ಕುಂಬಳೆ ಮಂಜೇಶ್ವರ ಪೆರ್ಲ ಪುತ್ತೂರು
ಬದಿಯಡ್ಕ ಕಾರಡ್ಕ ಸುಳ್ಯ ಹೀಗೆ
ಇಲ್ಲಿಗೆ ಹಲವು ಮಾರ್ಗಗಳು ಬಂದು ಸೇರಿದವು
ಮೊದಲು ಯಾರೂ ಕಡಿಯಲಿಲ್ಲ ಇವನ್ನು
ಕವಿತೆಯ ಸಾಲುಗಳಂತೆ ಹುಟ್ಟಿದವು.


ನಡೆದದ್ದೆ ಮಾರ್ಗ ಆಗ.  ಹಾಗೆ ನಡೆದೇ
ತಲಪಿದವು ಈ ಪೇಟೆಯನ್ನು ಹಳ್ಳಿಗಳಿಂದ
ಮೊಣಕಾಲೆತ್ತರಕ್ಕೆ ಎಬ್ಬಿಸಿದವು ಕೆಂಪು ಮಣ್ಣು
ಮಳೆಗೆ ತೊಳೆದುಕೊಳ್ಳುವುದಕ್ಕಷ್ಟೆ.  ಅಲ್ಲದಿದ್ದರೆ
ನೆರೆನೀರಿಗೆಲ್ಲಿಂದ ಆ ತರದ ಬಣ್ಣ?


ನಡೆದವರಿಗೆ ಮಾತ್ರ ಗೊತ್ತು ಮಾರ್ಗಗಳ ಮರ್ಮ
ಎಲ್ಲಿ ಅವು ಮಾತು ತೆಗೆಯುತ್ತವೆ ಮತ್ತು ಎಲ್ಲಿ
ಮೌನವಾಗುತ್ತವೆ ಎಂದು. ಮನುಷ್ಯ ದುಃಖದ
ಬಗ್ಗೆ ದೊಡ್ಡದಾಗಿ ಹೇಳುವ ಈಗಿನವರು
ಹಳೆಯ ಮಾರ್ಗಗಳಲ್ಲೆಂದೂ ನಡೆದಿರಲಿಕ್ಕಿಲ್ಲ.


ನಡೆದ ನೆನಪಿದೆ ನನಗೆ ಅಂಥ ಕೊರಕಲುಗಳನ್ನು
ಬರಿಗಾಲಲ್ಲಿ, ಯಾವ ವಿಷಾದವೂ ಅನಿಸದೆ.  ಮೂವತ್ತು
ವರ್ಷಗಳ ಹಿಂದೆ ಕೋಟೂರ ಚಡವಿನಲ್ಲಿ
ಒಂದು ಇದ್ದಿಲ ಬಸ್ಸು ಕಾಣಿಸಿಕೊಂಡು
ಗದ್ದೆಗಳ ಮೇಲೆ ಧೂಳು ಹಾರಿಸಿ ಹೋದ ನೆನಪೂ ಉಂಟು


ನಂತರ ಇದೆಲ್ಲ ಹೇಗೆ ಬದಲಾಯಿತೆಂದು ತಿಳಿಯದು.
ಹಳೆ ಮಾರ್ಗಗಳೀಗ ಇದ್ದಲ್ಲೆ ಬೆಳೆದಿವೆ.
ಜಲ್ಲಿ ಹಾಸಿ ದಾಮರು ಹಾಕಿದ್ದಾರೆ.  ಅನೇಕ
ಮೋಟರುಗಳು ಓಡಾಡುತ್ತಿವೆ ದಿನಕ್ಕೆ.
ದೂರವನ್ನು ಮಿನಿಟುಗಳಲ್ಲಿ ಹೇಳುತ್ತಿದ್ದಾರೆ.


ಈ ಪೇಟೆಯ ಸೆರಗಿನಲ್ಲಿ ಹಾದು ಹೋಗಿದೆ
ಒಂದು ರಾಷ್ಟ್ರೀಯ ಹೆದ್ದಾರಿ.  ನಾವೂ ಸೇರಿದ್ದೇವೆ
ದೇಶದ ಸಾರಿಗೆ ವ್ಯವಸ್ಥೆಯಲ್ಲಿ.  ಆದರೂ
ಓಡುತ್ತಿದೆ ಹಳೆ ಮಾರ್ಗಗಳ ಬೆನ್ನು ಹತ್ತಿ ಮನಸ್ಸು
ಈಗಿಲ್ಲದ ಕಾಲಸಪ್ಪಳಗಳನ್ನು ಕೇಳಲು.
*****