ಒಬ್ಬ ತನ್ನ ಮಿತ್ರನನ್ನು ಬಹಳ ದಿನಗಳ ನಂತರ ಸಂಧಿಸಿದ. ಅವನಿಗೆ ಆಶ್ಚರ್ಯವೆನಿಸಿದ್ದು ಎಂದರೆ ಅವನ ಮೀಸೆ. ಕಿವಿಗಳವರೆಗೂ ದಟ್ಟವಾಗಿ ಬೆಳೆದ ಮೀಸೆಯ ಮೇಲೆ ಗೆಳೆಯನ ಅಭಿಮಾನ ನೋಡಿ ಇವನಿಗೆ ಸೋಜಿಗವೆನಿಸಿತು.
“ಏನಪ್ಪ, ಇಷ್ಟು ದೊಡ್ಡ ಮೀಸೆ? ಯಾವ ಕಾರ್ಯಕ್ಕಾಗಿ, ಯಾವ ಸಾಧನೆಗಾಗಿ?” ಎಂದ.
“ಅದು ನನ್ನ ಮರ್ಯಾದೆ, ಪ್ರತಿಷ್ಟತೆಯ ಪ್ರತೀಕ, ನನ್ನ ಬಾಳಿನ ಸಂತಸ. ನನ್ನ ಚೇತನ, ನನ್ನ ಕನಸು. ನನ್ನ ಸರ್ವಸ್ವ. ಅದು ನನ್ನ ಆತ್ಮ ವಿಶ್ವಾಸ ನನ್ನ ನಂಬಿಕೆಯ ನಾರಾಯಣ”- ಎಂದ.
“ಸಾಕಯ್ಯ, ನಿನ್ನ ಸುಂದರ ಮೀಸೆಯ ಒಂದು ಕೂದಲನ್ನು ನನಗೆ ಉಡುಗೊರೆಯಾಗಿ ಕೊಡು” ಎಂದು ಕೇಳಿದ.
“ಖಂಡಿತ ಇಲ್ಲ. ಅಂತಹ ತ್ಯಾಗ ಮಾಡಲಾರೆ. ಅದು ನನ್ನ ಮುಖದ ಶೋಭೆ. ಒಂದೆಳೆ ಕಡಿಮೆಯಾದರೂ ನನ್ನ ಮರ್ಯಾದೆಗೆ ಭಂಗ ಬರುತ್ತದೆ. ಬೇಕಾದರೆ ನನ್ನ ತಲೆ ಕೂದಲೊಂದನ್ನು ಕೊಡುವೆ” ಎಂದು ತಲೆಯನ್ನು ಮುಂದೆ ತಂದ.
“ನೋಡಿದರೆ ಬಟ್ಟತಲೆ! ಒಂದು ಕೂದಲೂ ಇಲ್ಲ. ಇದೇನಯ್ಯಾ? ಬಟ್ಟ ತಲೆಯಿಂದ ಕೂದಲೆಳೆ ಕೊಡುವೆ ಎನ್ನುತ್ತಿರುವೆಯಲ್ಲ – ಇದು ಮೋಸ! ಬರಿ ಮೋಸ” ಎಂದ.
“ಇಲ್ಲ ನೀನು ಒಂದು ಜನ್ಮ ಕಾಯಿ, ನೀ ಕೇಳಿದಂತೆ ಒಂದಳೆ ಅಲ್ಲ, ನೂರು ಎಳೆ ಕೊಡುವೆ, ಇದು ಮೋಸವಲ್ಲ. ನಿಜ”- ಎಂದ. ನೀನು ಕೇಳಿದ ಮೀಸೆ ನೋಡು ಅದು ಬೇಕಾದರೆ ಮೋಸ, ಮುಖವಾಡ, ಕೃತಕ. ಅದು ಬರಿ ದ್ಯೋತಕ, ಪ್ರೇರಕ. ನನ್ನ ಮರ್ಯಾದೆಗೆ ತಾರಕ.” ಎಂದು ಮೀಸೆ ತೆಗೆದು ತೋರಿಸಿದ. ಗೆಳೆಯನಿಗೆ ಯಾವುದು ದಿಟ, ಯಾವುದು ಸುಳ್ಳು ಎನ್ನುವ ಅರಿವಾದಾಗ, ಬಂಗರದಂತೆ ಅವನ ತಲೆ ಸುತ್ತಿತು.
*****

















