Home / ಲೇಖನ / ಪತ್ರ / ಪೂರ‍್ಣಿಮ – ೧೦

ಪೂರ‍್ಣಿಮ – ೧೦

ಪ್ರಿಯ ಸಖಿ,

ಮುಂಜಾನೆ ಒಂದು ಪತ್ರವನ್ನು ಬರೆದೆನು. ಆದರೆ ಇಂದು ಸಂಜೆಯೇ ಈ ಪತ್ರ ಪುನಃ ಬರೆಯುತ್ತಿರುವನು. ಅದೂ ಪ್ರಿಯಸಖಿ ಎಂದು ಸಂಬೋಧಿಸಿ ಈ ಸಂಬೋಧನೆಯು ಬಹು ಅಮೂಲ್ಯ ಪವಿತ್ರ ಪ್ರೇಮದಿಂದ ಹೊರಹೊರಟಿದೆ. ‘ಗೀತಗೋವಿಂದ’ ಚಿತ್ರನೋಡಿದಾಗ ಜಯದೇವ ಪದ್ಮಾವತಿಯರನ್ನು ಕಂಡೆ. ಇದೊಂದು ಹಿಂದಿ ಚಿತ್ರ. ಲೀಲಾದೇಸಾಯಿ, ಪ್ರೇಮ ಆದಿಬ ಇವರು ಮುಖ್ಯ ಪಾತ್ರ ವಹಿಸಿರುವರು. ಇದು ಜಯದೇವ ಕವಿಯ ಜೀವನ ಚರಿತ್ರೆ. ಬಹುಶಃ ನೀನು ಇದನ್ನು ಭಕ್ತವಿಜಯದಲ್ಲಿ ಓದಿರಬಹುದು. ಜಯದೇವನು ಪದ್ಮಾವತಿಯ ಗೆಜ್ಜೆಯನಾದದಿಂದ ಕವಿಯಾದ. ಜಯದೇವನು ಉದ್ಧಾಮಕವಿಯಾದನು. ‘ಗೀತಗೋವಿಂದ’ ಎಂಬ ಗ್ರಂಥವನ್ನು ಬರೆದನು, ರಾಧೆಯನ್ನು ಒಂದು ಸಾರಿ ಕೃಷ್ಣ ಗೀತ ಹಾಡು ಎಂದು ಹೇಳಿ ಬಲವಂತ ಪಡಿಸುವನು. ರಾಧೆಯು ‘ಗೋವಿಂದ’ ಎನ್ನುವಳು, ಸನ್ನಿವೇಶದ ಕಲ್ಪನೆಯಿಂದ, ಕವಿಯು ಗೀತಗೋವಿಂದವನ್ನು ರಚಿಸಿರುವನು.

