ಆಗಸದೊಳಗೆಲ್ಲಿಂದಲೋ ನೆಲದಾಳದಿಂದಲೋ
ಕಿರಣವೊಂದು ತೇಲಿ ಬಂದು ಭ್ರೂಣವಾಗುತ್ತದೆ
ಕಣ್ಣು ತಲೆ ಕೈಕಾಲು ಮೂಡುವ ಮುನ್ನವೇ
ಗರ್ಭಪಾತ ಮತ್ತೊಂದು ಕವಿತೆಯ ಸಾವು
ಒತ್ತಡಗಳ ನಡುವೆ ಹೇಗೋ ಉಳಿದು
ಕೆಲವು ಒಂಭತ್ತು ತುಂಬುವ ಮೊದಲೇ
ಹೊರಬರುತ್ತವೆ ಅಪೂರ್ಣ
ಅಂಗಾಂಗಗಳ ವಿರೂಪ ಕುರೂಪಗಳೊಡನೆ
ಕುರುಡೋ ಕುಂಟೋ ಹೆಳವೋ ಕಿವುಡೋ
ಅರ್ಧಂಬರ್ಧ ಹಾಡುಗಳು ಗುಣುಗುಟ್ಟುತ್ತವೆ
ಮೇಲಿಂದಿಳಿಯದೆ ಮಳೆ ಬರಡಾಗುತ್ತಿದೆ ಇಳೆ
ಬಿರುಕು ಬಿಟ್ಟು ಬೆಂಡಾಗಿ ರಣ ರಣ ಬಿಸಿಲು
ಮೊಳಕೆಗಳಿಗೆ ಉಳಿಗಾಲವಿಲ್ಲ
ಮೊಳೆಯಲೇ ಅವಕಾಶವಿಲ್ಲ
ಇನ್ನು ಹಸಿರ ತಂಪೆಲ್ಲಿ ಹೂಗಳ ಕಂಪೆಲ್ಲಿ
ಇಲ್ಲಿ ಕವಿತೆಗಳು ಮೊಳೆಯಲಾರವು
ಗರ್ಭದೊಳಗಿಂದ ಹೊರಬರಲಾರವು
*****