Home / ಕವನ / ಕವಿತೆ / ಅವರವರ ಚಾಳಿ

ಅವರವರ ಚಾಳಿ

ಎಲ್ಲರಿಗೂ ಒಂದೊಂದು ಚಾಳಿ
ಇರುವುದಿಲ್ಲವೆ, ಹೇಳಿ.

ಹಳೆ ಆಲದ ಮರದಿಂದ ತಲೆಕೆಳಗಾಗಿ ತೂಗುವ ಬೇತಾಳನಿಗೆ
ವಿಕ್ರಮಾದಿತ್ಯನ ಹೆಗಲಮೇಲೆ ಸವಾರಿ ಮಾಡುತ್ತ
ಅಮವಾಸ್ಯೆಯ ರಾತ್ರಿಗಳಲ್ಲಿ
ಸುಮ್ಮನೇ ಅವನ ಮೌನಮುರಿಯುವ ಕಥಾವಳಿ.

ಪ್ರಶ್ನೆಗಳನ್ನು ಹಾಕುತ್ತಲೇ ಸಂದೇಹಗಳನ್ನು ಎತ್ತುತ್ತಲೇ
ಸ್ವಸ್ಥರಿಗೆ ಸದಾ ತೊಂದರೆಕೊಟ್ಟ ಸಾಕ್ರೆಟೀಸನಿಗೆ
ಮರಣಶಯ್ಯೆಯಲ್ಲೂ ನೆನಪು
ಯಾವ ದೈವಕ್ಕೊ ತಾನು ಹರಕೆಹೊತ್ತ ಕೋಳಿ.

ದೇಶಭ್ರಷ್ಟನಾಗಿ ತನ್ನ ತ್ರಿಲೋಕಗಳನ್ನು ತಾನೆ ಸೃಷ್ಟಿಸಿಕೊಂಡು
ಎಂದೋ ಕಂಡು ಮತ್ತೆ ಕಾಣದ ಹುಡುಗಿ ಸ್ವರ್ಗದಲ್ಲಿ
ಕೈಹಿಡಿದು ನಡೆಸುತ್ತಿರುವಾಗಲೂ ಡಾಂಟೆಗೆ
ತನ್ನ ದೇಶದ ಬಗ್ಗೆ ಮರುಕಳಿಸುವ ಕಳಕಳಿ.

ಒಂಟಿ ಮರಗಳಿಂದಲೂ, ಕೊಳಗಳಿಂದಲೂ, ಕೊತ್ತಳಗಳಿಂದಲೂ
ತನ್ನ ಸ್ವಂತ ಪ್ರತೀಕಗಳನ್ನು ಆವಾಹಿಸುವಾಗ ಯೇಟ್ಸನಿಗೆ
ರೈಲು ನಿಲ್ದಾಣದಲ್ಲಿ ಹೀಗೆ
ಮಾಡ್‌ಗಾನ್ ಹಿಂದೆಸೆದು ನಿಂತ ನಿಲುವಳಿ.

ಮತ್ತೆ ಈ ಅರಬೀಸಮುದ್ರ ಮತ್ತು ಪಶ್ಚಿಮಘಟ್ಟಗಳ ನಡುವೆ
ಅ-ರಾಜಕೀಯವಾಗಿ ಬೆಳೆದಿದ್ದ ನಮಗೆ
೧೯೫೬ರಿಂದೀಚೆಗೆ
ಕಾಸರಗೋಡು ಕರ್ನಾಟಕ ಪ್ರಾಂತೀಕರಣ ಚಳುವಳಿ.

ಎಲ್ಲರಿಗೂ ಅವರವರ ಚಾಳಿ
ಇರುವುದಿಲ್ಲವೆ, ಹೇಳಿ.
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...