ಹರಿಯುವ ನೀರಿನ ತರ ಈ ಬಾಳು
ಸರಿದು ಹೋಯಿತೇ!
ನಾರಿಯಾಗಿ ನಾ ಪಡೆದದ್ದೆಲ್ಲಾ
ವ್ಯರ್ಥವಾಯಿತೇ!
ಒಂದೆ ಗಳಿಗೆ ಕಣ್ಣೀರ ತೇವಕೆ
ಹಮ್ಮು ಆರಿತೇ,
ನೋವಿನ ದನಿ ವಸಂತನ ಮುಖದ
ಗೆಲುವ ಅಳಿಸಿತೇ!

ಕಂಬನಿ ಸೂಸುವ ಇಂಥ ಚೈತ್ರನ
ಕಾಣಲಿಲ್ಲ ಎಂದೂ
ಅಗಲಿದ ವ್ಯಥೆಗೆ ಬಣ್ಣ ಬಲಿದಿದೆ
ಕೆಂಪು ಚಿಗುರು ಬಂದು

ಉರಿವೈಶಾಖದ ಹಾಗೆ ಹಿಂದೆ
ಸುಡುತಲಿತ್ತು ಬಾಳು
ಆಷಾಢದ ಆಗಮನದ ಸನ್ನೆಗೆ
ಆರಿಹೋಯ್ತು ಗೋಳು

ಮನದ ಬಾಗಿಲಲಿ ಮಲ್ಲಿಗೆ ಬಳ್ಳಿ
ನಕ್ಕಿತು ಹಸಿರಲೆ ತಾಳಿ
ಹಗಲು ಇರುಳೂ ರೆಪ್ಪೆ ಬಡಿಯದೆ
ಕಾದಿಹೆ ಯಾರದೊ ದಾರಿ

***

ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್
Latest posts by ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್ (see all)