ಬಫೂನನ ತಲೆಯೊಳಗೆ

ಬೇಂಡು ವಾದ್ಯಗಳು ನಿಂತು
ದೀಪಗಳು ಆರಿ
ಊರವರು ಅವರವರ
ಮನೆಗಳಿಗೆ ತೆರಳಿ
ಆನೆ ಕುದುರೆಗಳನ್ನು ಲಾಯದಲಿ ಕಟ್ಟಿ
ಇಡಿಯ ಜಗತ್ತೇ ಮಲಗಿರುವ ಸಮಯ
ಅದು ಬಫೂನನ ಸಮಯ

ಕೆಂಪು ಮಣ್ಣಿನ ಗೆರೆಗಳು
ಬಿಳಿಯ ಸುಣ್ಣದ ಬೊಟ್ಟುಗಳು
ಇನ್ನೂ ಮಾಸಿಲ್ಲ
ಮೂಗಿನ ಮೇಲೆ ಮೊಂಡಗೆ
ಹತ್ತಿಯ ಉಂಡೆ
ತಳತಳಿಸುವ ಮಂಡೆ
ಮೇಲಕೆತ್ತಿದ ಹುಬ್ಬು
ಅರ್ಥವಾಗದ ಕಣ್ಣ ಮಬ್ಬು

ದಿಗ್ಗನೇಳುವನು
ಏನ ನೋಡುವನು
ರಥವೆಲ್ಲಿ ರಾಜ್ಯವೆಲ್ಲಿ ಸಿಂಹಾಸನವೆಲ್ಲಿ
ಎಲ್ಲಿ ವಂದಿ ಮಾಗಧರು
ದೀಪವನು ಹೊತ್ತವರು
ಕಾಲುಗಳನೊತ್ತುವರು
ಎಲ್ಲಿ ಮದ್ಯವು ಎಲ್ಲಿ ಪದ್ಯವು
ಎಲ್ಲಿ ಮಾಯಾಂಗನೆ

ಕಂಡಿರುವನವಳ ಯೋನಿಯನು
ಪರದೆಯ ಮರೆಯಲ್ಲಿ
ಕದ್ದು ನೋಡಿರುವನು
ಒಂಟಿ ಕಣ್ಣಿನಲಿ
ಬಿದ್ದು ಹಂಬಲಿಸಿರುವನು
ಹೊದ್ದು ಮಲಗಿರುವನು
ಎದ್ದು ನಡೆದಿರುವನು
ಬಫೂನ ಅವನು
ಮಂಗೋಲಿಯದಿಂದ ಬಂದವನೆ
ಎಲ್ಲರಿಗಿಂತ ಮೊದಲು ?

ಎಲ್ಲರಿಗಿಂತ ಮೊದಲು
ಚೆಂಗಿಸ್ ಖಾನನಿದ್ದನು
ಅವನ ನಂತರ
ಒಗ್ದಾಯಿ ಖಾನನಿದ್ದನು
ಅವನ ನಂತರ
ಕುಬ್ಲಾಯಿ ಖಾನನಿದ್ದನು
ಅವನು ಚೀನಾ ದೇಶದ ಅರಸನು
ಅವನ ನಂತರದವನು
ತೈಮೂರನೆಂಬವನು
ಎಲ್ಲಿ ನೆನಸಿಕೊಳ್ಳುವನು ಬಫೂನನು

ಆನೆಯ ಸೊಂಡಿಲಲ್ಲಿ
ಜೋಕಾಲಿ ತೂಗಿದವನು
ಸಿಂಹದ ಮೀಸೆಯನ್ನು ತಿರುವಿದವನು
ಮೃತ್ಯುಕುಂಡದಲ್ಲಿ ತಿರುಗಿದವನು
ರಾಣಿಯ ಕುಂಡೆಯನ್ನು ಬಡಿದವನು
ಸಾಯಲು ಹೆದರನು