ತನ್ನಲ್ಲಿ ಕಾವ್ಯದ ಹೊನಲನ್ನು ಹರಿಸಿ, ತನ್ನ ಜೀವನವನ್ನು ರಸಮಯವನ್ನಾಗಿ ಮಾಡಿದ ಚೇತನದ ಸಂಗಾತಿಯನ್ನು ಜಯದೇವನು ‘ಸಖಿ’ ಎಂದು ಕರೆಯುವ ಶಬ್ದ ಅದೆಷ್ಟು ಭಾವೋದ್ರೇಕವಾಗಿದೆ. “ಜೊತೆಯಲ್ಲಿ ಬಾಳೋಣ, ಜೊತೆಯಾಗಿ ಉಳಿಯೋಣ, ಜೊತೆಯಾಗಿಯೇ ಅಳಿಯೋಣ” ಎಂಬ ಮೂರು ಮಾತುಗಳು ಇಬ್ಬರ ಬಾಯಿಂದಲೂ ಒಂದೇ ಸಾರಿ ಬಂದಾಗ ಆ ದೃಶ್ಯ ನನ್ನ ಕಣ್ಣಲ್ಲಿ ನೀರನ್ನು ಸುರಿಸಿತು. ನನಗೂ ಅಂತಹ ಹಂಬಲ ಇಲ್ಲವೇ? ಸಾಯುವವರೆಗೆ ಜಯದೇವ ಪದ್ಮಾವತಿಯವರು ಕ್ಷಣವೂ ಅಗಲಿರಲಿಲ್ಲ. ಜೀವಿತೇಶನ ಕೈಯ ವೀಣೆಯಾಗಿ, ಜೀವದುಸಿರಾಗಿ, ಆತನ ಆಧ್ಯಾತ್ಮಿಕವಾಗಿ, ಆತನ ಇಹಪರವಾಗಿ, ಆತನ ದೇವಿಯಾಗಿ, ದಾಸಿಯಾಗಿ, ಭಕ್ತಿಯಾಗಿ ಪದ್ಮಾವತಿ ಬಾಳಿ ಅಳಿದಳು. ಜಯದೇವನಷ್ಟೇ ನನಗೂ ರಸಾಭಿಲಾಷೆ ಇದೆ. ಆದರೆ ಅದಿಂದು ನೀರಸವಾಗಿದೆ. ಏಕೆ೦ದರೆ ಸ್ಫೂರ್ತಿದೇವಿ ಮೂರು ನೂರು ಮೈಲ ದೂರದಲ್ಲಿರುವಳು, ಬಾಳದೋಣಿಯ ಬಿರುಗಾಳಿ ಇಬ್ಬರನ್ನೂ ಬೆದರಿಸಿರುವುದು. ನಾಳಿನಗತಿಯೇನೆಂಬ ಕಳವಳಕ್ಕೆ ಈಡಾಗಿರುವೆವು. ಸುಖದಾಶೆಯಿಲ್ಲದಿದ್ದರೂ ಕಷ್ಟಕ್ಕೆ ಬಹು ಬಹು ಹೆದರಿ ಹಿಂಜರಿದು ಬಾಳನೂಕುತ್ತಿರುವಾಕೆ ನೀನು.

ವಿರಹಿಯಾಗಿ ವಿಹರಿಸುತ್ತಿರುವ ನಿನ್ನನ್ನು ಮತ್ತು ಭಾವಜೀವನಕ್ಕೆ ಎಳೆಯಬಾರದು. ಆದರೆ ನಿನಗಾಗಿ ಮತ್ತೇನನ್ನು ಬರೆಯಲಿ?

ಒಂದೇ ಮಾತು. ಬರೆದಿರುವ ಮಾತನ್ನೇ ಮತ್ತೊಂದು ಸಾರಿ ಬರೆಯುವೆನು. “ಅಳು, ನುಂಗಿ ನಗುವೊಮ್ಮೆ ನಾನೂನೂ ನಕ್ಕೇನ” ಈ ಮಾತಿನ ಅರ್ಥವನ್ನು ಮಥಿಸು, ಬರುವ ಕಷ್ಟಗಳನ್ನೆಲ್ಲಾ ಇಷ್ಟು ಪೂರ್ತಿಯಾಗಿ ಸಹಿಸುವುದು ಶಿಷ್ಟರ ಲಕ್ಷಣ. ಆದ್ದರಿಂದ ಅಂಜುವುದು ಬೇಡ; ಅಳುಕುವುದು ಬೇಡ, ಬಳಕುವುದು ಬೇಡ, ಬಾಗುವುದು ಬೇಡ. ಸುಖವನ್ನು ಸ್ವಾಗತಿಸುವ ಮುಗಳುನಗೆಯೇ ಕಷ್ಟವನ್ನು ಸ್ವಾಗತಿಸಲಿ. ಇದು ನನ್ನ ಜೀವನದ ಧರ್ಮ; ಹಾಗೂ ನನ್ನ ಕಾಯಕದ ಮರ್ಮ, ಇದನ್ನರಿತ ನೀನು ನನ್ನ ಜೀವನದ ಜೇನಹನಿಯಾಗಿ ಅನವರತ ಕಟ್ಟಾಗಿ ಮಧುರವಾಗಿರು.

