ದರ್ಪ ಸೂಚನೆ ಸುಖದ ವಂಚನೆ
’ಮನು’ ಮನದ ಯಾತನೆ
ಜಾತಿ ಧರ್ಮ ಆಸ್ತಿ ಗೌರವ
ಕಾಣಲಾರವೆ ಹೆಸರೊಳಗೆ?

ಊರ ಗೌಡನ ಹೆಸರು
ಶೂದ್ರ ಸಿದ್ದನದೇನು?
ಗೌಡ ಕರೆದಂತೆ ಕರಿಸಿದ್ದನನ್ನು
ಕೂಗಬಹುದೇ ಹೊಲೆಯ ಗೌಡನನ್ನು?

ಇರಬಹುದು ಒಮ್ಮೊಮ್ಮೆ
ಹೆಸರೊಂದೆ ಈರ್ವರಿಗು
ಒಂದೇ ಮನೆಯಲಿ ಸಣ್ಣ ದೊಡ್ಡ
ಜಾತಿ ಮತಗಳ ನಡುವೆ ದೊಡ್ಡ ಗುಡ್ಡ

ಲಂಗೋಟಿ ಇರದವಗೂ
ಗೌಡನೆಂದೆ, ಸಾಮಿಯೆಂದೆ
ಧಣಿಯೆಂದೆ, ಸಾವ್ಕಾರನೆಂದೆ
ಹಾಗಲ್ಲದಿದ್ದರೆ ಅದು ಜಾತಿ ನಿಂದೆ!

ಒಲವಿತ್ತು ಬಲವಿತ್ತು
ಛಲವಿತ್ತು ಗೆಲುವಿತ್ತು
ಊರಾಚೆಯ ಕರಿಯನಿಂದೆ
ಕರೆದೆ ನೀ ನಿನ್ನದೇ ದೇವರ
’ಲೇ ಬಸ್ಯಾ, ಯಂಕ್ಯಾ, ರಾಗ್ಯಾ, ರಾಮ್ಯಾ…’
ವಕ್ರೋಕ್ರ ಪೆಕರ ಕಾಗೆ ಕರೆವಂತೆ

ಹೆಸರಿನಿಂದಲೆ ಧರ್ಮ
ಹೆಸರಿನಿಂದಲೆ ಕರ್ಮ
ಗೊತ್ತಿಲ್ಲ ಯಾರಿಗೆ ಇದರ ಮರ್ಮ?

ಅಕ್ಬರನೆಂದರೆ ಮುಸ್ಲಿಮನೆಂದೆ
ಆಚಾರಿಯೆಂದರೆ ಹಾರವನೆಂದೆ
ಡೇವಿಡ್ಡು ಆಂಥೋನಿ ಕ್ರಿಸ್ತನೆಂದೆ

ಎಂದಾದರು ಎಲ್ಲಾದರು
ಇಟ್ಟು ಕರೆದೆವೆ ಬೇರೆ ಹೆಸರು
ನಮ್ಮ ಮಕ್ಕಳಿಗೂ ಅದಲು ಬದಲು?

ಮರದ ತುಂಡು
ಕಲ್ಲು ಗುಂಡು
ಊರ ಹೊರಗಿನ ದೇವರು

ಮಾರಮ್ಮ ದುರುಗಮ್ಮ
ಸುಂಕ್ಲಮ್ಮ ಮರಿಗೆಮ್ಮ
ಎಷ್ಟು ಚಂದದ ಹೆಸರು
ಕುರಿ ಕೋಳಿ ಕ್ವಾಣ
ಉಳಿಸಿದ್ದು ಇವರ ನ್ಯಾಣ!

ಚಂದ ಚಂದದ ಮೂರ್ತಿ
ಜಗವ ತುಂಬಿದೆ ಕೀರ್ತಿ
ದೊಡ್ಡ ಮಂದಿಯ ದೇವರು
ಕೃಷ್ಣನಂತೆ ರಾಮನಂತೆ
ಎಲ್ಲಾ ಅವನ ಲೀಲೆಯಂತೆ
ಗೋವಿಂದಾ ಮಾಯೆ ನಿನ್ನ ಹೆಸರು!

ಜಾತಿ ಜಾತಿಗೂ ಒಬ್ಬ
ಧರ್ಮ ಧರ್ಮಕೂ ಮಬ್ಬ
ಸೃಷ್ಟಿಸಿದೆ ಬಲುಚತುರ ಮಾಯಕಾರ

ನಾಮ ನಾಮಗಳ ಹೊಸೆದು
ಒಂದೇ ದಾರದಿ ಬೆಸೆದು
ಜೀವ ಜೀವಕೆ ಜೀವಕೊಡುವುದ
ಬೇಕೆಂತಲೇ ಮರೆತ ಗೆಣೆಕಾರ!

ನಿನ್ನೆ ಮೊನ್ನೆಗಳಿಂದ ಕತ್ತಲೆ ಸೀಳಿ
ನಾಲ್ಕಕ್ಷರದ ಬೆಳಕು ಮೂಡಿ
ಉಟ್ಟ ವಸ್ತ್ರದ ಜೊತೆಗೇ
ಇಟ್ಟ ಹೆಸರುಗಳು ಬದಲಾಗಿ
ಸಂದಿದೆ ನಗರಜೀವನದ ಷೋಕಿ

ಹೆಸರಿನಲ್ಲೇನಿದೆ ಬರೀ ಹೆಸರು
ಲೋಕವಾದರೆ ತಾ ಒಂದೇ ಉಸಿರು

*****