ಮತ್ತೇಕೆ ಹೀಗೆ ಕುಳಿತಿರುವನು
ತಾಳೆಯ ಮರದ ಕೆಳಗೆ
ಏನವನ ತಲೆಯೊಳಗೆ
ಯಾವ ದೂರದ ಕಡಲು
ಗುರಿ ತಪ್ಪಿದ ಹಡಗು
ದಾರಿತೋರಿದ ನಕ್ಷತ್ರಗಳೆಲ್ಲಿ
ಮರೆಯಾಗಿವೆ ಮೋಡಗಳ ಹಿಂದೆ

ನಿಜ ನಿಜ
ದೆಹಲಿಯೊಳಗಿದ್ದ
ಮೆಸಫೊಟೇಮಿಯದೊಳಗಿದ್ದ
ಅಲೆಕ್ಸಾಂಡ್ರಿಯಾದಲಿದ್ದ
ಕಾರಕೋರಮಿನಲ್ಲು ಇದ್ದ
ಎಲ್ಲ ದೇಶದಲು ಎಲ್ಲ ಕಾಲದಲು
ಇವನಿದ್ದನೆ ?
ಸಂತೆಯಲಿ, ಅರಮನೆಯಲಿ
ನಾಲ್ಕು ಬೀದಿಗಳು ಸೇರುವಲ್ಲಿ
ಎಲ್ಲರನು ನಗಿಸುತ್ತ
ತಿರುಗುತ್ತ ತನ್ನ ಸುತ್ತ
ದೇಶ ಕಾಲಗಳ ಜಿಗಿದನೇ
ಏನವನ ಹೆಸರು ?

ನಾಮಕರಣದ ದಿನವೆ
ಬಣ್ಣ ಬಣ್ಣದ ಅಂಗಿ
ಮುಂದಿನ ಮಹಾಲಯಕ್ಕೆ
ಬೊಳಿಸಿದರು ತಲೆಯ
ಆಗಲೆ ಬಂದಿತ್ತು ನೋಡು
ಮೋರೆಯ ಮೋಲೊಂದು
ಅಪೂರ್ವ ತೇಜಸ್ಸು
ಆದರೂ ಕಂಡವರು ಯಾರು
ಅವನ ಮನಸ್ಸು
ತಲೆಯಿತ್ತು ಒಳ್ಳೆ
ಬೂದುಗುಂಬಳದಂತೆ
ಅದರ ಏರಿಳಿತಗಳು
ಹಳ್ಳ ತಿಟ್ಟುಗಳಂತೆ

ಕೂಡುವಲ್ಲಿ ನಾಲ್ಕು ದಾರಿ
ಸೇರುವುದು ಯಾವುದು ಯಾವ ನಗರಿ
ಗೊತ್ತಿರಲಿಲ್ಲಿ ನೋಡು
ನಡೆದುದೊಂದೇ ಗೊತ್ತು
ಯಾರು ಎದುರಾದರು
ಯಾರು ಮಾತಾಡಿಸಿದರು
ಯಾವ ಗಡಿ ಯಾವ ನುಡಿ
ಕಾಲು ಕುಸಿಯುತಲಿತ್ತು
ಧೂಳು ಮುಸುಕುತಲಿತ್ತು
ಒಂದೊಂದು ಪಾದವೂ
ಭೂಮಧ್ಯರೇಖೆ ದಾಟುತಲಿತ್ತು
ಕಣ್ಣು ಹುಡುಕುತಲಿತ್ತು
ಬೆಳಕಿನ ಮಾಲೆಗಳನ್ನು
ಮುಸುಕಿದೀ ಮಬ್ಬಿನಲಿ ತೇಲಿ ತೇಲಿ

ಅದೊ ಎದ್ದೆಬಿಟ್ಟಿತಲ್ಲ ಮತ್ತೆ
ಮಾಯಾನಗರಿ !
ಎಂಥ ದೀಪಗಳು ಎಂಥ ಬೆಳಕುಗಳು
ಇದಕೆ ಎಣೆ ಬಗ್ದಾದೆ ಸರಿ
ಖರ್ಜೂರದ ಹಣ್ಣುಗಳು
ಅಂಥ ಕಣ್ಣುಗಳು
ಝರಿ ಜಲಪಾತ ಕಾಮನಬಿಲ್ಲು
ಇದುತನಕ ಯಾರೂ ಕೇಳಿರದ ಸೊಲ್ಲು
ತಮ್ಮಟೆಯೊ ಶಂಖವೊ ಜಾಗಟೆಯೊ
ಅಹಹ ಸಂಗೀತಪೂರ್ವ ಯುಗವೆ
ಅಹಹ ಶೋಕವೆ
ಅಹಹ ಬಫೂನ ಲೋಕವೆ

