ಬೇಡ ಅಮ್ಮ ಬೇಡ
ಕಾಣದೂರಿನ ಪಯಣಕೆ
ತಪ್ಪೊ ನೆಪ್ಪೊ ಹೊಟ್ಟೆಗಿರಲಿ
ಮರಳು ನಿನ್ನೀ ಊರಿಗೆ

ಮೂಲೆಯಲ್ಲಿ ಒಂಟಿ ಹಣತೆ
ಕಣ್ಣು ಸಹಿಸದಾಗಿದೆ
ಸುತ್ತ ಕತ್ತಲು ಗಾಢ ಮೌನ
ಬದುಕು ಮಸಣ ಆಗಿದೆ

ಊರು ಸೇರಿದೆ ಬಂಧು ಬಳಗ
ಮರಳಿ ಬರುವ ಖಾತ್ರಿಯಿಲ್ಲ
ನಿನ್ನ ಕರುಣೆಯೆ ದೂರವಾಗಿದೆ
ನಾನು ಒಂಟಿ, ಖಾತ್ರಿಯಾಗಿದೆ

ಇದ್ದ ಆಸೆ ಕಮರಿ ಹೋಗಿದೆ
ಜೊತೆಗೆ ಸ್ಥೈರ್‍ಯ ಮೂಡಿದೆ
ಕಣ್ಣ ನೀರು ಹೇಗೂ ಖಾಲಿ
ಬದುಕು ದಿಟ್ಟವಾಗಿದೆ

ಅಮ್ಮ ನೀನು ಸವೆದ ಹಾದಿ
ನನ್ನ ಹೆಜ್ಜೆಗುಳಿದಿದೆ
ನಿನ್ನ ದೂರ ನನಗಸಾಧ್ಯ
ಹೆಣ್ಣಿಗೆ ಜಯ ಸಂದಿದೆ
*****