ಒಂದು ದಿನ ಕಿಟ್ಟು ಮನೆಯಲ್ಲೆ ಕೂತಿದ್ದ,
ಮನೆಬೆಕ್ಕು ಬಿರ್ಜುವಿನ ತಲೆ ಸವರುತಿದ್ದ
ತನ್ನ ಕಷ್ಟವ ನೆನೆದು ಅವನಿಗಳು ಬಂತು
“ಯಾಕಳುವೆ ಕಿಟ್ಟು?” ಅಂತ ಬಿರ್ಜು ಕೇಳ್ತು

“ಬಿರ್ಜು ನೀ ಎಷ್ಟೊಂದು ಅದೃಷ್ಟವಂತ!
ಗೊತ್ತಿಲ್ಲ ನಿನಗೆ ಸ್ಕೂಲೆಂದರೇನಂತ,
ನಾನು ದಿನವೂ ಸ್ಕೂಲಿಗ್ಹೋಗಲೇಬೇಕು.
ಮನೆಯಲ್ಲಿ ಹೋಂ ವರ್ಕ್ ಮಾಡಲೇಬೇಕು”.

ಈ ಮಾತನೊಪ್ಪದೆ ಬಿರ್ಜು ಹೀಗಂತು:

“ಕಿಟ್ಟು ನಿಂಗೊತ್ತಿಲ್ಲ ನಾ ಪಡುವ ಕಷ್ಟ,
ಯಾರು ಕೇಳುವರು ನನ್ನಂಥವರ ಇಷ್ಟ?
ನಿನಗೊ ಬಣ್ಣದ ಅಂಗಿ, ಚಡ್ಡಿ, ಗರಿಟೋಪಿ
ಕಾಚ ಕೂಡ ಇಲ್ಲ ನಾನೆಂಥ ಪಾಪಿ!”

ಬಿರ್ಜು ಮಾತಿಗೆ ತಿರುಗಿ ಹೇಳಿದನು ಕಿಟ್ಟು:

“ಅಂಗಡಿಗೆ ಹೋಗಿ ಬಾ ಅಂತಾರೆ ಅಮ್ಮ,
ಹೋಗಲ್ಲ ಅಂದರೆ ಒದಿತಾರೆ ಅಣ್ಣ;
ಆಟಕ್ಕೆ ಎಷ್ಟೂನು ಪುರಸೊತ್ತೆ ಇಲ್ಲ,
ನಿನಗೊ ಕೇಳುವರಿಲ್ಲ ಇಡಿಯ ದಿನವೆಲ್ಲ”.

ನಕ್ಕು ಹೇಳಿತು ಬಿರ್ಜು ಕಿಟ್ಟು ಕಡೆ ತಿರುಗಿ:

“ನನಗೆ ಎಲ್ಲಿದ್ದಾರೆ ಪ್ರೀತಿಸುವ ಅಮ್ಮ,
ಒದ್ದರೂ ಚಿಂತಿಲ್ಲ, ಇರಬೇಕು ಅಣ್ಣ;
ಓದಿ ನೀ ಮುಂದಕ್ಕೆ ಆಫೀಸರಾಗ್ತಿ
ನನಗೊ ಬಾಳೆಲ್ಲ ಇಲಿ ಹಿಡಿಯುವುದೆ ಪ್ರಾಪ್ತಿ!

ಈಗೇನೊ ನನ್ನ ಜೊತೆ ಆಟವಾಡ್ತೀಯ,
ನನ್ನ ಬಿರ್ಜೂ ಅಂತ ಮುದ್ದು ಮಾಡ್ತೀಯ;
ನಿನ್ನ ಹಾಸಿಗೆಯಲ್ಲೆ ಎಳೆದಪ್ಪಿಕೊಂಡು
ಮೈಯ ಸವರುತ್ತಲೇ ನಿದ್ದೆ ಮಾಡ್ತೀಯ

ಮುಂದೆ ದೊಡ್ಡವನಾಗ್ತಿ, ಇಂಗ್ಲೀಷು ಓದಿ
ಕಾರನ್ನು ನಡೆಸೊ ಸಾಹೇಬನಾಗ್ತೀಯ;
ಮನೆಗೆ ಬಂದಾಗ ನಾ ಓಡೋಡಿ ಬಂದ್ರೆ
ಅಡ್ಡ ಬರ್‍ತೀಯ ಶನಿ ಅಂತ ಒದಿತೀಯ”

ಬಿರ್ಜು ಮಾತನು ಕೇಳಿ ಅಳು ಬಂದು ಕಿಟ್ಟು
ಬಾಚಿ ಮುದ್ದಿಸಿ ನುಡಿದ “ಇಲ್ಲ ಕಣೊ ಪುಟ್ಟು,
ನಿನ್ನ ನಾ ಎಂದೂನು ಒದಿಯೋಲ್ಲ ಬಿರ್ಜು
ಕಡೆತನಕ ನನ್ನ ಜೊತೆ ಇದ್ದು ಬಿಡು ಮುದ್ದು.”
*****