ಮಗಳು
ಎಳೆಯ ಮುಗುಳು
ಎದೆಯ ಮೇಲೆ ಮಲಗಿರುವಳು
ಸದ್ದು ಮಾಡಿದ ಎದೆಯ
ಪ್ರಶ್ನಿಸುತ್ತಾಳೆ ಮೆಲ್ಲಗೆ

ಯಾರು ನೀನು?

ಎದೆಯ ಬಡಿತ ಹಮ್ಮಿನಿಂದ
ಕ್ರೈಸ್ತನೆಂದಿತು
ಸಣ್ಣಗೆ ಕಂಪಿಸಿದಳು

ಮುಸ್ಲಿಮನೆಂದಿತು ಗರ್ವದಲಿ
ಒಳಗೇ ದುಃಖಿಸಿದಳು

ಹಿಂದುವೆಂದಿತು ಹೆಮ್ಮೆಯಲಿ
ಜೋರಾಗಿ ಅತ್ತುಬಿಟ್ಟಳು

ಕಣ್ಣೀರಿನಲಿ ತೊಯ್ದ ಹೃದಯ
ಮನುಷ್ಯನೆಂದಿತು,
ಕೊನೆಗೆ ಅಳುಕುತಲಿ

ಮೂಡಿತು ಮುಗ್ಧ ಮುಖದಲಿ
ಬುದ್ಧನ ಬೆಳದಿಂಗಳು
ಅಪ್ಪಿ ಹೂ ಮುತ್ತನಿತ್ತಳು
ಬೆಳಕಿನ ಬೀಜ ಬಿತ್ತಿದಳು.
*****