ಯದ,
ಬಾಂದಳದಂಗಳಕೆ,

ಅಂಕುರವಾವುದೋ
ಅಂದಣದ್ಹೇರಿಗೆ?
ಅಂಕುಶವೆಲ್ಲಿಯೊ
ಮುಂದಣ ಯಾನೆಗೆ?

ನಿಃ ಶಬ್ದದಿ ದನಿಸಿದ
ಇನಿದನಿಯಾವುದೊ,
ಯುಗ-ಯುಗಾಂತರ
ಜಾಲ-ಜಾಲದಲಿ,

ಶಬ್ದ-ಶಬ್ದಾಬ್ದಿಯ
ಶಾಬ್ದಿಕದಕ್ಕರ,
ಜಗ-ಜಗ ಜಾತರ
ಲೀಲಾ ಮಾಲೆಯಲಿ,

ಪಲ್ಲವ-ಪಲ್ಲವಿ
ಚರಣದ ಚಾರಣ,
ವಲ್ಲರಿ ಗಾನ ಗಾಯನ
ಸರ ಸ್ವರ ರಿಂಗಣ,

ಪ್ರಕೃತಿ ಪುರುಷನೊ
ಪುರುಷ-ಪ್ರಕೃತಿಯೋ,
ಪರುಷದಂಟಿನ ನಂಟಿನ
ಭಾಗ್ಯೋದಯಕೆ,

ಏಕದೊಳನೇಕವೋ,
ಅನೇಕದೊಳೇಕವೊ,
ಏಕೀ ಭವಿಸಲೋಲೈಸುವ,
ಏಕಾಂಕ ಜೀವನದಿ.
*****