ಕಣ್ಣಿನ ದರ್ಜಿಯೊಳಗೆ
ಚಂದ್ರ-ಚುಕ್ಕಿ, ಆಕಾಶ-ಮೋಡ, ಹಗಲು-ರಾತ್ರಿ
ಕಾಮನ ಬಿಲ್ಲುಗಳನೆಲ್ಲ ಹಿಡಿದು
ಸೂರ್ಯ ಕಿರಣಗಳ ಬಣ್ಣ ಬಣ್ಣದೆಳೆಗಳಿಂದ
ದಾವನಿ ಹೊಲೆದು ಮುಗಿಸಿ
ಹುಬ್ಬಿನ ಚೌಕಟ್ಟಿಗೆ ಹೊಂದಿಸಿ
ಮನದೊಳಗೆ ತೂಗು ಹಾಕಿ-ಸಂತೋಷಿಸುತ್ತಿದ್ದಂತೆ
ಗಾಢವಾದ ನಿದ್ರೆ. ಅದನ್ನೇ ಹೊದ್ದು ಸೀಟಿಗೊರಗಿದ್ದು-
ಪಂಚತಂತ್ರದ ಕುದುರೆಯ ಕೆನೆತ
ಏಳು ಸಮುದ್ರದಾಟಿ ಏಳು ಗುಡ್ಡದಾಟಿ
ಅಲ್ಲೊಂದು ಅರಮನೆ, ಅಲ್ಲೊಬ್ಬ ರಾಜಕುಮಾರ
ಅವನ ನಾಗಾಲೋಟದ ಕುದುರೆ,
ರೆಕ್ಕೆಗಳು ಮೂಡಿ ಕುರುರೆ ಏರಿದ್ದೇನು
ಯಕ್ಷಿನಿಯರ ಮುಗುಳ್ನಗೆ ನಾಚಿಸಿದ್ದೇನು
ಮೋಡ ಸಮುದ್ರಗಳನೀಜಿ
ಮೋಡ ಗುಡ್ಡಗಳನೇರಿ
ಬಣ್ಣದ ದಾವನಿ ಹಾರಾಡಿಸುತ
ಮೇರಿ ಲಾಲ್ ದುಪಟ್ಟಾ ಮಲ್‌ಮಲ್ ಹಾಡುತ್ತಿದ್ದಂತೆ
ರಾಜಕುಮಾರನ ಮನೆ ಅಂಗಳಕ್ಕಿಳಿದದ್ದು-
ಸೂರ್ಯ ನಕ್ಕ, ಪಡುವಣ ಮುಖ
ಕೆಂಪೇರಿತು.
*****