ಕಪ್ಪು ಸುಂದರಿಯರಿವರು
ಅದೆಷ್ಟು ಒನಪು ಒಯ್ಯಾರ
ಬಿಗಿಮಿಡಿ ಚೂಪುಹೀಲ್ಡು
ದಪ್ಪ ತುಟಿಯ ದೊಣ್ಣೆ ಮೂಗಿನ
ಹುಡುಗಿಯರದದೇನು ತರಾತುರಿ
ತುಟಿಗಂಟಿದ ಬೆವರೊ
ಬೆವರಿಗಂಟಿದ ಲಿಪ್ ಸ್ಟಿಕ್ಕೊ
ಗುಲಾಬಿಯೆಲ್ಲ ಕಪ್ಪು. ಕ್ಷಣಕ್ಷಣಕೂ
ತೀಡಿತಿದ್ದಿಕೊಳ್ಳುವ ಕಪ್ಪು ಕಣ್ಣಿನ ಹುಬ್ಬಿನ ನಗು.
ಬಿಳಿಪೈಲೆಟ್ ಚಂದ್ರ ಸುಂದ್ರ ಇಂದ್ರ
ಇಡಿಯಾಗಿ ಮುಕ್ಕಿ ತಿನ್ನುವ ಸಖಿಯರ ದಾಹ-
ತುಂಬಿದೆದೆ ಬಿರಿದ ತುಟಿಗೆ
ಸಳ್ಳನೆ ಮಿಂಚು ಸೆಳೆತ
ಚಿತ್ತಚಂಚಲ; ಆಟೋಪೈಲೆಟ್ ತಂತ್ರ
ತನ್ನಷ್ಟಕ್ಕೆ ತಾನೇ ಹೊರಟ ಲೋಹಹಕ್ಕಿ
ಪಯಣಿಗರ ಜೀವ ಕೈಗೆ ನೆತ್ತಿಗೆ
ಕಂಫರ್‍ಟ್ ರೂಮಿನಲಿ ಸುಂದರಿಯರ
ಕಿಲಕಿಲ ನಗು ಪಯಣಿಗರ ಕೆನ್ನೆಗೆ ಗುಳಿ
ಬಿಪ್ ಬಿಪ್ ಬಿಪ್ ಕಾಲ್
ಸೇಫ್ಟಿ ಬೆಲ್ಟ್ ಪ್ಲೀಜ್…..
*****