ಏಳಯ್ಯ ಬಫೂನನೆ
ಅದು ಮೊದಲ ದೇಖಾವೆಯ ಬೇಂಡು
ಓಡು ಎಲ್ಲ ರೆಡಿಯಾಗಿದೆಯೊ ನೋಡು
ಎಲ್ಲಿ ಆನೆಗಳು ಎಲ್ಲಿ ಕುದುರೆಗಳು
ಎಲ್ಲಿ ಸಿಂಹದ ಮರಿಗಳು
ಎಲ್ಲಿ ಕನಸಿನ ರಾಣಿ ಇನ್ನೂ ಎದ್ದಿಲ್ಲ ಕಂಡೆಯ
ಹೋಗಿ ಕರೆತರು ಅವಳ
ಕಾದಿರುವ ಮಂದಿ ಬಹಳ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅಪಪ್ರಚಾರ
Next post ಅಂತರಿಕ್ಷ ಪ್ರವಾಸಿ ಟಿಟೋ

ಸಣ್ಣ ಕತೆ

  • ಅಮ್ಮ

    ‘ಅಮ್ಮನ್ಗೆ ಯಿಡೀ ರಾತ್ರೆಲ್ಲ ವಾಂತಿ ಭೇದಿ ವುಬ್ಸ ಆಯಾಸ... ಕುತ್ರೂಸಾ... ಬಾಳಾ ಯೆಚ್ಕುಡ್ಮೆಯಾಗಿ ರಾಮ್ಪಾರ್ದ ಡಾಕಿಟ್ರಾತ್ರ ತೋರ್ಸಿದ್ರು ಗುಣಾಗಿಲ್ಲ! ನೀ ಆದಷ್ಟು ಗಡಾನೇ ವೂರ್ಗೆ ಬಾಣ್ಣ...’ ಸೇಕ್ರಿ,… Read more…

  • ಸಂಶೋಧನೆ

    ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…

  • ಹನುಮಂತನ ಕಥೆ

    ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…

  • ಬೆಟ್ಟಿ

    ಮೃದುವಾಗಿ ಯಾರೋ ತೋಳು ತಟ್ಟಿದಂತಾಯಿತು. ಪುಸ್ತಕದಿಂದ ತಟ್ಟನೆ ತಲೆ ಎತ್ತಿದಳು ಲಿಂಡಾ. ನೀಲಿಕಣ್ಣುಗಳಲ್ಲಿ ಆಶ್ಚರ್ಯ ಮೂಡಿತ್ತು. "ಮದರ್ ಕರೆಯುತ್ತಿದ್ದಾರೆ..." ಅಷ್ಟೇ ಹೇಳಿ ಮೇರಿ ಸಿಸ್ಟರ್ ಹೊರಟರು. ಅವಳ… Read more…

  • ಪ್ರಥಮ ದರ್ಶನದ ಪ್ರೇಮ

    ಭಾಗೀರಥಿ ತೀರದಲ್ಲಿರುವದೊಂದು ಅತಿ ರಮಣೀಯವಾಗಿರುವ ಪ್ರದೇಶದಲ್ಲಿ ಕುಸುಮಪುರವೆಂಬ ಚಿಕ್ಕಿದಾದ ನಗರವಿತ್ತು. ಭೂಮಿಯ ಗುಣಕ್ಕಾಗಿ ಆ ಪ್ರದೇಶದಲ್ಲಿ ಬೆಳೆಯುವ ಬಕುಲ, ಚಂಪಕ, ಮಾಲತಿ, ಪುನ್ನಾಗ, ಗುಲಾಬೆ, ಸೇವಂತಿ ಮುಂತಾದ… Read more…

cheap jordans|wholesale air max|wholesale jordans|wholesale jewelry|wholesale jerseys