ಮನಸಿನಾಗಿನ ಭಾವಗಳಂತೆ
ಮರದ ಮೇಲಿನ ಚಿಗುರೆಲೆಯೆಲ್ಲ
ತೂರಿಬಂದ ಗಾಳಿಯಲ್ಲಿ
ಕುಣಿಯುತಿತ್ತು-ಬಳುಕಿ ಬಳುಕಿ-ಕುಣಿಯುತಿತ್ತು.

ತುಟಿಯ ಮೇಲಿನ ಮುಗುಳಿನ ಹಾಗೆ
ಸುತ್ತ ಹಾಸಿದ ಹಸುರಿನ ಮೇಲೆ
ಹಾರಿಬಂದ ಚಿಟ್ಟೆ ದಂಡು
ಜಿಗಿಯುತಿತ್ತು-ನಲಿದು ನಲಿದು-ಜಿಗಿಯುತಿತ್ತು

ಮೋರೆ ಮೇಲಿನ ಕುರುಳಿನ ಹಾಗೆ
ಗಾಳಿಯಲೆಗಳ ಪದರದ ಮೇಲೆ
ಮರದ ಪೊಟರೆ ಕೊಟ್ಟ ಹಾಡು
ಸಾರುತಿತ್ತು-ಅತ್ತ ಇತ್ತ-ಸಾರುತಿತ್ತು.

ಹೆಣ್ಣ ಕಣ್ಣಿನ ಕರುಣೆಯ ಭರದಿ
ಬಣ್ಣ ಮಾಸಿದ ಭೂಮಿಯ ಮೇಲೆ
ರವಿಯ ಕಿರಣ ಹೊಳೆಯುತಿರಲು
ತೆರೆಯುತಿತ್ತು-ಕವಿಯ ಕಣ್ಣು-ತೆರೆಯುತಿತ್ತು!
*****