ನಲ್ಲೆ ನಮ್ಮ ಪ್ರೀತಿಗೇಕೆ
ಇಂಥ ಪಾಡು ಈ ನೆಲೆ?
ಆಯಿತೇಕೆ ಬಾಳು ಹೀಗೆ
ಗಾಳಿಗೆದ್ದ ತರಗೆಲೆ?
ನೀ ಉತ್ತರ ನಾ ದಕ್ಷಿಣ
ಸೇರಲಾರದಂತರ,
ತಾಳಿ ಹೇಗೆ ಬಾಳಿಯೇವು
ವಿರಹವನು ನಿರಂತರ?
ಇಲ್ಲಿ ಒಲುಮೆಗೆಲ್ಲಿ ಬೆಲೆ
ಕಲೆಯಗೊಡದ ಜಗವಿದು,
ಕನಸೊಂದೇ ದಾರಿ ನಮಗೆ
ಮನಸಿನಲ್ಲೆ ಮಿಲನವು.
ಕೂಡದಿದ್ದರೇನು ಕಾಯ
ಬಾಳು ಬರಿಯ ದೇಹವೇ?
ಜೀವ ಹಾಡಿ ಕುಣಿಯುತಿದೆ
ಸದಾ ನಿನ್ನ ಸುತ್ತಲೇ
*****
ಪುಸ್ತಕ: ನಿನಗಾಗೇ ಈ ಹಾಡುಗಳು
ಲಕ್ಷ್ಮೀನಾರಾಯಣ ಭಟ್ಟರು ಕನ್ನಡ ಕಾವ್ಯದ ಜೀವಂತಿಕೆಯನ್ನು ಹೆಚ್ಚಿಸುತ್ತ ಆಧುನಿಕ ಕನ್ನಡ ಕಾವ್ಯವನ್ನು ಬೆಳೆಸುತ್ತ ಬಂದಿರುವ ಪ್ರಮುಖ ಕವಿಗಳಲ್ಲಿ ಒಬ್ಬರು. ಅವರ ಅನುವಾದಗಳು ಕನ್ನಡ ಕಾವ್ಯಕ್ಕೆ ಕೊಟ್ಟ ಬೆಲೆಬಾಳುವ ಉಡುಗೊರೆಗಳು ಮಾತ್ರವಾಗಿರದೆ ಸ್ವಂತಕ್ಕೆ ಪಡೆದ ರಕ್ತದಾನವೂ ಆಗಿದೆ. ಸ್ವಂತ ಪ್ರತಿಭೆ, ಶ್ರೇಷ್ಠಕವಿಗಳ ಆಪ್ತ ಅಧ್ಯಯನ ಎರಡೂ ಅವರನ್ನೂ ಎತ್ತರಕ್ಕೆ ಹತ್ತಿಸಿವೆ. ಅಧ್ಯಯನ, ಚಿಂತನೆ ಇವು ಅವರಲ್ಲಿ ಹಾಸು ಹೊಕ್ಕಾಗಿ ಒಂದನ್ನು ಮತ್ತೊಂದು ಬಲಗೊಳಿಸುತ್ತ ಬಂದಿವೆ.