‘ಲಬ್‌ಡಬ್ ಲಬ್‌ಡಬ್’ ಎನ್ನದೆ ಹೋದರು
ನನ್ನಯ ಈ ಹೃದಯ
ಕನ್ನಡ ಕನ್ನಡ ಎನ್ನತಲಿರುವುದು
ಕೇಳೋ ಓ ಗೆಳೆಯ
ಎದೆ ಸೀಳಿದರೂ ಅಕ್ಷರ ನಾಲ್ಕು
ನನ್ನಲಿ ಇಲ್ವಂತೆ
ಆದರೆ ಏನು? ಮೂರಕ್ಷರದ
ಕನ್ನಡ ಇಹುದಂತೆ!
ನನ್ನಯ ರಕ್ತದಿ ಹೀಮೊಗ್ಲೋಬಿನ್
ಕೊರತೆಯು ಉಂಟಂತೆ
ಆದರೆ ಏನು? ಕನ್ನಡ ಶಕ್ತಿ
ಅಂಶವು ಹೆಚ್ಚಂತೆ!
ರುಚಿಯನು ಅರಿಯದು ನನ್ನೀ ನಾಲಗೆ
ಕಾರಣ ಜ್ವರವಂತೆ
ಕರ್ನಾಟಕದ ಕಾವೇರೀ ಜಲ
ಇದಕೆ ಹೊರತಂತೆ!
ಜೀವನ ಪೂರ ಈ ಜಗವನ್ನೇ
ನಾ ಸುತ್ತುವೆನಂತೆ
ಆದರೆ ಕಡೆಗೆ ಪುಣ್ಯದ ಮರಣ
ತಾಯ್ನೆಲದಲಿ ಅಚಿತೆ!
*****



















