ಯಾರ ಬಳಸಿ ನಿಂತಿರುವನೊ
ನನ್ನ ಹೆಸರಿನಲ್ಲಿ
ಅಳುತಿರುವನು ಸಿಲುಕಿ ಅವನು
ಈ ಕೂಪದಲ್ಲಿ

ಹಗಲಿರುಳೂ ಮನಸುರಿದು
ಗೋಡೆಯೊಂದ ಸುತ್ತಲೂ
ಕಟ್ಟುತಿರುವ ಚಕ್ರಬಂಧ
ಮುಟ್ಟುತ್ತಿದೆ ಮುಗಿಲು

ಗೋಡೆ ನಡುವೆ ತರೆಯುತಿರುವ
ಕಾಳತಿಮಿರ ಕೂಪ
ಮೆಲು ಮೆಲ್ಲನೆ ನುಂಗುತ್ತಿದೆ
ನನ್ನ ನೈಜರೂಪ

ಈ ಎಚ್ಚರ ಇಷ್ಟು ಶ್ರಮಕೆ
ಪಡದುದೇನು ಕಡೆಗೆ?
ಸರಿಯುತಿದೆ ನನ್ನ ನೈಜ
ಬಿಂಬ ಕಣ್ಣಮರೆಗೆ!

* ರವೀಂದ್ರನಾಥ ಟಾಗೋರರ ಗೀತಾಂಜಲಿಯ ಭಾಗವೊಂದರ ಅನುವಾದ
*****

ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್
Latest posts by ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್ (see all)