ಕೃಷ್ಣ ಬಂದನೆ ಸಖೀ ನೋಡು ಹೊರಗೆ
ಶುಭ ಶಕುನವಾಗುತಿದೆ ಎಲ್ಲ ಕಡೆಗೆ!

ಶ್ರಾವಣದ ಮೋಡ ಸುರಿಯುತ್ತಿವೆ
ಕಾದಿರುವ ಭೂಮಿಗೆ ನೀರಧಾರೆ,
ಬಾನು ಗುಡುಗಿನ ತಬಲ ನುಡಿಸುತ್ತಿದೆ
ನಡುನಡುವೆ ಹೊಂಚುತಿದೆ ಮಿಂಚು ಬೇರೆ,

ಕೋಗಿಲೆ ಮಯೂರ ಕೇಕೆ ಹಾಕಿ
ಆಗಸದ ಪ್ರೀತಿಗೆ ಮಣಿಯುತ್ತಿವೆ;
ಮುಖವ ಸಂಭ್ರಮದಿಂದ ಮೇಲೆ ಎತ್ತಿ
ಚಾತಕವು ಮಳೆ ಹನಿಯ ಕುಡಿಯುತ್ತಿದೆ

ತಂಪು ಮಂದಾನಿಲ ಬಂತು ಬೀಸಿ
ಚಂದನದ ಕಂಪನ್ನು ಸುತ್ತ ಸೂಸಿ;
ಹರಿಯು ಬಂದೇ ಬರುವ ಈಗಲೇನೇ
ತೋರು ಸಖಿ ಗಿರಿಧರಗೆ ನನ್ನ ನೀನೇ.

*****