ನಿಲ್ಲೆಲವೊ ಪಯಣಿಗನೆ ನಿಲ್ಲು! ನಿಲ್ಲು!
ಮುಂದೆಲ್ಲಿ ಸಾಗುತಿಹೆ ನಮ್ಮ ಮರೆತು
ಎಲ್ಲರಂತೆಯೆ ಕಿವುಡೆ ನಿನ್ನ ಮನಸು
-ಕೂಗಿದೆ ವೀರಗಲ್ಲು!   ೧

ಒಟ್ಟಿಹರು ಒಂದೆಡೆಗೆ ನಮ್ಮನೆಲ್ಲ
ಉಸಿರಾಡಲೆಡೆಯಿಲ್ಲವೆಮ್ಮ ಬಾಳು!
ಆರು ನಾವೆಂಬುದನೆ ಅರಿಯದಿಂತು
ಬಸವಳಿದು ಬಿದ್ದಿಹೆವು!   ೨

ಜೀವ ತೆತ್ತವರೆನಿತೊ ಜನಗಳಾವು
ಜನರ ಬಾಳುವೆಗಾಗಿ ತೆತ್ತು ಬಾಳು
ಮೌನದಲಿ ಉರುಳಿದೆವು-ಜನರು ಬಂದು
ತುಳಿಯುವರು ಸಂತಸದಿ!   ೩

ಅಂದೆಮ್ಮ ಬಿಸಿ ರಕುತ ಬಸಿದು ಬಸಿದು
ಬೇಗೆಯಲಿ ಬೆಂದವ ಬಾಳನುಳಿಸಿ
ಅಳೆದೆವಾವದಕಾಗಿ ಇದುವೆ ಜಗವು
ನಮಗೆ ತೋರಿದ ಕರುಣೆ!   ೪

ನಡೆ ಮುಂದೆ, ನಡೆ ಮುಂದೆ, ಪಯಣ ಸಾಗು
ಕಣ್ಣೀರಿನಲಿ ನೆಲವ ತೊಯಿಸಬೇಡ
ಇಂದೆ ಮೊದಲಿಗೆ ಜಗದಿ ಎದೆಯ ನೀರು
ನಮ್ಮ ತಲೆ ತೊಳೆದಿಹುದು!   ೫
*****