ಪ್ರತಿ ಹೂವೂ ಸಾರುತ್ತಿದೆ ಭಗವಂತನ ಚೆಲುವ
ಪ್ರತಿ ಬೆಳಗೂ ಹಾಡುತ್ತಿದೆ ಭಗವಂತನ ಒಲವ
ಹರಿವ ನೀರು, ಸುಳಿವ ಗಾಳಿ
ತಿರುಗುವ ಋತು ಚಕ್ರ
ಮಾತಿಲ್ಲದೆ ಸೂಚಿಸುತಿವೆ ಭಗವಂತನ ನಿಲುವ.

ಕೋಟಿ ತಾರೆ ಬಾನಿನಲ್ಲಿ, ಭೂಮಿಯೊಂದು ಚಿಕ್ಕಿ
ನೀಲಿಬಾನಿನಲ್ಲಿ ಸುಳಿದ ಹಾಗೆ ಪುಟ್ಟ ಹಕ್ಕಿ.
ಇಂಥ ಪುಟ್ಟ ಚಿಕ್ಕೆಯಲ್ಲು
ಏನಿದೀ ವ್ಯವಸ್ಥೆ,
ಕಾಣದಂತೆ ತೆರೆದಿದೆ ಪ್ರತಿ ಜೀವಕು ರಸ್ತೆ!

ಒಂದೇ ಸಮ ತಿರುಗುತ್ತಿದೆ ಕುಂಬಾರನ ಚಕ್ರ
ಏಳುತ್ತಿದೆ ಇಡೀ ಸೃಷ್ಟಿ ಬಗೆ ಬಗೆ ರುಚಿ ಗಾತ್ರ
ಹಿರಿದು ಕಿರಿದು ಹಗುರ ಭಾರ
ಬೇರೆ ಬೇರೆ ಕಾರ್ಯ
ಬೆಳಕನೀವ ಎಲ್ಲಕ್ಕೂ ಒಂದೇ ಸಮ ಸೂರ್ಯ!
*****

ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್
Latest posts by ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್ (see all)