ರಾತ್ರಿ ಬೆಳಕು ಮಳೆ ಬಿಸಿಲು ನೆಳಲು
ನಾನೆಂದೂ ಬಿಟ್ಟುಕೊಟ್ಟವಳೇ ಅಲ್ಲ:
ಯಾಕೆಂದರೆ ಅದು ನನ್ನ ಬಿಟ್ಟಿಲ್ಲ
ತನ್ನ ಋತುಮಾನದಲ್ಲಿ ನನ್ನನ್ನಾಳಕ್ಕಿಳಿಸಿ
ಎತ್ತರಕ್ಕೇರಿಸುವ ಪ್ರಕೃತಿಯೇ ನಾನಿರುವಾಗ
ಯಾವುದಕ್ಕೂ ಕೊಸರಿಕೊಂಡಿಲ್ಲ
ಪಕ್ಷಿಯಾಗಿ ಚಿಲಿಪಿಲಿಗುಡುವ
ಹಸಿರು ಹೊಲಗದ್ದೆಗಳ ನಡುವೆ ಹೂವಾಗುವ
ಮುಸ್ಸಂಜೆಯ ಗೋವುಗಳ ತುಳಿತಕ್ಕೆ ಧೂಳಾಗುವ
ಬೆಳಗಿನಲಿ ಮಂಜಾಗುವ
ಮೋಡಾಗಿ ಮಳೆಯಾಗುವ
ಮಳೆಯಾಗಿ ಧುಮ್ಮಿಕ್ಕುವ
ಹಿಮಕರಗಿ ಪ್ರಪಾತದಾಳದಲ್ಲಿ
ಮುನ್ನುಗ್ಗುವ ಸಂಭ್ರಮ –
ಅಂತೆಯೇ ಮಗು ನೀನು ಕೂಡಾ
ನನ್ನ ತೋಟದಲ್ಲಿ
ಮಲ್ಲಿಗೆ, ಸಂಪಿಗೆ, ಗುಲಾಬಿಯಾಗು
ನನ್ನದೆಯಾಂತರಾಳದೊಳಗೆ ಕಾಮನಬಿಲ್ಲಾಗು
ನನ್ನ ಮೋಡಿನ ಮೊದಲು ಮಳೆಯ
ಹನಿಯಾಗು, ಮಣ್ಣಿನ ಕಂಪಾಗು
ನನ್ನಂತರಂಗದ ಗೂಡಿನ ಗಿಳಿಯಾಗಿ
ಹೊರಬಂದು ಯಾವುದನ್ನೂ ಬಿಟ್ಟುಕೊಡದೇ
ಎಲ್ಲದರೊಳಗೊಂದಾಗಿ ಆಕಾಶಕ್ಕೇರು
ಯಾಕೆಂದರೆ ಅದು ನಮ್ಮ ಬಿಟ್ಟಿಲ್ಲ.
*****