Home / ಕವನ / ಕವಿತೆ / ಮುಖಾಮುಖಿ

ಮುಖಾಮುಖಿ


ಪುಷ್ಟವಾದ ಒಂದು ಬೆಕ್ಕು ನನ್ನ ಮನೆಯ
ಡ್ರಾಯಿಂಗ್ ರೂಮಿನಲ್ಲಿ ಬಂದು ನನ್ನನ್ನು ಕಂಡು
ಹಠಾತ್ತನೆ ನಿಂತಿತು.  ಅಲ್ಲಿ ಅದು ನನ್ನನ್ನು ನಿರೀಕ್ಷಿಸಿರಲಾರದು.
ಇಲ್ಲ, ಸೋಮವಾರ ಎಲ್ಲರೂ ಅವರವರ ಆಫೀಸಿಗೆ
ಹೋಗಿರುವ ಅಪರಾಹ್ನವಂತೂ ಖಂಡಿತ ಇಲ್ಲ.
ತುಸು ಅಸಮಾಧಾನದಿಂದ ನನ್ನ ಕಡೆ ನೋಡಿತು.
ನಮ್ಮ ಕಣ್ಣುಗಳು ಪರಸ್ಪರ ನಟ್ಟು ಯಾರು ಮೊದಲು
ಮುಖ ತಿರುಗಿಸುವುದು ಎಂಬ ಒಂದು ವಿಧ
ಅಘೋಷಿತ ಯುದ್ಧದಲ್ಲಿ ಇಬ್ಬರೂ ತೊಡಗಿದೆವು.
ಒಂದು ಬೆಕ್ಕಿನ ಕಣ್ಣುಗಳು ಇಷ್ಟು ನಿಶ್ಚಲವಾಗಿರುತ್ತವೆ
ಎಂದು ನನಗೆ ಗೊತ್ತಿರಲಿಲ್ಲ.


ಸೆಟೆದ ಬಾಲ, ನಿಮಿರಿದ ಕೂದಲು, ಊರಿದ ಕಾಲುಗುರು-
ಒಟ್ಟಾರೆ ಹೂಡಿದ ಬಿಲ್ಲಿನಂತಿರುವ ಬೆಕ್ಕು
ಆಕ್ರಮಿಸಿತ್ತೀಗ ನನ್ನ ಇಡೀ ದೃಷ್ಟಿ ಪರಿಧಿಯನ್ನು-
ದಾರಿತಪ್ಪಿದಂತೆ ನಾನು ಚರಿತ್ರಪೂರ್ವ ಭೂಖಂಡಗಳಲ್ಲಿ
ಬಿದ್ದಂತೆ ಅಪರಿಚಿತ ಸಮುದ್ರಗಳಲ್ಲಿ.  ಆದರೂ
ಎವೆಯಿಕ್ಕಲಿಲ್ಲ ನಾನು.  ಎವೆಯಿಕ್ಕಲಿಲ್ಲ ಬೆಕ್ಕು.
ಮನುಷ್ಯ ಮತ್ತು ಮೃಗಕ್ಕೆ ಮೂಲಭೂತವಾದ
ಯಾವದೋ ಸ್ಥಿತಿವಿಶೇಷದಲ್ಲಿ ನಿಂತಿತ್ತು ನನ್ನೆದುರು
ಬೆಕ್ಕಿಗೆ ಬೆಕ್ಕೇ ಛಲವಾಗಿ.
ಒಂದು ಬೆಕ್ಕಿನ ಕಣ್ಣುಗಳು ಇಷ್ಟು ಅನಾಥವಾಗಿರುತ್ತವೆ
ಎಂದು ನನಗೆ ಗೊತ್ತಿರಲಿಲ್ಲ.


ಕೊನೆಗೂ ಸೋತದ್ದು ಮೃಗವೆ.  ಅಥವಾ ಹಾಗೆಂದುಕೊಂಡುದು
ನಾನು.  ಆ ಸೆಟೆದ ಮೈ ಕ್ರಮೇಣ ನುಸುಲಾಗಿ
ಹೊರಟು ಹೋಯಿತು ಬೆಕ್ಕು ಬೆಕ್ಕಿನ ಗತಿಯಲ್ಲಿ.
ಹೀಗೆ ನನ್ನ ದೃಷ್ಟಿ ಒಮ್ಮೆಲೆ ಖಾಲಿಯಾದಾಗ
ಅನಿಸಿತು ನನಗೆ-ಒಪ್ಪಿಕೊಳ್ಳಬಹುದಿತ್ತು ನಾನು
ಬೆಕ್ಕಿಗೆ ಬೆಕ್ಕಿನ ಸ್ವಾಭಿಮಾನ.  ಅಷ್ಟಕ್ಕೂ ನಾನು ಗಳಿಸಿದ್ದೇನು?
ಗೆದ್ದರೆ ಗೆಲ್ಲಬೇಕು ಬಹುಬಲಿಯಂತೆ-
ಬಿಟ್ಟುಕೊಡುವುದರಿಂದ.
ಒಂದು ಬೆಕ್ಕಿನ ಕಣ್ಣುಗಳಲ್ಲಿ ಇಷ್ಟೊಂದು ವಿಷಾದವಿರುತ್ತದೆ
ಎಂದು ನನಗೆ ಗೊತ್ತಿರಲಿಲ್ಲ.
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...