ಯಾರು ನಮ್ಮ ಕರೆದರು, ಕರೆದು ಎಲ್ಲಿ ಸರಿದರು?
ನಾವು ಬರುವ ಮೊದಲೆ ನೂರು ಸೋಜಿಗಗಳ ಮೆರೆದರು?

ಯಾರು ಬೆಳಕ ಸುರಿದರು ನದಿಗಳನ್ನು ತೆರೆದರು?
ಆಕಾಶದ ಹಾಳೆಯಲ್ಲಿ ತಾರೆಗಳನು ಬರೆದರು?

ಗಾಳಿಯಾಗಿ ಹರಿದರು ಬೆಂಕಿಯಾಗಿ ಉರಿದರು?
ಕಡಲು ನೆಲವ ನುಂಗದಂತೆ ಯಾರು ಅದನು ತಡೆವರು?

ಮೂಳೆ ಚರ್ಮ ಹೊಲಿದು ನಮ್ಮ ಗೂಂಬೆ ಮಾಡಿ ಇಟ್ಟರು?
ಗೊಂಬೆಯೊಳಗೆ ಗಾಳಿ ಹರಿಸಿ ಶಾಖವನೂ ಕೊಟ್ಟರು?

ಕಣ್ಣ ಬಾಯಿ ಮೈಯ ತುಂಬ ನೂರು ಮೋಹ ಬೆಳೆದರು?
ಮೋಹದಾಳದಲ್ಲೆ ಸೃಷ್ಟಿ ಚಲನೆಯ ಕೀ ಹುಗಿದರು?

ಯಾರು ನಮ್ಮ ಕರೆದರು, ಕರೆದು ಮರೆಗೆ ಸರಿದರು?
ನಮ್ಮ ದಾರಿಯಲ್ಲಿ ಹೂವು ಚೆಲ್ಲಿ ಎಲ್ಲಿ ಹೋದರು?
*****

Latest posts by ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್ (see all)