ಏನಾಗಿದೆ ನನಗೆ ಏನಾಗಿದೆ ನನಗೆ
ಎಲ್ಲ ತೊರೆದು ಏಕೆ ಹೀಗೆ ಹಂಬಲಿಸುವೆ ಹರಿಗೆ?

ಏನೇ ಇದು ಮಾತೇ ಇಲ್ಲ ಎನುವರು ಜೊತೆ ಸಖಿಯರು
ಏನೇ ಮನೆ ಕಳುವಾಯಿತೆ ಎಂದು ಚುಚ್ಚಿ ನಗುವರು
ಮನಗೆಲಸದಿ ಮನವಿಲ್ಲ, ಅಮ್ಮ ದಿನಾ ಬಯ್ವರು
ಏಕೆ ಹರಿಗೆ ಕಾದು ಕಾದು ನಗೆಗೆ ಗುರಿಯಾದೆನು?

ಕೋಗಿಲೆ ದನಿ ಕೇಳಿತೋ ಕೊಳಲೇ ಎನಿಸುವುದು
ಹಸುಕೊರಳಿನ ಗಂಟೆ ಹರಿಯ ಹೆಜ್ಜೆ ಎನಿಸುವುದು
ಆಕಾಶದಿ ಅಲೆವ ಮೋಡ ಅವನ ರೂಪ ತೆರೆವುದು
ನನ್ನ ಹೃದಯ ಏಕೆ ಹೀಗೆ ಹರಿಗೆ ಸದಾ ತುಡಿವುದು.

ಅವನಪ್ಪುಗೆ ತಂದ ಬಿಸಿ ಇನ್ನೂ ಮೈಯಲ್ಲಿದೆ
ಅವನ ಒದ್ದೆತುಟಿಯ ಸ್ಪರ್ಶ ಇನ್ನೂ ಹಸಿಯಾಗಿದೆ
ಅವನ ಎದೆಗೆ ಒರಗಿದ್ದ ಸಂಭ್ರಮ ಹಿಂಡುತ್ತಿದೆ
ಈ ನೆನಪೇ ಮತ್ತೆ ಮತ್ತೆ ರೋಮಾಂಚನ ತರುತಿದೆ
ಏನೇ ಏನೇ ಏನೇ
ಏನಾಗಿದೆ ನನಗೆ ಏನಾಗಿದೆ ನನಗೆ?
*****