ನನ್ನ ಸಖಿ, ರಾಘುಗೆ ಎಷ್ಟು ವರುಷ? ಎಷ್ಟನೇ ವರುಷದ ಜಯಂತಿ? ಇದು ಇದೂ ನೆನಪಿಲ್ಲ ಅವನ ತಂದೆಗೆ. ಇಂದವನ ಜಯಂತಿ, ಅವನು ನಗು ನಗುತ್ತ ಹಸೆಯ ಮೇಲೆ ಕುಳಿತುಕೊಳ್ಳುವುದನ್ನು ನೋಡುವ ಭಾಗ್ಯ ನನಗೆ ಇಲ್ಲ. ಆಕಳಿಕೆ ಬಾಯತುಂಬಿ, ಬಾಯಿ ಹರಿಯುವಷ್ಟು ಬರುತ್ತಿದೆ. ಅವನು ಅಣ್ಣನನ್ನು ಜ್ಞಾಪಿಸಿಕೊಳ್ಳುತ್ತಿರಬಹುದು. ಇಲ್ಲಿಂದಲೇ ಹರಸುವ ಭಾಗ್ಯ ಮಾತ್ರ ನನಗಿದೆ. ಹೆಚ್ಚಿನದು ಈಗಿಲ್ಲ. ರಾಘವೇಂದ್ರರಿತ್ತ ರಾಘವನ ಕ್ಷೇಮ ಶ್ರೀ ಗುರುರಾಯರಿಗೆ ಸೇರಿದುದು. ನಿಮಿತ್ತ ಮಾತ್ರ ತಂದೆ ತಾಯಂದಿರಾದ ನಮಗೇಕೆ ಅದರ ಹಂಬಲ? ಸರ್ವಶುಭೋದಯವಾಗಲಿ. ಅವನ ಬಾಳು, ಅವನ ಶೀಲ ಇವೆಲ್ಲ ಬೆಳಗಲಿ ಎಂದು ನಾವೀ‍ರ‍್ವರೂ ಅಘಟಿತ ಘಟನಾ ಸಾಮರ್ಥ್ಯವುಳ್ಳ ನಮ್ಮ ಗುರುದೇವನಲ್ಲಿ ಪ್ರಾರ್ಥಿಸೋಣ. ಹುಟ್ಟಿದ ಹಬ್ಬದ ನೆನಪಿಲ್ಲದೆ ಬೆಳೆಯುತ್ತಿರುವ ನನ್ನ ಮುದ್ದು ಲೀಲೆಗೂ ತುಂಟರ ಬಂಟವಾಗುತ್ತಿರುವ ಉದಯ ಇವರಿಗೂ ಈ ಸಮಯದಲ್ಲಿ ಶುಭಾಶೀರಾದಗಳು.

