ಮರಣಕ್ಕೆ ಒಳಗಾಗೊ ನರಕುರಿಗಳೆ
ಅರುವಿರಲಿ ಸಾರವೆ ಕೇಳಿರಿ ||ಪ||

ಮರೆಯದೆ ಶ್ರೀಗುರುಮಂತ್ರ ಬರದೋದಿ ಜಪಿಸುತ
ಸ್ಮರಣೆದಪ್ಪಲಾಗದಲೆ ತಕ್ಕೊಳ್ಳಿರಿ ||೧||

ದೇಹದೊಳಗೆ ಇದ್ದು ಮಾಯೆ ನೋವಿಗೆ ಬಿದ್ದು
ಸಾವಿಗಂಜುತ ಬಾಯಿಬಿಡಬೇಡಿರಿ ಆಯತೀರದ ಮುನ್ನ
ಜೀವಪರಮರೊಂದು ಠಾವು ಕೂಡಿಸಿ ದೇವರೊಡಗೂಡಿ ||೨||

ಹಸು ತೃಷೆ ವಿಷಯ ವ್ಯಸನ ಮಾಡುವ ಮನದ
ಕಸುರು ಕಳೆದು ಕಾಮದೂಡಿರಿ ||೩||

ವಸುಧಯೊಳು ಶಿಶುನಾಳಧೀಶನೇ ಗತಿಯೊಂದು
ತಾಮಸವಳಿದು ಹಸನಾಗಿ ಹಾಡಿರಿ ||೪||

*****