ಚೇಳಿನ ಮೈ ತಾಮ್ರದ ಕಿಲುಬಿನ ಹಾಗೆ
ಕಡುಪಚ್ಚೆ.  ಏಡಿಯ ಮೈ ಶ್ರೀಮಂತೆಯ
ಉಗುರಿನ ಹಾಗೆ ನಸುಗೆಂಪು.

ಚೇಳು ಒಂದೇ ಶಿಲೆಯಿಂದ ಕೆತ್ತಿ
ಕಡೆದು ತೆಗೆದಂತಿದೆ.  ಏಡಿಯ ಕೈಕಾಲುಗಳು
ಹೊಲಿದು ಸೇರಿಸಿದಂತಿವೆ.

ಚೇಳು ಭಯೋತ್ಪಾದಕನಂತೆ ನಿಶ್ಚಿಂತೆಯಿಂದಿದೆ.
ಏಡಿ ನಿರಾಯುಧನಂತೆ ಯಾವಾಗಲೂ
ಅಂಜಿಕೊಂಡೇ ಇರುತ್ತದೆ.

ಚೇಳು ಹೇಗೆ ಮಂದರಿಯಬಲ್ಲುದೋ ಹಾಗೆ
ಹಿಂಜರಿಯುತ್ತದೆ ಕೂಡ.  ಏಡಿ ಅಡ್ಡಾದಿಡ್ಡಿ
ಓಡಿ ಅಡಗಲು ಪ್ರಯತ್ನಿಸುತ್ತದೆ.

ಆದರೆ ಚಾಣಾಕ್ಷರಾದ ಮನುಷ್ಯರು ಮಾತ್ರ
ಒಂದನ್ನು ಕೊಂಡಿ ಕಳಚಿ ತಿಪ್ಪೆಗೆಸೆಯುತ್ತಾರೆ.  ಇನ್ನೊಂದನ್ನು
ಹುಡುಕಿ ಹಿಡಿದು ಹೊಟ್ಟೆಗೆ ಕಳಿಸುತ್ತಾರೆ.
*****