“ಸಖಿ” ಇದನ್ನೆಷ್ಟು ಸಲ ಕರೆಯಲಿ? ಜೀವನದ ಸಖಿ. ಭಾವನೆಯ ಸಖಿ, ಸುಖ ದುಃಖಗಳ ಸಖಿ; ರಾಧೆಯನ್ನು ಕೃಷ್ಣ ಸಖಿಯೆಂದು ಕರೆದನು. ಗೀತಗೋವಿಂದನನ್ನು ಜಯದೇವ ಕವಿಯು ಬರೆದ ಪುಣ್ಯವೂ ಕೀರ್ತಿಯೂ ಅವನ ಜೀವಸಖಿ ಪದ್ಮಾವತಿ ದೇವಿಗೆ ಸಲ್ಲಿರುವುದು. ಪೂರ‍್ಣೀ,ಪದ್ಮಾವತಿ ದೇವಿಯನ್ನು ಕಳ್ಳರು ಹಿಡಿದುಕೊಂಡು ಹೋಗಿ ಬಿಡುವರು; ಜಯದೇವನ ಕಡಿದು ಬಿಡುವರು. ಇಬ್ಬರೂ ಒಮ್ಮೆಲೆ ವಿರಹಿಯಾಗಿ ಬಿಡುವರು. ಜಯದೇವ ಕವಿ ಸಹಜ ಕವಿಯಾದರೂ ಪದ್ಮಾವತಿಯ ಇನಿದಾದ ಇಂಚರವಿಲ್ಲದೆ, ಆಕೆಯ ಮಧುರ ಕಂಠದ ಇಂಪಿಲ್ಲದೆ ಆಕೆಯ ಕಾಲಿನ ಗೆಜ್ಜೆಯ ಝಣಾತ್ಕಾರವಿಲ್ಲದೆ, ಒಂದು ಮಾತನ್ನೂ ಬರೆಯಲಾರದೆ ಹೋದ! ರಾಧಾಕೃಷ್ಣನನ್ನು ಒಂದು ಬಾರಿ ಆನಂದದಿಂದ ಪೂಜಿಸದೆ ಹೋದನು. ಕಳ್ಳರಿಂದ ತಪ್ಪಿಸಿಕೊಂಡು ಪದ್ಮಳು ಬಂದೊಡನೆಯೇ ಜಯದೇವನ ಕಣ್ಣ ಬೊಗಸೆಗಣ್ಣಾದವು. ಮೊಂಡು ಕೈಯಿಂದಲೇ ಪದ್ಮನ ಮುಂಗುರಳನ್ನು ನೇವರಿಸಹತ್ತಿದನು. ಪದ್ಮ ಓಲೆಯ ಗರಿಯನ್ನು ಹಿಡಿದು ಜಯದೇವನಿಗೆ ಕವನ ಕಟ್ಟು ಎಂದು ಹೇಳುವಳು. ಆಗಲೂ ಕವಿದೇವನಿಗೆ ಸ್ಫೂರ್ತಿ ಬರಲಿಲ್ಲ. ಮೇಲೆದ್ದಳು, ಪದ್ಮ ಒಂದು ಸಾರಿ ಗಿಡದ ನೆರಳಿನಲ್ಲಿ ನಿಂತು ಮುರಳಿಯನ್ನಣಕಿಸುವ ಧ್ವನಿಯನ್ನು ತುಟಿಯಿಂದ ಹೊರನೂಕಿದಳು.

