ನಟ್ಟಿರುಳ ಕರಿಮುಗಿಲ ನೀರ್-ತುಂಬಿಗಳ ನಡುವೆ
ಹುಣ್ಣಿಮೆಯ ಕಣ್ಣ ತೆರೆದಿದೆ. ತಾರೆ ಬಂದಿವೆ
ಬಾನ ಬೀದಿಗೆ. ಅತ್ತ ಹಿಡಿದ ಸೋನೆಯ ಶ್ರುತಿಗೆ
ಗಾಳಿಯೇ ಹಾಡುತಿದೆ. ಇತ್ತ ಈ ಮನೆಯೊಳಗೆ
ಪುಟ್ಟ ಮಗುವೊಂದು ಮಂಚದ ಬಳಿಯ ತೊಟ್ಟಿಲಲಿ
ಕಣ್ಣರ್ಧ ಮುಚ್ಚಿ ಮಲಗಿದೆ, ಅದೂ ಬರಿಮೈಲಿ !
ನಿದ್ದೆಗಣ್ಣಿನಲೆ ಪಕ್ಕದ ತಾಯಿ ಕೈ ನೀಡಿ
ಮತ್ತೆ ಹೊದಿಕೆಯನು ಸರಿಪಡಿಸುವಳು. ಮಗು ತಿರುಗಿ
ಹೊಡಿಕೆಯನೆ ಕಿತ್ತೆಸೆದು ಮಲಗುವುದು ಬರಿಮೈಲಿ;
ಸಣ್ಣಗಿದೆ ದೀಪ ಎಲ್ಲೋ ಒಂದು ಮೂಲೆಯಲಿ.
ಇದು ಸರಿಯೆ? ತಪ್ಪೆ ?-ಉತ್ತರವಿಲ್ಲ. ದೆಸೆ ದೆಸೆಗೆ
ಎಲ್ಲ ಮಲಗಿಹರು ಮಾತಾಡದೆಯೆ, ನೋಡದೆಯೆ.
ನಿದ್ದೆ ಎಚ್ಚರಗಳಲಿ ಪೊರೆವ ಕೈ ದುಡಿಯುತಿದೆ;
ಅದನು ಲೆಕ್ಕಿಸದೆ ಮಗು ಹೊದಿಕೆಯನು ಒದೆಯುತಿದೆ.
*****
Latest posts by ನರಸಿಂಹಸ್ವಾಮಿ ಕೆ ಎಸ್ (see all)
- ಶ್ರೀ ಕೃಷ್ಣನಂತೊಂದು ಮುಗಿಲು - January 7, 2017
- ಸಣ್ಣ ಸಂಗತಿ - September 18, 2015
- ಪಂಪನಿಗೆ - September 11, 2015