ಎಂಥದೆ ಇರಲಿ ಯಾವ ಮದ್ದಿಗೂ
ಬಗ್ಗದ ರೋಗವಿದು
ಯಾರೇ ಇರಲಿ ಎಂಥ ವೈದ್ಯಗೂ
ಸಗ್ಗದ ರೋಗವಿದು

ಹೊರಗಿನ ಔಷಧ ಹಾಯಲಾರದ
ಮನಸಿನ ಜಾಡು ಇದು
ಯಾವ ಪಂಡಿತಗು ಆಳೆಯಲು ಬಾರದ
ಕನಸಿನ ಕೇಡು ಇದು,
ರೋಗಿಗೆ ಮಾತ್ರ ಗೊತ್ತಿರುವಂಥ
ಭಾವದ ಬೇನೆ ಇದು
ರೋಗಿಗೆ ಮಾತ್ರವೆ ಹೇಳಲು ಬರುವ
ಮದ್ದಿಗೆ ಮಾಯುವುದು

ನಲ್ಲೆಯ ನೋವಿಗೆ ನಲ್ಲನೆ ವೈದ್ಯ
ಬೇರೆ ಯಾವ ಮದ್ದು?
ನನ್ನ ನೋವಿಗೆ ಕ್ಳಷ್ಣನೆ ವ್ಶೆದ್ಯ
ನನ್ನೆದೆಯನು ಕದ್ದು
ಎಲ್ಲೊ ಹೋಗಿರುವ ತನ್ನಿರಿ ಅವನ
ಮಾಯುವುದೀ ಗಾಯ,
ಬಂದನೊ ಗಿರಿಧರ ಎದುರಿಗೆ – ಕೂಡಲೆ
ಎಲ್ಲ ರೋಗ ಮಾಯ!

*****