ಡೊಳ್ಳೂಹೊಟ್ಟೆ ಗುಂಡನ ಮನೆ
ಭಾಳ ಹತ್ರ ಸ್ಕೂಲಿಗೆ,
ಆದರೂನು ದಿನಾ ಅವನು
ತುಂಬ ಲೇಟು ಕ್ಲಾಸಿಗೆ.

ಹಂಡೆಯಂಥ ಹೊಟ್ಟೆ ಹೊತ್ತು
ಬಲು ನಿಧಾನ ನಡೆವನು,
ಗಂಟೆಗೊಂದು ಹೆಜ್ಜೆಯಿಟ್ಟು
ಕಷ್ಟಪಟ್ಟು ಬರುವನು.

ಮಗ್ಗಿ ಬರೆಯೊ ಗುಂಡ ಅಂದ್ರೆ
ಬಗ್ಗಲಾರೆ ಎನುವನು,
ಲೆಕ್ಕ ಮಾಡೋ ಗುಂಡ ಅಂದ್ರೆ
ಬುಕ್ಕು ಇಲ್ಲ ಎನುವನು.

ನಿಮಿಷಕ್ಕೊಮ್ಮೆ ನಮ್ಮ ಗುಂಡ
ಭಾರಿ ತೇಗು ಬಿಡುವನು
ಗೊರಕೆ ಹಾಕಿ ಬೆಂಚು ಬೋರ್ಡು
ಅಲ್ಲಾಡಿಸಿ ಬಿಡುವನು!

ಜೈ ಜೈ ಗುಂಡಗೆ
ಅವನ ಹೊಟ್ಟೆ ಹಂಡೆಗೆ,
ಒಡೆದರೂನು ಎರಡಕ್ಷರ
ಸಿಗದ ಅವನ ಮಂಡೆಗೆ.
*****