ಆಕೆಯ ಭಾವದ ಬೆಡಗು, ಕಂಠದ ನಾದ, ರೂಪಿನ ರಾಶಿ, ಇವನ್ನು ಕವಿ ನೋಡುತ್ತಲೇ ರಾಧೆಯ ನೆನಪುಬಂದಿತು. ಸ್ಫೂರ್ತಿ ಉಕ್ಕೇರಿತು. ಅವನ ಹಾಡಿಗೆ ತನ್ನ ರಾಗವನ್ನು ಸೇರಿಸಿ ಪದ್ಮ ಬರೆದು ಕೊಳ್ಳಹತ್ತಿದ್ದಳು. ನನಗೂ ಕೈ ಮುರಿದು ಹೋಗಿದ್ದರೆ, ನನ್ನ ಸಖಿ ನೀನು ಹಾಗೆಯೇ ನಾನು ಹಾಡಿದ ಕವನಗಳನ್ನು ಬರೆದುಕೊಳ್ಳುತ್ತಿದೆಯಲ್ಲವೆ? ಹಾಳು ಕೈ ಮುರಿಯಲಿಲ್ಲ. ಕೈ ಮುರಿದರೂ ಜಯದೇವ ಕವಿಯಂತಾದರೆ ಸಾಕು. ಇಲ್ಲದಿದ್ದರೆ ಬೇಡಪ್ಪಾ ಬೇಡ, ಪ್ರೇಮ ಭಕ್ತಿ ಎಂಬುದರ ನಿರೂಪಣೆ ಅದೆಷ್ಟು ಭಾವನಾಮಯವಾಗಿದೆ? ಸತಿಪತಿಗಳ ಪ್ರೇಮದಲ್ಲಿ, ಭಕ್ತಿಯಲ್ಲಿ, ಮುಕ್ತಿ ಇದೆ, ಅನುರಾಗವಿದೆ, ಜಗತ್ತಿನ ಕಲ್ಯಾಣವಿದೆ. ಗೀತ ಗೋವಿಂದ ಇದರ ಸಜೀವ ಸಾಕ್ಷಿ. ಜಯದೇವ ಕಲಿಯುಗದವನೇ. ಅವನಂತೆ, ಅವನ ಸಖಿ ಪದ್ಮಳಂತೆ ನಾನು ನಿನೇಕಾಗಬಾರದು? ಇದನ್ನು ಗುರುದೇವನಲ್ಲಿ ಪ್ರಾರ್ಥಿಸು. ಇಂದಿನ ಜನ್ಮದಲ್ಲಿ ಸಾಧಿಸದಿದ್ದರೂ ಮುಂದಿನ ಜನ್ಮದಲ್ಲಾದರು ಅ೦ತಹ ಭಾವಜೀವಿಗಳಾಗೋಣ, ಭಕ್ತಿಜೀವಿಗಳಾಗೋಣ, ಪ್ರೇಮಜೀವಿಗಳಾಗೋಣ. ಸತ್ಯ ಪದ್ಮಳನ್ನು ಬದುಕಿಸಿಕೊಂಡ ಗೀತಗೋವಿಂದವನ್ನು ರಚಿಸೋಣ. ಈಗ ನಾನು ಬರೆದಿರುವ ಬಾಲಗೋಪಾಲ ಎಂಬ ಕವನಕ್ಕೆ ರಾಘವೇಂದ್ರ ಗುರುವರೇಣ್ಯರ ಅಂಕಿತವಾದರೆ ಅದೂ ಗೀತಗೋವಿಂದದಷ್ಟೇ ಪ್ರಖ್ಯಾತಿಯಾಗುವುದೆಂಬುದು ನನ್ನಾಸೆ; ನಗಬೇಡ. ಆ ಗುರುರಾಯನು ಮನಸ್ಸು ಮಾಡಿದರೆ ಇದು ಎಷ್ಟರದು?

ಸತಿಯ ಹೆಗಲ ಮೇಲೆ ಕೈ ಹಾಕಿದ ಕೂಡಲೆ ಪ್ರೇಮದ ಬುಗ್ಗೆಯು ಭಕ್ತಿಯ ಬಾಂಢಾರವು ಕೈವಶವಾಗುವುದೆನ್ನುವಾಗ, ಅಂತಹ ಸತಿಯಿಂದ ಕಾಮದೂಟವನ್ನು ಮಾತ್ರ ಪಡೆಯುತ್ತಿರುವ ನಾವು ಪತಿತರಲ್ಲವೇನು? ಜಯದೇವ ಪದ್ಮಾವತಿಯರ ಚಿತ್ರ ನನಗೆ ಹಗಲಿರುಳೂ ಕಾಣಿಸುತ್ತಿರುವುದು. ಕುಳಿತರೆ, ನಿಂತರೆ, ಮಲಗಿದರೆ ಅವರೇ. ನಾನು ಜಯದೇವ, ನೀನು ಪದ್ಮಳಾಗಿ ನನ್ನ ಕವನವೆಂಬ ವೀಣೆಯ ಬುರುಡೆಗೆ ನೀನು ತಂತಿಯಾಗುವೆ.

ಇತಿ ನಿನ್ನ ಭಾವನೇಶ್ವರ
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...